ಮುಂಗಾರು ಮಳೆ ಆರಂಭವಾಗಿ ಒಂದೂವರೆ ತಿಂಗಳ ನಂತರ ಬರದ ನಾಡು ವಿಜಯಪುರದಲ್ಲಿ ಮಳೆ ಚುರುಕುಕೊಂಡಿದೆ. ಆದ್ದರಿಂದ ಬಿತ್ತನೆಗೆ ಹವಾಮಾನ ಇಲಾಖೆ ಹಸಿರು ನಿಶಾನೆ ತೋರಿದೆ.
ವರದಿ - ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜುಲೈ 18) : ಕೊನೆಗೂ ಒಂದುವರೆ ತಿಂಗಳ ನಂತರ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದೆ. ಸೋಮವಾರ ರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಮಂಗಳವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದೆ. ಸದ್ಯ ಹವಾಮಾನ ಇಲಾಖೆಯ ಮಾಹಿತಿಯಂತೆ ಇಂದು ಮಂಗಳವಾರ ಬೆಳಗ್ಗೆ 8-30ರಿಂದ ಸಂಜೆ 5-30ರವರೆಗೆ 5.2 ಮಿ,ಮೀ ಮಳೆ ದಾಖಲಾಗಿದೆ. ಇನ್ನೂ ಐದು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ. ಜು.19ರಿಂದ 23ರವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ.
ಜಿಲ್ಲೆಯ ಎಲ್ಲೆಲ್ಲಿ ಎಷ್ಟೆಷ್ಟು ಮಳೆ: ವಿಜಯಪುರ ತಾಲೂಕಿನಲ್ಲಿ ಮುಂದಿನ ಐದು ದಿನಗಳಲ್ಲಿ 38.4 ಮೀ.ಮೀಟರ್, ಬಸವನಬಾಗೇವಾಡಿ ತಾಲೂಕಿನಲ್ಲಿ 40.1 ಮೀ.ಮೀ, ಇಂಡಿ ತಾಲೂಕಿನಲ್ಲಿ 38.9 ಮೀ.ಮೀ, ಮುದ್ದೇಬಿಹಾಳ ತಾಲೂಕಿನಲ್ಲಿ 29.7 ಮೀ.ಮೀ ಹಾಗೂ ಸಿಂದಗಿ ತಾಲೂಕಿನಲ್ಲಿ 29.7 ಮೀ.ಮೀಟರ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಂತೆ ಅಂದಾಜಿಸಲಾಗಿದೆ. ಮಂಗಳವಾರ ಗರಿಷ್ಠ ತಾಪಮಾನ 30.0 ಸೆ,ಮೀಟರ್ ಹಾಗೂ ಕನಿಷ್ಠ 20.0 ಸೆ.ಮೀಟರ್ ತಾಪಮಾನವಿತ್ತು.
ಜಿಲ್ಲೆಯಾದ್ಯಂತ ಬಿತ್ತನೆಗೆ ಸೂಚನೆ: ಕಳೆದ ವಾರ ಕೆಲವು ಕಡೆ ಮಾತ್ರ ಜಿಟಿ ಜಿಟಿ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಭೂಮಿ ಹಸಿ ಇದ್ದರೆ ಮಾತ್ರ ಬಿತ್ತನೆ ಕಾರ್ಯ ಮಾಡಬಹುದು ಎಂದು ಹವಾಮಾನ ಇಲಾಖೆ ರೈತರಿಗೆ ಸೂಚನೆ ನೀಡಿದೆ. ಸಧ್ಯ ಕಬ್ಬು ಬೆಳವಣಿಗೆ ಹಂತದಲ್ಲಿರುವ ಕಾರಣ ಕಬ್ಬು ಬೆಳೆಗಾರರು ಕಬ್ಬು ಉತ್ತಮವಾಗಿ ಬೆಳೆಯಲು ಸಾರಜನಕ ಪೋಟ್ಯಾಷ್ ಒದಗಿಸುವ ರಸಗೊಬ್ಬರವನ್ನು ಮೇಲಗೊಬ್ಬರವಾಗಿ ನೀಡಬೇಕು ಎಂದು ಸಲಹೆ ನೀಡಿದೆ. ಮುಂದಿನ ಐದು ದಿನ ಜಿಟಿ ಜಿಟಿ ಮಳೆಯಾಗುತ್ತಿರುವ ಕಾರಣ ಸಧ್ಯ ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಒದಗಿಸುವುದು ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
ವಿಜಯಪುರ: ಕೃಷ್ಣೆಯಲ್ಲೀಗ ಮರಳಿದೆ ಜಲ ಜೀವಕಳೆ: ಆಲಮಟ್ಟಿ (ಜು.14): ಪ್ರಸಕ್ತ ಮುಂಗಾರು ವಿಳಂಬದಿಂದ ಜಲ ವೈಭವ ಕಾಣದಂತಿದ್ದ ಕೃಷ್ಣಾ ನದಿ ಒಡಲಲ್ಲಿ ಈಗ ಮತ್ತೆ ಜಲ-ಜೀವ-ಕಳೆ ಮೂಡಿದೆ. ಪರಿಣಾಮ ಕೃಷ್ಣೆಯ ಸೆರಗಲ್ಲಿ ಇನ್ನು ಹಸಿರು ಕಳೆಗಟ್ಟುವ ಆಶಾಭಾವ ಒಡಮೂಡಿದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯಲ್ಲಿ ಈಗ ಮೆಲ್ಲಗೆ ನೀರಿನ ಜುಳುಜುಳು ಸದ್ದು ಕೇಳಿಬರುತ್ತಿದೆ. ಪರಿಣಾಮ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಋುತುವಿನಲ್ಲಿ ಮೊದಲ ಬಾರಿಗೆ ಒಳಹರಿವಿನ ಮೂಲಕ ಜೀವ ಜಲದ ದರ್ಶನವಾಗತೊಡಗಿದೆ. ನೆರೆಯ ಮಹಾರಾಷ್ಟ್ರದ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಚುರುಕಾಗಿದ್ದರಿಂದ ಹಾಗೂ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರದ ಮಳೆಯಿಂದ ಕೃಷ್ಣೆ ಒಡಲು ಭರ್ತಿ: ಇದರಿಂದಾಗಿ ಕೃಷ್ಣಾ ನದಿ ತೀರದ ಅನ್ನದಾತರು ಹಾಗೂ ಜನಸಾಮಾನ್ಯರು ಅಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂಗಾರು ಪ್ರವೇಶಿಸಿ ತಿಂಗಳಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿರಲಿಲ್ಲ. ಹೀಗಾಗಿ ಕೃಷ್ಣಾ ನದಿ ಬತ್ತಿ ಬರಿದಾಗಿತ್ತು. ರೈತರು, ಜನಸಾಮಾನ್ಯರು ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಮುಂದೇನು ಗತಿ? ಎಂಬ ಆತಂಕದ ಕಾರ್ಮೋಡ ಆವರಿಸಿತ್ತು. ಆದರೀಗ ಮಹಾರಾಷ್ಟ್ರ ಭಾಗದಲ್ಲಿ ವರ್ಷಧಾರೆ ಜಿನುಗುತ್ತಿರುವುದರಿಂದ ಕೃಷ್ಣೆ ಮತ್ತೆ ಮೊದಲಿನಂತೆ ಜಲ ಜೀವಕಳೆ ತುಂಬಿಕೊಳ್ಳುತ್ತಿದ್ದಾಳೆ. ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತಿ್ರ ಜಲಾಶಯದಲ್ಲಿ ಜೀವಜಲ ಹರಿದು ಬರುತ್ತಿದೆ. ಸಣ್ಣ ಸಣ್ಣದಾಗಿ ನೀರಿನ ಅಲೆಗಳು ಪುಟಿದೆಳುತ್ತಿರುವುದು ಗೋಚರಿಸುತ್ತಿದೆ. ಅಪ್ಪಳಿಸುತ್ತಿರುವ ಅಲೆಗಳ ನಿನಾದಕ್ಕೆ ಜನ ಖುಷಿಯಾಗಿದ್ದಾರೆ. ಈ ದೃಶ್ಯವನ್ನು ಕಣ್ತುಂಬಿಕೊಂಡು ಹೃನ್ಮನ ತಣಿಸಿಕೊಳ್ಳುತ್ತಿದ್ದಾರೆ.