'ನಿನಗೆ ಹುಟ್ಟಿದ ಮಗ ನೋಡಲು ನಿನ್ನಂತೆ ಕಾಣುವುದಿಲ್ಲ' ಎಂದಿದ್ದಕ್ಕೆ ಮಗನನ್ನ ನದಿಗೆ ತಳ್ಳಿ ಹತ್ಯೆಗೈದ ಅಪ್ಪ!

Published : Apr 14, 2026, 03:16 PM IST
Vijayapura Mallikarjuna son death

ಸಾರಾಂಶ

ವಿಜಯಪುರದಲ್ಲಿ, ತನ್ನ ಮಗ ತನ್ನಂತೆ ಕಾಣುವುದಿಲ್ಲ ಎಂಬ ಜನರ ಮಾತಿನಿಂದ ಅನುಮಾನಗೊಂಡ ತಂದೆ, 6 ವರ್ಷದ ಮಗನನ್ನು ಮಹಾರಾಷ್ಟ್ರದ ಕೃಷ್ಣಾ ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ. ಶಾಲೆಯಲ್ಲಿ ಸೇರಿಸುವುದಾಗಿ ನಂಬಿಸಿ ಕರೆದೊಯ್ದು ಈ ಕೃತ್ಯ ಎಸಗಿದ್ದು, ಪತ್ನಿಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯಪುರ (ಏ.14): ‘ತನಗೆ ಹುಟ್ಟಿದ ಮಗ ನೋಡಲು ನನ್ನಂತೆ ಇಲ್ಲ, ಅವನ ನಡವಳಿಗೆ ಮತ್ತು ಬುದ್ಧಿಯೂ ನನ್ನಂತೆ ಇಲ್ಲ’ವೆಂದು ಸ್ವತಃ ಹೆತ್ತ ತಂದೆಯೇ 6 ವರ್ಷದ ಮಗನನ್ನು ನದಿಗೆ ತಳ್ಳಿ ಕೊಲೆ ಮಾಡಿರುವ ಅತೀ ಅಮಾನುಷ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತನೇ ಈ ಘೋರ ಕೃತ್ಯ ಎಸಗಿದ ಆರೋಪಿ. ಈತನ ಪುತ್ರ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6 ವರ್ಷ) ಕೊಲೆಯಾದ ದುರ್ದೈವಿ ಬಾಲಕ. ನಾಗಠಾಣ ಗ್ರಾಮದಲ್ಲಿ ವಾಸವಿದ್ದ ಮಲ್ಲಿಕಾರ್ಜುನನಿಗೆ ತನ್ನ ಮಗನ ಬಗ್ಗೆ ಗ್ರಾಮದ ಕೆಲವರು ಪದೇ ಪದೇ ಚೇಡಿಸುತ್ತಿದ್ದರು. 'ನಿನ್ನ ಮಗ ನೋಡಲು ನಿನ್ನಂತಿಲ್ಲ, ಅವನ ಹೋಲಿಕೆ ನಿನಗೆ ಮ್ಯಾಚ್ ಆಗಲ್ಲ' ಎಂದು ಗ್ರಾಮಸ್ಥರು ನೀಡುತ್ತಿದ್ದ ಚುಚ್ಚುಮಾತುಗಳು ಮಲ್ಲಿಕಾರ್ಜುನನ ಮನಸ್ಸಿನಲ್ಲಿ ಅನುಮಾನದ ಕಿಚ್ಚು ಹಚ್ಚಿದ್ದವು.

ಮಗುವಿನ ಹತ್ಯೆಗೆ ಸಂಚು:

ದಿನನಿತ್ಯದ ಈ ಚೇಷ್ಟೆ ಮತ್ತು ಅಪಹಾಸ್ಯದಿಂದ ರೋಸಿಹೋದ ಮಲ್ಲಿಕಾರ್ಜುನ, ಮಗನನ್ನು ಹತ್ಯೆ ಮಾಡಲು ನಿರ್ಧರಿಸಿದನು. ಕಳೆದ ಮಾರ್ಚ್ 16 ರಂದು ಮಗ ಸಿದ್ದಾರ್ಥನನ್ನು ಶಾಲೆಗೆ ಸೇರಿಸುವುದಾಗಿ ನಂಬಿಸಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿಯ ಕೃಷ್ಣಾ ನದಿ ತೀರಕ್ಕೆ ಮಗುವನ್ನು ಕರೆದೊಯ್ದಿದ್ದಾನೆ. ಯಾರು ಇಲ್ಲದ ಸಮಯದಲ್ಲಿ, ತನ್ನ ಪುತ್ರನನ್ನು ನದಿಗೆ ತಳ್ಳಿದ್ದಾನೆ. ಮಗು ನೀರಿನಲ್ಲಿ ಮುಳುಗುವುದನ್ನು ನೋಡುತ್ತಾ ನಿಂತ ಈ ಪಾಪಿ ತಂದೆ, ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಸುಳ್ಳು ಹೇಳಿ ನಾಟಕವಾಡಿದ ಆರೋಪಿ:

ಹತ್ಯೆಯ ನಂತರ ಮನೆಗೆ ಮರಳಿದ ಮಲ್ಲಿಕಾರ್ಜುನ, ಮಗನನ್ನು ಸಿಂದಗಿ ಬಳಿಯ ಶಾಲೆಯೊಂದಕ್ಕೆ ಸೇರಿಸಿದ್ದು, ಅಲ್ಲಿನ ಹಾಸ್ಟೆಲ್‌ನಲ್ಲಿ ಉಳಿಸಿದ್ದಾಗಿ ತನ್ನ ಪತ್ನಿ ಭಾಗ್ಯಶ್ರೀ ಅವರಿಗೆ ಸುಳ್ಳು ಹೇಳಿ ನಂಬಿಸಿದ್ದಾನೆ. ಪತ್ನಿ ಮಗನ ಬಗ್ಗೆ ಕೇಳಿದಾಗಲೆಲ್ಲಾ ಒಂದಲ್ಲ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದನು. ಏಪ್ರಿಲ್ 1 ರಂದು ಬಾಲಕ ಸಿದ್ದಾರ್ಥನ ಹುಟ್ಟುಹಬ್ಬವಿತ್ತು. ಮಗನ ಜನ್ಮದಿನದ ಅಂಗವಾಗಿ ಅವನನ್ನು ಮನೆಗೆ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಪಟ್ಟು ಹಿಡಿದರು. ಈ ವೇಳೆ ಗಾಬರಿಗೊಂಡ ಮಲ್ಲಿಕಾರ್ಜುನ ಮನೆಯಿಂದ ಓಡಿ ಹೋಗಿದ್ದಾನೆ. ಇದರಿಂದ ಪತ್ನಿಗೆ ತೀವ್ರ ಅನುಮಾನ ಮೂಡಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಲ್ಲಿಕಾರ್ಜುನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಮಗನನ್ನು ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸ್ ತನಿಖೆ ಮತ್ತು ಶವ ಪತ್ತೆ:

ಈ ಕುರಿತು ಮಾಹಿತಿ ನೀಡಿದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, 'ಮಾರ್ಚ್ 16 ರಂದು ಮಹಾರಾಷ್ಟ್ರದ ಕರಾಡ್‌ನ ಮಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಬಾಲಕನ ಶವವೊಂದು ಪತ್ತೆಯಾಗಿತ್ತು. ಮಹಾರಾಷ್ಟ್ರ ಪೊಲೀಸರು ಹೊರಡಿಸಿದ್ದ ಪ್ರಕಟಣೆ ಮತ್ತು ಮಲ್ಲಿಕಾರ್ಜುನ ನೀಡಿದ ಹೇಳಿಕೆಗಳನ್ನು ತಾಳೆ ನೋಡಿದಾಗ, ಅದು ಸಿದ್ದಾರ್ಥನ ಶವ ಎಂದು ದೃಢಪಟ್ಟಿದೆ' ಎಂದು ತಿಳಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಲ್ಲಿಕಾರ್ಜುನ ಅರಕೇರಿಯನ್ನು ಬಂಧಿಸಲಾಗಿದೆ. ಜನರ ಚುಚ್ಚು ಮಾತಿನಿಂದ ಪ್ರೇರೇಪಿತಗೊಂಡು ಹೆತ್ತ ಮಗನನ್ನೇ ಬಲಿ ಪಡೆದ ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

PREV
Read more Articles on
click me!

Recommended Stories

ಗ್ಯಾರಂಟಿ ನಿಭಾಯಿಸಲಾಗದೇ ಕಾಂಗ್ರೆಸ್ ಹೆಣಗಾಟ: ಸಂಸದ ರಮೇಶ ಜಿಗಜಿಣಗಿ ಆರೋಪ
ಶೃಂಗೇರಿಗೆ ಹೆಚ್ಚುವರಿ ₹50 ಕೋಟಿ ಅನುದಾನ: ಸಚಿವ ಸತೀಶ್ ಜಾರಕಿಹೊಳಿ ಭರವಸೆ