ಧಮ್, ತಾಕತ್ತು ಇದ್ರೆ ಇಸ್ಲಾಂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಲಿ. ಕರುಣಾನಿಧಿ ಯಾರು? ಸನಾತನ ಧರ್ಮದಲ್ಲಿಯೇ ಹುಟ್ಟಿದವನು. ಕೆಟ್ಟ ಹುಳುಗಳು ಈಗ ಹೊರಗೆ ಬರುತ್ತಿವೆ. ತಮಿಳುನಾಡು ಮೊದಲಿನ ರೀತಿ ಉಳಿದಿಲ್ಲ. ಡಿಎಂಕೆ ನಾಶವಾಗಲಿದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ರಾಯಚೂರು(ಸೆ.09): ಸನಾತನ ಧರ್ಮದ ಬಗ್ಗೆ ಮಾತನಾಡುವರಿಗೆ ಕುಷ್ಟರೋಗ, ಏಡ್ಸ್ ಹತ್ತಿದೆ ಹೊರತು ಸನಾತನ ಧರ್ಮಕ್ಕೆ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಶುಕ್ರವಾರ ಟೀಕಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಗಲರು ಎಷ್ಟು ವರ್ಷ ನಮ್ಮ ದೇಶ ಆಳಿದರೂ, ಔರಂಗಜೇಬ್‌ನಂಥ ಮತಾಂಧರಿಗೂ ಭಾರತವನ್ನು ಇಸ್ಲಾಮಿಕರಣ ಮಾಡಲು ಆಗಲಿಲ್ಲ. ಮಹ್ಮದ್ ಘೋರಿ, ಘಜ್ನಿ ದಾಳಿ ಮಾಡಿದರೂ ಏನು ಆಗಲಿಲ್ಲ. ಆದರೆ, ಒಬ್ಬ ಮಂತ್ರಿ ಸನಾತನ ಧರ್ಮದ ಹುಟ್ಟು ಎಲ್ಲಿ ಎಂದು ಪ್ರಶ್ನಿಸುತ್ತಾರೆ. ಆ ಮಂತ್ರಿಗೆ ಅವರ ಹುಟ್ಟಿನ ಬಗ್ಗೆಯೇ ಗೊತ್ತಿಲ್ಲ. ಇನ್ನೂ ಸನಾತನ ಧರ್ಮದ ಕುರಿತು ಅವರು ಏನು ಪ್ರಶ್ನಿಸುತ್ತಾರೆ. ಈಗ ಹೇಳಿಕೆ ನೀಡುವವರೇ ಸನಾತನ ಧರ್ಮಕ್ಕೆ ಕ್ಯಾನ್ಸರ್ ಇದ್ದಂಗೆ ಎಂದು ವಾಗ್ದಾಳಿ ಮಾಡಿದರು.
ಇವರಿಗೆ ಧಮ್, ತಾಕತ್ತು ಇದ್ರೆ ಇಸ್ಲಾಂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಲಿ. ಕರುಣಾನಿಧಿ ಯಾರು? ಸನಾತನ ಧರ್ಮದಲ್ಲಿಯೇ ಹುಟ್ಟಿದವನು. ಕೆಟ್ಟ ಹುಳುಗಳು ಈಗ ಹೊರಗೆ ಬರುತ್ತಿವೆ. ತಮಿಳುನಾಡು ಮೊದಲಿನ ರೀತಿ ಉಳಿದಿಲ್ಲ. ಡಿಎಂಕೆ ನಾಶವಾಗಲಿದೆ ಎಂದರು.
ಮೋದಿ ಆಡಳಿತದಲ್ಲಿ ಅಖಂಡ ಭಾರತದ ಕಡೆಗೆ ದೇಶ ಸಾಗಿದೆ: ಯತ್ನಾಳ
ಸನಾತನ ಧರ್ಮಕ್ಕೆ ಯಾರು ಸ್ಥಾಪಕರೇ ಇಲ್ಲ. ಸನಾತನ ಧರ್ಮಕ್ಕೆ ಕೊನೆಯೇ ಇಲ್ಲ. ಸನಾತನ ಧರ್ಮ ಅನಂತವಾಗಿದೆ. ಸನಾತನ ಧರ್ಮ ಈ ದೇಶದ ಸಂಸ್ಕೃತಿಯಾಗಿದೆ. ಐದು ಸಾವಿರ ವರ್ಷಗಳ ಹಿಂದೆ ರಾಮಾಯಣ ಆಗಿದೆ. 3.5 ಸಾವಿರ ವರ್ಷಗಳ ಹಿಂದೆ ಮಹಾಭಾರತ ಆಗಿದೆ. ಸನಾತನ ಧರ್ಮದ ಮೂಲ ಹುಡುಕಲು ಯಾರಿಗೂ ಸಾಧ್ಯವಿಲ್ಲ. ಸನಾತನ ಧರ್ಮ ದೇವರ ಸೃಷ್ಟಿಯಾಗಿದೆ ಎಂದು ಹೇಳಿದರು.
ನಮ್ಮ ದೇಶದ ಸಂವಿಧಾನ ಉಳಿಯಬೇಕಾದರೆ ಸನಾತನ ಧರ್ಮ ಉಳಿಯಬೇಕು. ಭಾರತ ಇಸ್ಲಾಮಿಕರಣವಾದರೆ ಸಂವಿಧಾನವೇ ಹೋಗುತ್ತದೆ, ಜಿಹಾದ್ ಬರುತ್ತದೆ. ಜಮ್ಮು-ಕಾಶ್ಮೀರದಲ್ಲಿ ಕಲಂ 370 ಜಾರಿಗೆ ಮಾಡುವ ಮುನ್ನ ಮೀಸಲಾತಿ ಇರಲಿಲ್ಲ. ಪ್ರಧಾನಿ ಮೋದಿ 370 ತೆರವು ಗೊಳಿಸಿದ್ದರ ಫಲವಾಗಿಯೇ ಅಲ್ಲಿನ ದಲಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ದೊರಕಿದೆ ಎಂದರು.
ಇಂಡಿಯಾ ಕೂಟದಲ್ಲಿ ಜಾಮೀನು ಗಿರಾಕಿಗಳು:
ಇಂಡಿಯಾ ಮೈತ್ರಿ ಕೂಟದಲ್ಲಿ ಇರುವ ಪಕ್ಷಗಳ ಮುಖಂಡರ ಮೇಲೆ ಕೇಸ್‌ಗಳಿವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಲಾಲು ಪ್ರಸಾದ ಯಾದವ್ ಅವರು ಜಾಮೀನಿನ ಮೇಲಿದ್ದು, ಅವರೆಲ್ಲರೂ ಜಾಮೀನು ಗಿರಾಕಿಗಳು. ಲೋಕಸಭೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ನನ್ನ ಗಮನಕ್ಕಿಲ್ಲ ಅದೇನಿದ್ದರೂ ಹೈಕಮಾಂಡ್ ಹಂತದಲ್ಲಿಯೇ ನಡೆಯುತ್ತದೆ ಅದೇನೆಂಬುವುದು ನನಗೆ ಗೊತ್ತಿಲ್ಲವೆಂದರು. ಹೈಕಮಾಂಡ್ ಹಂತದಲ್ಲಿ ಏನು ನಡೆದಿದೆಯೋ ಗೊತ್ತಿಲ್ಲ. ಕಾಂಗ್ರೆಸ್‌ನವರಿಗೆ ತಮ್ಮ 135 ಶಾಸಕರನ್ನೇ ಸಮಾಧಾನ ಮಾಡೋಕೆ ಆಗುತ್ತಿಲ್ಲ. 2-3 ತಿಂಗಳಲ್ಲೇ ಅಸಮಾಧಾನ ಸ್ಫೋಟ ಆಗಿದೆ.ಇನ್ನೂ ಬಿಜೆಪಿಯವರನ್ನು ಕರೆದುಕೊಂಡು ಹೋಗಿ ಟಿಕೆಟ್ ಕೊಡ್ತಾರಾ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಂದ ಬಿಜೆಪಿಗೇನು ಲಾಭವಾಗಿಲ್ಲ. ನನ್ನಿಂದ ಲಿಂಗಾಯತರಿಗೆ ಒಳ್ಳೆದಾಯ್ತು ಎನ್ನುತ್ತಾರೆ ಹಾಗೇನಿಲ್ಲ. ಅವರು ಸಾಕಷ್ಟು ದುಡ್ಡು ಮಾಡಿಕೊಂಡರು. ಭೂಸ್ವಾಧೀನದಲ್ಲಿ ಸಾಕಷ್ಟು ಹಗರಣ ನಡೆದಿದ್ದು, ಎಲ್ಲವೂ ಹೊರ ಬರುತ್ತವೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗೆ ಅಕೌಂಟ್ ತೆರೆದದ್ದೇ ಮೋದಿ:
ಬಿಜೆಪಿಯ ಗ್ಯಾರಂಟಿಗಳು ಬೇರೆ ಇವೆ. ಅವು ಜಾರಿಯಾದರೆ ಕಾಂಗ್ರೆಸ್ ಪಕ್ಷವೇ ಇರುವುದಿಲ್ಲ. ಗ್ಯಾರಂಟಿಗೆ ಅಕೌಂಟ್ ತೆಗೆದಿದ್ದೆ ಮೋದಿಯವರು. ಮೋದಿಯವರು ಬಂದ ಮೇಲೆ ಜನಧನ್ ಯೋಜನೆ ಮೂಲಕ ಪ್ರತಿ ಹೆಣ್ಣು ಮಗಳು ಅಕೌಂಟ್ ತೆರೆಯುವಂತಾಯಿತು. ಗ್ಯಾರಂಟಿ ಮೇಲೆ ಚುನಾವಣೆ ಆಗುವುದಿಲ್ಲ ಎಂದರು.
ವೈದ್ಯನ ಮೇಲೆ ಗುಂಡಿನ ದಾಳಿ ಪ್ರಕರಣ; ಕ್ರಿಪ್ಟೋ ಕರೆನ್ಸಿ, ಮುಂಬೈ ಗ್ಯಾಂಗ್ ಕೃತ್ಯ?
ರೈತರು ದುಡ್ಡಿಗಾಗಿ ಸಾಯೋರಲ್ಲ:
ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ನಾವು ಕೋಟಿ ಕೋಟಿ ಹಣ ಕೊಡ್ತಿವಿ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ತಿಳಿಸಲಿ. ಐದು ಲಕ್ಷ ರು. ಹಣ ಸಿಗುತ್ತದೆ ಎಂಬ ಕಾರಣಕ್ಕೆ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದು ವಿಜಯಪುರ ಮಂತ್ರಿ ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಡಿಕೆಶಿಯವರಿಗೂ ನಾನು ಚಾಲೆಂಜ್ ಮಾಡ್ತಿನಿ. 25 ಕೋಟಿ ಕೊಡ್ತಿನಿ ಆತ್ಮಹತ್ಯೆ ಮಾಡಿಕೊಳ್ಳಲಿ ನೋಡೊಣ ಎಂದು ಸವಾಲೆಸೆದರು.
ಅನುಮತಿ ಪಡೆಯದೆ ಗಣೇಶನ್ನೂ ಕೋರಿಸ್ತಿವಿ, ಡಿಜೆನೂ ಹಾಕ್ತಿವಿ
ಕಾಂಗ್ರೆಸ್ ಯಾವಾಗಲೂ ಹಿಂದೂ ವಿರೋಧಿ. ನಮ್ಮ ಹಬ್ಬ ಹರಿದಿನ ಮೇಲೆ ಯಾವುದೇ ನಿರ್ಬಂಧ ಹೇರಿದರೂ ನಾವು ಕೇಳುವುದಿಲ್ಲ. ವಿಜಯಪುರದಲ್ಲಿ ಡಿಜೆನೂ ಹಾಕುತ್ತೇವೆ. ಅಯೋಧ್ಯೆ ರಾಮಮಂದಿರದ ಹಾಡು ಹಾಕುತ್ತೇವೆ. ನಾವು ಗಣಪತಿ ಕೂಡಿಸಲು ಅನುಮಿತ ಕೂಡ ಪಡೆಯುವುದಿಲ್ಲ. ಅದೆಷ್ಟು ಕೇಸ್ ಹಾಕುತ್ತಾರೋ ಹಾಕಲಿ. ಗಣೇಶ ಕೂಡಿಸಲು ಅನುಮತಿ ಕೇಳೊಕೆ ಇದೇನು ಪಾಕಿಸ್ತಾನವಲ್ಲ ಹಿಂದೂಸ್ತಾನ. ತರುವುದಾದರೆ ಎಲ್ಲ ಧರ್ಮಗಳ ಆಚರಣೆಗಳಿಗೂ ಕಠಿಣ ಕಾನೂನು ತರಲಿ. ಕೇವಲ ಗಣೇಶೋತ್ಸವಕ್ಕೆ ಮಾತ್ರ ಯಾಕೆ ಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರಶ್ನಿಸಿದರು.