ಬೇಗೂರು ಆಸ್ಪತ್ರೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜನ ಭೇಟಿ, ಯಡವನಹಳ್ಳಿ ವಸತಿ ಶಾಲೆಯಲ್ಲಿ ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ್ ಪರಿಶೀಲನೆ.
ಗುಂಡ್ಲುಪೇಟೆ(ಜು.18): ಕಲುಷಿತ ಆಹಾರ ಸೇವಿಸಿ ತಾಲೂಕಿನ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 23 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಓರ್ವ ವಿದ್ಯಾರ್ಥಿ ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ 22 ಮಂದಿ ವಿದ್ಯಾರ್ಥಿಗಳು ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ರಾಘವಾಪುರ ಗ್ರಾಮದ ವಿದ್ಯಾರ್ಥಿ ಗಗನ್ ಎಂಬಾತನನ್ನು ಮೈಸೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೋಷಕರು ಹೇಳಿಕೊಂಡಿದ್ದಾರೆ.
undefined
ಅಕ್ರಮ ವಿದ್ಯುತ್ ತಂತಿ ಬೇಲಿಗೆ ಕಾಡಾನೆ ಬಲಿ: ಜಮೀನಿನ ರೈತ ಪರಾರಿ
ಏನಿದು ಘಟನೆ?:
ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ರಾತ್ರಿ ಊಟಕ್ಕೆ ಬಂದ ವಿದ್ಯಾರ್ಥಿಗಳಲ್ಲಿ ಕೆಲವರು ಊಟದಲ್ಲಿ ಉಪ್ಪು, ಕಾರ ಇಲ್ಲ ಎಂದಾಗ ಅಡುಗೆಯವರು ಮತ್ತೆ ಉಪ್ಪು, ಕಾರ ಹಾಕಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗಳು ಆ ಊಟವನ್ನು ಸೇವಿಸಿದ ಬಳಿಕ 15 ಮಂದಿ ವಿದ್ಯಾರ್ಥಿಗಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಾಗ, ಬೇಗೂರು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ ಮತ್ತೆ ಹಾಸ್ಟೆಲ್‌ಗೆ ವಾಪಸ್ ಆಗಿದ್ದಾರೆ.
ಸೋಮವಾರ ಬೆಳಗ್ಗೆ ಬೇಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಮತ್ತೆ ಕರೆ ತಂದು ದಾಖಲು ಮಾಡಿದ್ದಾರೆ. ಬೇಗೂರು ವೈದ್ಯ ಡಾ.ಶಿವಸ್ವಾಮಿ ಮಕ್ಕಳಿಗೆ ಚಿಕಿತ್ಸೆ ನೀಡಿದರು. ದಾಖಲಾಗಿದ್ದ ಓರ್ವ ವಿದ್ಯಾರ್ಥಿ ಗಗನ್ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ತೆರಳಿದ್ದಾರೆ.
ತಹಸೀಲ್ದಾರ್ ಭೇಟಿ:
ಕುಲಷಿತ ಆಹಾರ ಸೇವನೆಯಿಂದ ಆಸ್ಪತ್ರೆಗೆ ವಿದ್ಯಾರ್ಥಿಗಳು ದಾಖಲಾದ ವಿಷಯ ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಶ್ರೀಕಂಠರಾಜೇ ಅರಸ್, ಜಿ. ಶ್ರೀಕಂಠರಾಜೇ ಅರಸ್, ಬೇಗೂರು ಸರ್ಕಲ್ ಇನ್ಸ್‌ಪೆಕ್ಟರ್ ಕಿರಣ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್ ಚರಣ್‌ಗೌಡ ಭೇಟಿ ನೀಡಿದ್ದರು.
ಡಿಡಿ ಭೇಟಿ:
ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭೇಟಿ ಆರೋಗ್ಯ ವಿಚಾರಿಸಿದರು.
ಟಿಎಚ್‌ಒ ಭೇಟಿ:
ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡ ವಿಷಯ ತಿಳಿದು ತಾಲೂಕು ಆರೋಗ್ಯಾಧಿಕಾರಿ ಡಾ.ಗಿರಿದಾಸ್, ಹೊರೆಯಾಲ ಪ್ರಾಥಮಿಕ ಕೇಂದ್ರದ ಡಾ.ದೀಪಕ್ ಭೇಟಿ ನೀಡಿದ್ದರು.
ಸಮಾಜ ಕಲ್ಯಾಣ ಇಲಾಖೆ ಡಿಡಿ ಭೇಟಿ ದೂರುಗಳ ಸುರಿಮಳೆ
ಗುಂಡ್ಲುಪೇಟೆ: ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭೇಟಿ ಪರಿಶೀಲನೆ ವೇಳೆ ಪೋಷಕರು ದೂರುಗಳ ಸುರಿ ಮಳೆಗೈದಿದ್ದಾರೆ.
ಉಪನಿರ್ದೇಶಕ ಮಲ್ಲಿಕಾರ್ಜುನ ಭೇಟಿ ನೀಡದಾಗ, ಕಲುಷಿತ ಆಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡಿರುವ ವಿಷಯ ತಿಳಿದು ಹಾಸ್ಟೆಲ್ ಬಂದಿದ್ದ ವಿದ್ಯಾರ್ಥಿಗಳ ಪೋಷಕರು ಪ್ರಾಂಶುಪಾಲರ ಬಗ್ಗೆ ದೂರು ಹೇಳಿದ್ದಾರೆ.
ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಇಲ್ಲ, ಹಾಸ್ಟೆಲ್‌ಗೆ ಹೊರಗಿನ ವ್ಯಕ್ತಿಗಳು ಬಂದರೂ ಯಾರು ಎಂದು ಪಶ್ನಿಸುವುದಿಲ್ಲ. ಊಟ ಚೆನ್ನಾಗಿ ಕೊಡುತ್ತಿಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ ಎಂಬಿತ್ಯಾದಿ ದೂರುಗಳನ್ನು ಪೋಷಕರು ಹೇಳಿದಾಗ ಮಲ್ಲಿಕಾರ್ಜುನ ಶಾಂತವಾಗಿ ಆಲಿಸಿದರು.
ಬೈಯ್ತಾರೆ:
ವಸತಿ ಶಾಲೆಯಲ್ಲಿ ಊಟ ಹೆಚ್ಚಾಗಿ ಕೇಳಿದರೂ ಬೈಯ್ತಾರೆ, ಬಿಸಿ ನೀರು ಇಲ್ಲ, ಊಟ ಚೆನ್ನಾಗಿಲ್ಲ ಎಂದರೂ ಬೈಯ್ತಾರೆ ಎಂದು ಹಲವು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಾಳು ಕೊಂಪೆಯಂತಿದೆ. ಹೆಸರಿಗೆ ಮಾತ್ರ ವಸತಿ ಶಾಲೆ. ಪ್ರಾಂಶುಪಾಲ/ವಾರ್ಡನ್ ಒಬ್ಬರೇ ಆಗಿದ್ದಾರೆ. ಏನಾದರೂ ಮಕ್ಕಳು ಹೇಳಿದರೆ ಮಕ್ಕಳೊಂದಿಗೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಪೋಷಕರೊಬ್ಬರು ಖಡಕ್ಕಾಗಿ ಹೇಳಿದರು.
ನೋಟೀಸ್ ಜಾರಿ:
ವಸತಿ ಶಾಲೆ/ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲ. ಅಡುಗೆ ತಯಾರಕರು ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಅಡುಗೆ ಮಾಡುವವರು ಗ್ಲೌಸ್, ಹೇರ್ ಗ್ಲೌಸ್, ಮಾಸ್‌್ಕ ಹಾಕಿಲ್ಲ. ದಾಸ್ತಾನು ಕೊಠಡಿಯಲ್ಲೂ ಸ್ವಚ್ಛತೆಯೇ ಮಾಯವಾಗಿದೆ ಎಂದು ತಾಲೂಕು ಆಹಾರ ಸುರಕ್ಷತ ಅಧಿಕಾರಿ ಶ್ರೀನಿವಾಸ್ ನೋಟೀಸ್ ಜಾರಿ ಮಾಡಿದ್ದಾರೆ.
ಈ ಸಂಬಂಧ ನಿರ್ವಹಣೆ ಹಾಗೂ ಸ್ವಚ್ಛತೆ ಇಲ್ಲದ ಬಗ್ಗೆ ವಸತಿ ಶಾಲೆಗೆ ನೋಟೀಸ್ ಜಾರಿಯಾಗಿದೆ. ಇನ್ನೊಂದು ವಾರದಲ್ಲಿ ಭೇಟಿ ನೀಡುವ ವೇಳೆಗೆ ಸ್ವಚ್ಛತೆ, ನಿರ್ವಹಣೆ ಸರಿ ಇರದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಅಭಿಯಾನ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಜಾಗೃತಿ!
ಸ್ಯಾಂಪಲ್ ಕಲೆಕ್ಟ್:
ಮಕ್ಕಳು ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಹಿನ್ನೆಲೆ ಹಾಸ್ಟೆಲ್‌ನಲ್ಲಿನ ಅಕ್ಕಿ, ರಾಗಿ, ಆಯಿಲ್‌ನ್ನು ಸ್ಯಾಂಪಲ್ ಕಲೆಕ್ಟ್ ಮಾಡಿದ್ದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ.
ವಿದ್ಯಾರ್ಥಿಗಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಹಾಸ್ಟೆಲ್‌ನ ವಿದ್ಯಾರ್ಥಿಗಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದ್ದಾರೆ.
ಹಾಸ್ಟೆಲ್ ಭೇಟಿಯ ವೇಳೆ ಕನ್ನಡಪ್ರಭದೊಂದಿಗೆ ಮಾತನಾಡಿ, ಹಾಸ್ಟೆಲ್ ಹಾಗೂ ಶಾಲೆಯ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿ, ವಿದ್ಯಾರ್ಥಿಗಳ ಅಸ್ವಸ್ಥತೆಯ ಬಗ್ಗೆ ಮಾಹಿತಿ ಪಡೆಯುತ್ತಿರುವುದಾಗಿ ಹೇಳಿದರು. ಊಟ ಸೇವನೆ ಬಳಿಕ ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಹಾಸ್ಟೆಲ್ ವಾಪಸ್ ಆಗಿದ್ದಾರೆ. ಓರ್ವ ವಿದ್ಯಾರ್ಥಿ ಮಾತ್ರ ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ಸ್ಪಷ್ಟಪಡಿಸಿದರು.