ನಮ್ಮ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದಲ್ಲಿ ನಿಮ್ಮ ಕೈ ಹಿಡಿದಿದ್ದ ನಮ್ಮ ಸಮಾಜದವರೆಲ್ಲ ಕೈ ಬಿಡಲಿದ್ದಾರೆ ಎಂದ ಪಂಚಮಸಾಲಿ ಪೀಠದ ಸ್ವಾಮೀಜಿ ಹಾಗೂ ಮುರುಗೇಶ್ ನಿರಾಣಿಗೆ ಬಿಜೆಪಿ ಶಾಸಕರೋರ್ವರು ವಾರ್ನಿಂಗ್ ಕೊಟ್ಟಿದ್ದಾರೆ.
ವಿಜಯಪುರ [ಜ.15]: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ BJP ಬೀಳಗಿ ಶಾಸಕ ಮುರುಗೇಶ ನಿರಾಣಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದಲ್ಲಿ ಮೂರುವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇರುತ್ತಾರೆ. ಸ್ವಾಮೀಜಿ ಸೇರಿದಂತೆ ಯಾರೂ ಗೊಡ್ಡು ಬೆದರಿಕೆ ಹಾಕುವುದು ಸರಿಯಲ್ಲ ಎಂದರು.
ಒಂದ ಮಠದ ಮಠಾಧೀಶರಾಗಿ ಗೌರವಯುತವಾಗಿ ಇರಬೇಕು. ಆದರೆ ಮುಖ್ಯಮಂತ್ರಿಗೆ ಬೆದರಿಕೆ ಹಾಕುವಂತೆ ನಡೆದುಕೊಳ್ಳಬಾರದು. ಹಿಂದೆ ನಮ್ಮವರೇ ಅನೇಕರು ಬೆನ್ನಿಗೆ ಚೂರಿ ಹಾಕಿದ್ದಾರೆ. ಈಗ ಮಾತಾಡುವ ಸ್ವಾಮೀಜಿ ರಾಜ್ಯದಲ್ಲಿ ಭೀಕರ ಪ್ರವಾಹ ಬಂದಾಗ ಎಲ್ಲಿದ್ದರು ಎಂದರು.
ಬಹಿರಂಗ ವೇದಿಕೆಯಲ್ಲೇ ಪಂಚಮಸಾಲಿ ಸ್ವಾಮೀಜಿ-BSY ನಡುವೆ ಮಾತಿನ ಚಕಮಕಿ..
ಸ್ವಾಮೀಜಿ ಆದವರು ಧರ್ಮದ ಭೋದನೆ ಮಾಡಲಿ. ಓರ್ವ ಶಾಸಕರ ಸಲುವಾಗಿ ಇಂತಹ ಹೇಳಿಕೆ ನೀಡಬಾರದು. ಸ್ವಾಮೀಜಿಗಳಿಂದ ಮಂತ್ರಿಯಾದ್ರೆ ದಿನ ಮಠದ ಆವರಣದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗುತ್ತದೆ. ಅದಕ್ಕೆ ನಾನು ಯಾವ ಸ್ವಾಮೀಜಿ ಬಳಿಯೂ ಹೋಗಿಲ್ಲ. ನನಗೆ ಅರ್ಹತೆ ಇದ್ದರೆ ಮಂತ್ರಿ ಮಾಡಲಿ.ಇಲ್ಲದಿದ್ದರೆ ಬೇಡ ಎಂದರು.
ಹರಿಹರದಲ್ಲಿ ನಡೆದ ಹರ ಜಾತ್ರಾ ಮಹೋತ್ಸವದಲ್ಲಿ ನಿರಾಣಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಪಂಚಮಸಾಲಿ ಸಮುದಾಯ ನಿಮ್ಮನ್ನು ಕೈ ಬಿಡಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ವೇದಿಕೆಯಲ್ಲೇ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೀಡಿದ ಎಚ್ಚರಿಕೆ ವಿಚಾರವಾಗಿ ಯತ್ನಾಳ್ ವಾಗ್ದಾಳಿ ನಡೆಸಿದರು.