ಇಂಗ್ಲೆಂಡ್‌ನಲ್ಲಿ ಭಾರತ ದಿವ್ಯಾಂಗ ಕ್ರಿಕೆಟ್‌ ತಂಡದ ಪರ ಆಡಲಿದ್ದಾನೆ ವಿಜಯಪುರದ ಚಿಂದಿ ಆಯುವವನ ಪುತ್ರ

Published : Jul 31, 2026, 10:51 PM IST
Rajesh Kannur Cricketer

ಸಾರಾಂಶ

ವಿಜಯಪುರದ ಕೊಳೆಗೇರಿಯ ಗುಡಿಸಲಿನಲ್ಲಿ ವಾಸಿಸುವ, ಚಿಂದಿ ಆಯುವ ದಂಪತಿಯ ಮಗನಾದ ವಿಕಲಚೇತನ ಕ್ರಿಕೆಟಿಗ ರಾಜೇಶ್ ಕಣ್ಣೂರ್, ಬಡತನದ ನಡುವೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ವಿಜಯಪುರ (ಜು.31): ಬಹುರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕಲಚೇತನ ಕ್ರಿಕೆಟಿಗ (Physical Disability Cricket) ಹಾಗೂ ಭಾರತೀಯ ಅಂಗವಿಕಲ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್‌ ರಾಜೇಶ್ ಕಣ್ಣೂರ್ (27) ಮುಂಬರುವ ಆಗಸ್ಟ್‌ 5 ರಿಂದ 19 ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಜಯಪುರದ ಕೊಳೆಚೆ ಪ್ರದೇಶದಲ್ಲಿರುವ, ಇಂದಿಗೂ ವಿದ್ಯುತ್‌ ಇಲ್ಲದ ಗುಡಿಸಲಿನಲ್ಲಿ ವಾಸಿಸುತ್ತಿರುವ ರಾಜೇಶ್, ಚಿಂದಿ ಆಯುವ ಕೆಲಸ ಮಾಡುವ ದಂಪತಿಯ ಮಗ. ಅಂಗವಿಕಲತೆಯ ಕಾರಣಕ್ಕೆ ಅವಕಾಶಗಳು ನಿರಾಕರಿಸಲ್ಪಟ್ಟಾಗ ಹುಬ್ಬಳ್ಳಿಗೆ ತೆರಳಿ ಕಠಿಣ ತರಬೇತಿ ಪಡೆದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.

13 ಮಕ್ಕಳ ಬಡ ಕುಟುಂಬ, ಕಸ ಆಯುವ ಹೆತ್ತವರು

ರಾಜೇಶ್ ಕಣ್ಣೂರ್ ಅವರ ಕೌಟುಂಬಿಕ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ತಂದೆ ಚಿನ್ನಪ್ಪ (65) ಮತ್ತು ತಾಯಿ ಕಾಶಿಬಾಯಿ (50) ವಿಜಯಪುರದಲ್ಲಿ ಕಸ ಆಯುವ ಕೆಲಸ ಮಾಡುತ್ತಾರೆ. ನಾವು ಒಟ್ಟು 13 ಜನ ಮಕ್ಕಳು—ಏಳು ಗಂಡು ಮತ್ತು ಆರು ಹೆಣ್ಣುಮಕ್ಕಳು. ಬಡತನದ ಕಾರಣಕ್ಕೆ ನಾನು 10 ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದೆ. ಆದರೆ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಭಾರಿ ಒಲವು. ಗಲ್ಲಿ ಕ್ರಿಕೆಟ್ ಆಡುತ್ತಿದ್ದ ನನ್ನನ್ನು ವಿಕಲಚೇತನ ಎಂಬ ಕಾರಣಕ್ಕೆ ಸಾಮಾನ್ಯ ಕ್ರಿಕೆಟ್ ಪಂದ್ಯಗಳಿಗೆ ಆಯ್ಕೆ ಮಾಡುತ್ತಿರಲಿಲ್ಲ. ಬಳಿಕ ಸ್ನೇಹಿತರ ಸಲಹೆಯಂತೆ 2018 ರಲ್ಲಿ ಹುಬ್ಬಳ್ಳಿಯ BDK ಮೈದಾನದಲ್ಲಿ ಕೋಚಿಂಗ್‌ಗೆ ಸೇರಿದೆ. 2-3 ವರ್ಷ ತರಬೇತಿ ಪಡೆದು ಕರ್ನಾಟಕ ವಿಕಲಚೇತನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ನನ್ನ ಜೀವನದ ದೊಡ್ಡ ತಿರುವು ಎಂದು ರಾಜೇಶ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಶ್ರೀಲಂಕಾದಲ್ಲಿ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ್ದ ರಾಜೇಶ್

2025 ರಲ್ಲಿ ಶ್ರೀಲಂಕಾದಲ್ಲಿ ನಡೆದ 'ವಿಕಲಚೇತನ ಚಾಂಪಿಯನ್ಸ್ ಟ್ರೋಫಿ'ಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಾಜೇಶ್ ಕಣ್ಣೂರ್ ಕೇವಲ 65 ಎಸೆತಗಳಲ್ಲಿ 119 ರನ್ ಬಾರಿಸಿ 'ಪಂದ್ಯಶ್ರೇಷ್ಠ' (Man of the Match) ಪ್ರಶಸ್ತಿ ಪಡೆದಿದ್ದರು. ಈ ಸರಣಿಯಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ 5 ಅರ್ಧಶತಕಗಳನ್ನು ಸಿಡಿಸಿದ್ದರು. ಬಹುರಾಷ್ಟ್ರೀಯ ಟೂರ್ನಿಯಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕಲಚೇತನ ಕ್ರಿಕೆಟಿಗ ಎಂದು ಭಾರತೀಯ ವಿಕಲಚೇತನ ಕ್ರಿಕೆಟ್ ಮಂಡಳಿ (DCCI) ಇವರನ್ನು ಗುರುತಿಸಿದೆ.

ವಿದ್ಯುತ್ ಇಲ್ಲದ ಗುಡಿಸಲು, ಕ್ರಿಕೆಟ್ ಕಿಟ್‌ಗೂ ಪರದಾಟ!

ಡಿಸಿಸಿಐ (DCCI) ಸಂಸ್ಥೆಗೆ ಇನ್ನೂ ಬಿಸಿಸಿಐ (BCCI) ನಿಂದ ಅಧಿಕೃತ ಮಾನ್ಯತೆ ಸಿಗದ ಕಾರಣ, ಅದು ವಿಮಾನ ಪ್ರಯಾಣದ ವೆಚ್ಚವನ್ನು ಮಾತ್ರ ಭರಿಸುತ್ತದೆ. ಅಂತರರಾಷ್ಟ್ರೀಯ ಪಂದ್ಯಗಳಿಗಾಗಿ ಬೆಂಗಳೂರು ಮತ್ತು ದೆಹಲಿಗೆ ಪ್ರಯಾಣಿಸಲು ನಾನೇ ಹಣ ಹೊಂದಿಸಬೇಕು. ಸಾಮಾನ್ಯವಾಗಿ ರೈಲಿನಲ್ಲೇ ಪ್ರಯಾಣಿಸುತ್ತೇನೆ. ಇತ್ತೀಚೆಗೆ ಕುಟುಂಬದಲ್ಲಿದ್ದ ತುರ್ತು ಪರಿಸ್ಥಿತಿಯಿಂದಾಗಿ ದೆಹಲಿಯಿಂದ ವಿಮಾನದಲ್ಲಿ ಬರಬೇಕಾಯಿತು, ಅದಕ್ಕೆ ಸ್ನೇಹಿತ ವಿಶ್ವನಾಥ್ ರಾಥೋಡ್ ನೆರವಾದರು. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವುದರಿಂದ ನನ್ನ ಬಳಿ ಸಾಕಷ್ಟು ಹಣವಿದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಒಂದು ಉತ್ತಮ ಕ್ರಿಕೆಟ್ ಕಿಟ್ ಖರೀದಿಸಲು ಸಹ ನಾನು ಹೆಣಗಾಡುತ್ತಿದ್ದೇನೆ. ಸರ್ಕಾರ ಮತ್ತು ಸಾರ್ವಜನಿಕರು ಅಂಗವಿಕಲರ ಕ್ರಿಕೆಟ್ ಅನ್ನು ಸಾಮಾನ್ಯ ಕ್ರಿಕೆಟ್‌ನಂತೆಯೇ ಸಮಾನವಾಗಿ ಕಾಣಬೇಕು ಎಂದು ರಾಜೇಶ್ ಮನವಿ ಮಾಡಿದ್ದಾರೆ.

ವಿಜಯಪುರದ ಸರ್ಕಾರಿ ಆಸ್ಪತ್ರೆಯ ಆವರಣದ ಖಾಲಿ ಜಾಗದಲ್ಲಿ ಅಭ್ಯಾಸ ಮಾಡುವ ರಾಜೇಶ್, ಸಮಯ ಸಿಕ್ಕಾಗ ಹೆತ್ತವರೊಂದಿಗೆ ಕಸ ಆಯುವ ಕೆಲಸಕ್ಕೂ ಹೋಗುತ್ತಾರೆ. ವಿದ್ಯುತ್ ಸಂಪರ್ಕವಿಲ್ಲದ ಇವರ ಗುಡಿಸಲಿನಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಇಡೀ ಕುಟುಂಬ ನಿದ್ರೆ ಮಾಡಲು ಹೆಣಗಾಡುತ್ತದೆ.

2018 ರಲ್ಲಿ ರಾಜೇಶ್‌ಗೆ ತರಬೇತಿ ನೀಡಿದ್ದ ಹುಬ್ಬಳ್ಳಿಯ ಹಿರಿಯ ಕ್ರಿಕೆಟಿಗ ಶಿವಾನಂದ ಗುಂಜಾಳ ಮಾತನಾಡಿ, ರಾಜೇಶ್ ಉತ್ತಮ ಕ್ರಿಕೆಟಿಗ. ಅಂಗವಿಕಲತೆ ಮತ್ತು ಬಡತನವನ್ನು ಸವಾಲಾಗಿ ಸ್ವೀಕರಿಸಿರುವ ಆತ ಕಠಿಣ ಪರಿಶ್ರಮ ಪಡುತ್ತಿದ್ದಾನೆ. ಸಮಾಜ ಆತನಿಗೆ ಪ್ರೋತ್ಸಾಹ ನೀಡಿದರೆ ಅಂತರರಾಷ್ಟ್ರೀಯ ವಿಕಲಚೇತನ ಕ್ರಿಕೆಟ್‌ನಲ್ಲಿ ಮತ್ತಷ್ಟು ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

PREV
Read more Articles on
click me!

Recommended Stories

ಕರ್ನಾಟಕದಲ್ಲಿ ಟೋಲ್ ಸಂಗ್ರಹ ಭಾರಿ ಜಿಗಿತ: 5 ವರ್ಷಗಳಲ್ಲಿ ದ್ವಿಗುಣಗೊಂಡ ಆದಾಯ, ₹4,779 ಕೋಟಿಗೆ ಏರಿಕೆ!
Bengaluru: ಯುಪಿಐ ಪಾವತಿ ಫೇಲ್, ಚಿಲ್ಲರೆ ಗಲಾಟೆ: ಹಣವಿದ್ದರೂ ಹೆದ್ದಾರಿಯಲ್ಲಿ ಪ್ರಯಾಣಿಕನನ್ನು ಕೆಳಗಿಳಿಸಿದ BMTC ಕಂಡಕ್ಟರ್!