
ವರದಿ - ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜು.06): ಮುಂಗಾರು ಆರಂಭವಾದ್ರೆ ರೈತರಿಗೆ ಅದೇನೋ ಒಂಥರಾ ಖುಷಿ. ಯಾಕಂದ್ರೆ ಮಳೆ ಶುರುವಾಗೋದಕ್ಕೂ ಮುನ್ನ ಭೂಮಿಯನ್ನು ಮತ್ತು ಎತ್ತುಗಳನ್ನು ಬಿತ್ತನೆ ಮಾಡಲು ಅಣಿಯಾಗಿಸಬೇಕಾಗುತ್ತದೆ. ಹಾಗಾಗಿಯೇ ಮೊದಲಿಗೆ ಭೂಮಿಯನ್ನು ಹದಗೊಳಿಸಲು ಮುಂದಾಗುವ ರೈತರು ದಿನಕ್ಕೆ ಅಬ್ಬಬ್ಬ ಎಂದ್ರೆ 4ರಿಂದ 5ಎಕರೆ ಭೂಮಿಯನ್ನು ಉಳುಮೆ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಯುವ ರೈತ ತನ್ನ ಎತ್ತುಗಳೊಂದಿಗೆ ಒಂದೇ ದಿನದಲ್ಲಿ 21ಎಕರೆ ಭೂಮಿಯನ್ನು ಉಳುಮೆ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ..
ಯುವ ರೈತನ ಹುಬ್ಬೇರಿಸುವ ಸಾಧನೆ..! ಉತ್ತರ ಕರ್ನಾಟಕದಲ್ಲಿ ಮುಂಗಾರು ಕೈಕೊಟ್ಟಿದ್ದು, ಬರಗಾಲ ಆವರಿಸಿದೆ. ಆದ್ರೂ ಸಹ ಆಶಾಭಾವನೆ ಇಟ್ಟುಕೊಂಡ ರೈತರು ತಮ್ಮ ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಬಿತ್ತನೆಗೆ ಹದ ಗೊಳಿಸುತ್ತಿದ್ದಾರೆ. ಅದೇ ರೀತಿ ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮದ ಯುವಕನೊಬ್ಬ ಒಂದೇ ದಿನದಲ್ಲಿ ಬರೋಬ್ಬರಿ 21 ಎಕರೆ ಭೂಮಿಯನ್ನು ಉಳುಮೆ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ. ತೊನಶ್ಯಾಳ ಗ್ರಾಮದ ಪುಂಡಲೀಕ ಉಪ್ಪಲದಿನ್ನಿ ಎಂಬ 25 ವರ್ಷದ ಯುವಕ ತಮ್ಮ ಎತ್ತುಗಳನ್ನ ಬಳಸಿ ಈ ಸಾಧನೆ ಮಾಡಿದ್ದಾನೆ. ಯುವಕನ ಸಾಧನೆ ಕಂಡು, ಎತ್ತುಗಳ ಸಾಹಸ ಕಂಡು ಜನರೆ ದಂಗಾಗಿದ್ದಾರೆ..
ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ
ಕೇವಲ 12 ಗಂಟೆಯಲ್ಲಿ 21 ಏಕರೆ ಉಳುಮೆ: ತಮ್ಮ ಎತ್ತುಗಳಿಂದ ಬೆಳಗ್ಗೆ 5ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಅಂದ್ರೆ ಕೇವಲ 12ಗಂಟೆಗಳಲ್ಲಿ 21ಎಕರೆ ಉಳುಮೆ ಮಾಡುವ ಮೂಲಕ ಇತರರು ಹುಬ್ಬೇರಿಸುವಂತೆ ಮಾಡಿದ್ದಾನೆ. ಸಾಮಾನ್ಯವಾಗಿ ಒಂದು ದಿನಕ್ಕೆ ಎತ್ತುಗಳಿಂದ 4 ರಿಂದ 5ಎಕರೆ ವರೆಗೆ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಬಹುದಾಗಿದೆ. ಆದ್ರೆ ಪುಂಡಲೀಕ ಎಂಬ ಯುವಕ ಇದರ ನಾಲ್ಕು ಪಟ್ಟು ಉಳುಮೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ.
ಯುವಕನ ಸಾಧನೆಯ ಹಿಂದೆ ರೈತ ತಂದೆ ಪ್ರೋತ್ಸಾಹ: ಸಂಗಪ್ಪ ಉಪ್ಪಲದಿನ್ನಿ ಮೊದಲಿನಿಂದಲೂ ರೈತಾಪಿ ಕೆಲವಸನ್ನೇ ಮಾಡಿಕೊಂಡು ಬಂದಿದ್ರೂ ಸಹ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉಳುಮೆ ಮಾಡಿರಲಿಲ್ಲ. ಮಗ ಪುಂಡಲೀಕ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದಾಗ ಪ್ರೋತ್ಸಾಹ ನೀಡಿದ ಇವರು ಮಗನ ಸಾಧನೆಗೆ ಕಾರಣರಾಗಿದ್ದಾರೆ. ಇನ್ನು ಸುತ್ತಮುತ್ತಲೂ ಈ ರೀತಿ ಎತ್ತುಗಳಿಂದ ರೈತರು ಸಾಧನೆ ಮಾಡುವ ವಿಚಾರ ಗೊತ್ತಾದಾಗ ಅಲ್ಲಿಗೆ ಹೋಗಿ ಸಾಹಸ ನೋಡುತ್ತಿದ್ದವರೆಲ್ಲ ಇಂದು ತೊನಶ್ಯಾಳ ಗ್ರಾಮಕ್ಕೆ ಆಗಮಿಸಿ ಈತನ ಸಾಧನೆ ಕಂಡು ಬೆರಗಾಗಿದ್ದಾರೆ.
'ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದವರು ನೀವು..' ಸಿದ್ಧುಗೆ ಎಚ್‌ಡಿಕೆ ವಾಗ್ಭಾಣ!
ಸಾಹಸಕ್ಕೆ ಹುರಿದುಂಬಿಸಿದ ಹಲಗೆ, ಚಪ್ಪಾಳೆ: ಇನ್ನು ಯುವಕ ನಿರಂತರವಾಗಿ ಉಳುಮೆ ಮಾಡುತ್ತಿರುವುದರಿಂದ ಆತನಿಗೆ ಪ್ರೋತ್ಸಾಹಿಸಲು ಹಲಗೆ ಬಾರಿಸುವುದು, ಕೇಕೇ ಹೊಡೆಯುವುದು ಮಾಡುವ ಮೂಲಕ ಆತನಿಗೆ ಹುಮ್ಮಸ್ಸು ತುಂಬಿದ್ದು ಕಂಡು ಬಂದಿತು. ಈಗಾಗಲೇ 21 ಎಕರೆ ಉಳುಮೆ ಮಾಡಿ ಸಾಧನಗೆ ಮಾಡಿರುವ ಪುಂಡಲೀಕ ಮುಂದೆಯೂ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಕೇವಲ ಒಣ ಮೇವು ಮೇಯಿಸಿ ಎತ್ತುಗಳನ್ನು ಇಷ್ಟೊಂದು ದಷ್ಠಪುಷ್ಠವನ್ನಾಗಿಸಿ ಉಳುಮೆ ಮಾಡಿದ್ದು ಹೆಮ್ಮೆಯ ವಿಚಾರವೇ ಸರಿ.