Vijayapura: ಮಹಾನಗರ ಪಾಲಿಕೆ ಮತದಾನ ಮುಕ್ತಾಯ, ಲಿಸ್ಟ್‌ನಿಂದ ಮತದಾರರ ಹೆಸ್ರು ಡಿಲೀಟ್, ಕೆಲಕಾಲ ಗೊಂದಲ!

By Suvarna NewsFirst Published Oct 28, 2022, 6:27 PM IST
Highlights

ಮಹಾನಗರ ಪಾಲಿಕೆಯ 35 ವಾರ್ಡಗಳಿಗೆ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾನದಲ್ಲಿ ಕೆಲವು ಬೂತ್ ಗಳಲ್ಲಿ  ಮತದಾರನ ಹೆಸರು ಡಿಲಿಟ್ ಆಗಿದ್ದರೆ. ಇನ್ನೂ ಕೆಲವೆಡೆಯಂತೂ ಅಧಿಕಾರಿಗಳು ಹಾಗೂ ಪೋಲಿಸರೊಂದಿಗೆ  ಅಭ್ಯರ್ಥಿಗಳು ವಾಗ್ವಾದ ನಡೆಸಿದರು.

ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್‌

ವಿಜಯಪುರ (ಅ.28): ಮಹಾನಗರ ಪಾಲಿಕೆಯ 35 ವಾರ್ಡಗಳಿಗೆ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾನದಲ್ಲಿ ಕೆಲವು ಬೂತ್ ಗಳಲ್ಲಿ  ಮತದಾರನ ಹೆಸರು ಡಿಲಿಟ್ ಆಗಿದ್ದರೆ. ಇನ್ನೂ ಕೆಲವೆಡೆಯಂತೂ ಅಧಿಕಾರಿಗಳು ಹಾಗೂ ಪೋಲಿಸರೊಂದಿಗೆ  ಅಭ್ಯರ್ಥಿಗಳು ವಾಗ್ವಾದ ನಡೆಸಿದರು. ಮಹಾನಗರ ಪಾಲಿಕೆ ಚುನಾವಣೆಗೆ ಇಂದು ಮತದಾನ ನಡೆದಿದ್ದು,  ಹಲವು ವಾರ್ಡ್ ಗಳಲ್ಲಿ ಬೆಳಿಗ್ಗಯಿಂದಲೇ ತುರುಸಿನಿಂದ ಮತದಾನ ಪ್ರಕ್ರಿಯೆ ನಡೆಯಿತು. ಬೆಳ್ಳಂಬೆಳಗ್ಗೆ ನಗರದ ಮುರಾಣಕೇರಿಯಲ್ಲಿರುವ ಮತದಾನ ಕೇಂದ್ರದಲ್ಲಿ 90 ವರ್ಷದ ವೃದ್ದೆ ರಾಧಾಬಾಯಿ ಎಂಬುವವರು ಹುರುಪಿನಿಂದಲೇ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನು ವಾರ್ಡ ನಂಬರ 25ರ ಬಿಜೆಪಿ ಅಭ್ಯರ್ಥಿ ಲಕ್ಷ್ಮೀ ದಾಶ್ಯಾಳ ಅವರಿಗೆ ಮತ ಕೇಂದ್ರದಲ್ಲಿ ಬಿಡಲಿಲ್ಲ ಎಂಬ ಕಾರಣಕ್ಕೆ ಪೋಲಿಸರೊಂದಿಗೆ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಹಿರಿಯ ಅಧಿಕಾರಿಗಳು ಪರಸ್ಥಿತಿಯನ್ನು ಶಾಂತಗೊಳಿಸಿದರು. ಇನ್ನು ವಾರ್ಡ ನಂಬರ್ 11 ರಲ್ಲಿ ಶಾಸಕ ಯತ್ನಾಳ ಅವರು ಕುಟುಂಬ ಸಮೇತವಾಗಿ ಆಗಮಿಸಿ‌ ತಮ್ಮ ಹಕ್ಕನ್ನು ಚಾಲಾಯಿಸಿದರು. ಇನ್ನು ಇದೇ ವಾರ್ಡಿನ ಮತದಾರರಾದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಮ್ಮ ಹಕ್ಕು ಚಲಾಯಿಸಿದರು. ವಾರ್ಡ ನಂಬರ್ 10ರಲ್ಲಿ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಹಾಗೂ ಸೊಸೆ ಶ್ರೀದೇವಿ ಕಾರಜೋಳ ಮತದಾನ ಮಾಡಿದರು.  ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್  ಯತ್ನಾಳ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಗೆಲ್ಲುವ ಮೂಲಕ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತದಾರರ ಹೆಸರು ಡಿಲೀಟ್ - ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಟನೆ..! 
ವಾರ್ಡ ನಂಬರ 11ರ ಮತಗಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು,  ಮುಸ್ಲಿಂ ಮತದಾರರ ಹೆಸರುಗಳನ್ನು ಚುನಾವಣಾ ಪಟ್ಟಿಯಿಂದ‌ ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಶಬ್ಬೀರ ಪಾಟೀಲ ಮತಗಟ್ಟೆಯ ಬಳಿ ಪ್ರತಿಭಟನೆ ನಡೆಸಿದರು.  ಕಾಂಗ್ರೆಸ್ಗೆ ಬರಬೇಕಾದ ಮತಗಳನ್ನು ದುರುದ್ದೇಶದಿಂದಲೇ ಮತದಾನದ ಪಟ್ಟಿಯಿಂದ ತೆಗೆದು ಹಾಕಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ತಹಶಿಲ್ದಾರ ಭೋಸಗಿ ಅವರೊಂದಿಗೆ ಸಹಿತ ವಾಗ್ವಾದ ನಡೆಸಿದರು. ಬಳಿಕ ತಹಶಿಲ್ದಾರ ಸಮಸ್ಯೆಗೆ ಕಾರಣ ತಿಳಿಸಿ ಗೊಂದಲದ ವಾತಾವರಣ ತಿಳಿಗೊಳಿಸಿದರು.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ, ಮತಗಟ್ಟೆ ವ್ಯಾಪ್ತಿಯ 100 ಮೀ.ಪ್ರದೇಶದಲ್ಲಿ

ಪತ್ನಿಯೊಡನೆ ಆಗಮಿಸಿ ಡಿಸಿ ಮತದಾನ..!!
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಮ್ಮ ಪತ್ನಿ ಶ್ವೇತಾ ದಾನಮ್ಮನವರ ಜೊತೆ ವಿಜಯಪುರ ನಗರದ ಸರಕಾರಿ ಬಾಲಕರ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 219ರಲ್ಲಿ ಸದರಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ದರಬಾರ ಶಾಲೆಯಲ್ಲಿ ಸ್ಥಾಪಿಲಾಗಿರುವ 219 ರ ಮತಗಟ್ಟೆಗೆ ತೆರಳಿ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಮತದಾನ ಮಹತ್ವ ಸಾರಿದರು.

ವಿಜಯಪುರ ಪಾಲಿಕೆ ಚುನಾವಣೆ: ಯೂಟ್ಯೂಬ್ ಸ್ಟಾರ್‌ನಿಂದ ಮತದಾನ ಜಾಗೃತಿ..!

ಮತಗಟ್ಟೆಗಳಿಗೆ ಭೇಟಿ ನೀಡಿದ ಡಿಸಿ, ಎಸ್ಪಿ! 
ಚುನಾವಣೆ ಶಾಂತಿಯತವಾಗಿ ನಡೆಯಲು ವಿಜಯಪುರ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ನಾನಾ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಶಹಾಪೂರ ಅಗಸಿಯಲ್ಲಿನ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.6 ರಲ್ಲಿರುವ ಮತಗಟ್ಟೆಯಲ್ಲಿ ಕೊಠಡಿ ಸಂಖ್ಯೆ 01ರಲ್ಲಿ ನಡೆಯುತ್ತಿರುವ ಮತದಾನ ಕೇಂದ್ರಕ್ಕೆ ಭೇಟಿ ನೀಡಿದರು.  ಅಲ್ಲದೇ, ಮತದಾರರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
 

click me!