
ಬೆಂಗಳೂರು (ಆ.30) ಬೆಂಗಳೂರು ಸಂಚಾರಿ ಪೊಲೀಸರು ಮಹತ್ವದ ಆದೇಶ ಹೊರಡಿಸಿದ್ದಾರೆ. ಟ್ರಾಫಿಕ್ ಸಮಸ್ಯೆ, ಅಪಘಾತ ಸೇರಿದಂತೆ ಹಲವು ಕಾರಣಗಳಿಂದ ಸಂಚಾರ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಇದೀಗ ಬೆಂಗಳೂರು ಪೊಲೀಸರು ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಂಗಳೂರಿನ ಪ್ರಮುಖ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನಕ್ಕೆ ನಿರ್ಬಂಧ ಹೇರಲಾಗಿದೆ. ಇಷ್ಟೇ ಅಲ್ಲ ಮಾರ್ಕೆಟ್ ಫ್ಲೈ ಓವರ್ ಸೇರಿದಂತೆ ಕೆಲ ಮಾರ್ಗಗಳಲ್ಲಿ ಕೆಲ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ.
ಸುಗಮ ಸಂಚಾರ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಫ್ಲೈಓವರ್ ಮೇಲೆ ವಾಹನಗಳ ವೇಗದ ವ್ಯತ್ಯಾಸದಿಂದ ಆಗುತ್ತಿರುವ ಅಪಘಾತ ನಿಯಂತ್ರಿಸಲು ಹಾಗೂ ಟ್ರಾಫಿಕ್ ದಟ್ಟಣೆ ಕಡಮೆ ಮಾಡಲು ಫ್ಲೈಓವರ್ ಮಾರ್ಗದ ಮೇಲೆ ಕೆಲ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ.
ಸಂಚಾರ ದಟ್ಟಣೆ ಹಾಗೂ ಸುರಕ್ಷತೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಪಂಚ ಸೂಚ್ರ ಹೆಣೆದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಲಿವೇಟೆಡ್ ಕಾರಿಡಾರ್ ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ ಸಂಪೂರ್ಣ ನಿಷೇಧಿಸಲಾಗಿದೆ. ದಿನದ 24 ಗಂಟೆ ಈ ಫ್ಲೈಓವರ್ ಮೇಲೆ ಯಾವುದೇ ಕಾರಣಕ್ಕೂ ಬೈಕ್, ಸ್ಕೂಟರ್ ಸೇರಿದಂತೆ ದ್ವಿಚಕ್ರ ವಾಹನ ಸಂಟಚಾರ ಮಾಡುವಂತಿಲ್ಲ.
ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್ ಮೇಲೆ ಭಾರಿ ಸರಕು ವಾಹನಗಳಿಗೆ ದಿನದ 24 ಗಂಟೆ ಸಂಚಾರ ನಿರ್ಬಂಧಿಸಲಾಗಿದೆ. ಗೂಡ್ಸ್ ಆಟೋಗಳು, ಇತರೆ ಸರಕು ಸಾಗಾಣೆ ವಾಹನಗಳಿಗೆ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಿರ್ಬಂಧ ಹೇರಲಾಗಿದೆ.
ಭಾರಿ ಸಂಟಾರ ದಟ್ಟಣೆ ಇರುವ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟ ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಇನ್ನು ಆಟೋ ರಿಕ್ಷಾ, ಮೂರು ಚಕ್ರದ ಗೂಡ್ಸ್ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ತನಕೆ ಎಲ್ಲಾ ಮಾದರಿಯ ಸರಕು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಲಿವೇಟೆಡ್ ಫ್ಲೈ ಓರ್ ಮೇಲೆ ದ್ವಿಚಕ್ರ ವಾಹನ ಮಾತ್ರವಲ್ಲ, ಆಟೋ, ಗೂಡ್ಸ್ ರಿಕ್ಷಾಗಳಿಗೂ ಸಂಚಾರಕ್ಕೂ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ದಿನದ 24 ಗಂಟೆ ಈ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ, ಆಟೋ ಸಂಚಾರ ಮಾಡುವಂತಿಲ್ಲ. ಎಲ್ಲಾ ಮಾದರಿಯ ಸರಕು ಸಾಗಾಣೆ ವಾಹನಗಳಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಿರ್ಬಂಧ ಹೇರಲಾಗಿದೆ.
ಪೀಣ್ಯಾ ಫ್ಲೈಓವರ್ ಆಟೋ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇನ್ನೂ ಗೂಡ್ಸ್ ಆಟೋಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಭಾರಿ ಹಾಗೂ ಮಧ್ಯಮ ಸರಕು ವಾಹನಗಳಿಗೆ ಬೆಳಗ್ಗೆ 7 ರಿಂದ 11 ಗಂಟೆ ಹಾಗೂ ಸಂಜೆ 4 ರಿಂತ ರಾತ್ರಿ 11 ಗಂಟೆ ವರೆಗೆ ನಿರ್ಬಂಧಿಸಲಾಗಿದೆ.
ಇದೇ ವೇಳೆ ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಭಾರಿ ಘನ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮಹತ್ವದ ನಿರ್ಧಾರವನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಪ್ರಕಟಿಸಿದೆ. ಇದೇ ವೇಳೆ ಸಾರ್ವಜನಿಕರು ಸಂಚಾರದಲ್ಲಿ ಮಾಡಿರುವ ಬದಲಾವಣೆ ಗಮನಿಸಿ ಸಹಕರಿಸಲು ಮನವಿ ಮಾಡಿದ್ದಾರೆ.