ಟ್ರ್ಯಾಕ್ಟರ್‌ಗೂ ಸವಾಲ್? 9 ಗಂಟೆಯಲ್ಲಿ 40 ಎಕರೆ ಎಡೆ ಹೊಡೆದ ವಿಜಯಪುರದ ಜೋಡೆತ್ತುಗಳು!

Published : Aug 30, 2026, 08:43 PM IST
Vijayapura Jodeettu

ಸಾರಾಂಶ

ಸಾಮಾನ್ಯವಾಗಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ.

ವಿಜಯಪುರ (ಆ.30): ಸಾಮಾನ್ಯವಾಗಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ. ರೈತ ಮಕ್ಬುಲ್ ನಾಗರಾಳ ಅವರಿಗೆ ಸೇರಿದ ಈ ಜೋಡೆತ್ತುಗಳ ಸಾಧನೆ ಇದೀಗ ಸ್ಥಳೀಯವಾಗಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

40 ಎಕರೆಯಲ್ಲಿ ಕೇವಲ 9 ಗಂಟೆ!

ಗೊಳಸಂಗಿ ಗ್ರಾಮದ ರೈತ ಮಕ್ಬುಲ್ ನಾಗರಾಳ ಅವರು ತಮ್ಮ ಜೋಡೆತ್ತುಗಳನ್ನು ಬಳಸಿ ಜೋಡು ಕುಂಟೆಯ ಮೂಲಕ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಸಿದ್ದಾರೆ. ಸಾಮಾನ್ಯವಾಗಿ ಇಷ್ಟೊಂದು ದೊಡ್ಡ ಜಮೀನಿನಲ್ಲಿ ಈ ಕೆಲಸ ಪೂರ್ಣಗೊಳಿಸಲು 18ರಿಂದ 20 ಗಂಟೆಗಳ ಸಮಯ ಬೇಕಾಗುತ್ತದೆ. ಆದರೆ ಮಕ್ಬುಲ್ ಅವರ ಜೋಡೆತ್ತುಗಳು ನಿರಂತರವಾಗಿ ಶ್ರಮಿಸಿ ಕೇವಲ 9 ಗಂಟೆಗಳಲ್ಲೇ ಕೆಲಸ ಪೂರ್ಣಗೊಳಿಸಿರುವುದು ವಿಶೇಷ.

ಜೋಡೆತ್ತುಗಳ ವೇಗ ಕಂಡು ಅಚ್ಚರಿಪಟ್ಟ ಜನ!

ಜಮೀನಿನಲ್ಲಿ ಜೋಡೆತ್ತುಗಳು ಎಡೆ ಹೊಡೆಯುತ್ತಿದ್ದ ದೃಶ್ಯ ಕಂಡು ಸಾರ್ವಜನಿಕರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ 40 ಎಕರೆ ಜಮೀನಿನ ಕೆಲಸ ಪೂರ್ಣಗೊಳಿಸಿದ ಎತ್ತುಗಳ ಸಾಮರ್ಥ್ಯಕ್ಕೆ ಗ್ರಾಮಸ್ಥರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಎತ್ತುಗಳ ಸಾಧನೆಯಲ್ಲ, ಅವುಗಳನ್ನು ಸಮರ್ಥವಾಗಿ ಸಾಕಿ, ತರಬೇತಿ ನೀಡಿ ಕೃಷಿ ಚಟುವಟಿಕೆಯಲ್ಲಿ ಬಳಸುತ್ತಿರುವ ರೈತ ಮಕ್ಬುಲ್ ನಾಗರಾಳ ಅವರ ಪರಿಶ್ರಮಕ್ಕೂ ಸಿಕ್ಕ ಗೌರವ ಎನ್ನಬಹುದು.

ಸಾಧನೆ ಬಳಿಕ ಬಸವೇಶ್ವರನಿಗೆ ವಿಶೇಷ ಪೂಜೆ

ಜೋಡೆತ್ತುಗಳು 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯುವ ಕೆಲಸ ಪೂರ್ಣಗೊಳಿಸಿದ ಬಳಿಕ ಮಕ್ಬುಲ್ ನಾಗರಾಳ ಅವರು ಬಸವೇಶ್ವರ ದೇಗುಲಕ್ಕೆ ತೆರಳಿ ವಿಶೇಷವಾಗಿ ತೆಂಗಿನಕಾಯಿ ಒಡೆಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಬಸವನ ಬಾಗೇವಾಡಿಯ ಬಸವೇಶ್ವರ ದೇಗುಲದಲ್ಲಿ ತೆಂಗಿನಕಾಯಿ ಒಡೆಸಿ ತಮ್ಮ ಎತ್ತುಗಳ ಈ ವಿಶೇಷ ಸಾಧನೆಯನ್ನು ಸಂಭ್ರಮಿಸಿದ್ದಾರೆ.

ಕೃಷಿಯಲ್ಲಿ ಇಂದಿಗೂ ಜೋಡೆತ್ತುಗಳ ಮಹತ್ವ

ಆಧುನಿಕ ಕೃಷಿಯಲ್ಲಿ ಟ್ರ್ಯಾಕ್ಟರ್ ಸೇರಿದಂತೆ ಹಲವು ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಜೋಡೆತ್ತುಗಳು ಇಂದಿಗೂ ಕೃಷಿಯ ಅವಿಭಾಜ್ಯ ಭಾಗವಾಗಿವೆ. ರೈತನೊಂದಿಗೆ ಹೆಜ್ಜೆ ಹಾಕುವ ಎತ್ತುಗಳ ಶ್ರಮ ಮತ್ತು ಸಾಮರ್ಥ್ಯಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.

40 ಎಕರೆ ಜಮೀನಿನ ಎಡೆ ಹೊಡೆಯುವ ಕೆಲಸವನ್ನು ಸಾಮಾನ್ಯ ಸಮಯದ ಅರ್ಧಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿರುವ ಮಕ್ಬುಲ್ ನಾಗರಾಳ ಅವರ ಜೋಡೆತ್ತುಗಳು ಇದೀಗ ಗೊಳಸಂಗಿ ಗ್ರಾಮದಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿವೆ. ಸದ್ಯ 9 ಗಂಟೆ... 40 ಎಕರೆ... ಜೋಡೆತ್ತುಗಳ ಈ ಸಾಧನೆ ನಿಜಕ್ಕೂ ಗಮನ ಸೆಳೆಯುವಂತಿದೆ!

PREV
Read more Articles on
click me!

Recommended Stories

ಎಲೆಕ್ಟ್ರಾನಿಕ್ ಸಿಟಿ ಸೇರಿ ಬೆಂಗಳೂರಿನ ಪ್ರಮುಖ ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ
ಟಿಪ್ಪು ಕಟೌಟ್ ವಿವಾದ: ನಾಳೆ 'ಚಿಕ್ಕಮಗಳೂರು ಚಲೋ' ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ!