
ವಿಜಯನಗರ/ದಾಣಗೆರೆ (ನ.19): ಯುವಕ-ಯುವತಿಯ ಪ್ರೀತಿಯ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸತ್ತೂರು ಗೊಲ್ಲರಹಟ್ಟಿಯಲ್ಲಿ ನಡೆದಿದ್ದು, ಯುವತಿಯ ಕುಟುಂಬಸ್ಥರು ಯುವಕನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಯುವತಿಯ ಕಡೆಯ ನೂರಾರು ಜನರು ಹಲ್ಲೆ ನಡೆಸಿದ್ದರಿಂದ ಯುವಕನ ಕುಟುಂಬದ ಆರಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಉಮಾಪತಿ(45), ಚನ್ನಪ್ಪ (40), ಪ್ರಶಾಂತ್(23) ಎಂಬುವವರಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಎರಡು ಕುಟುಂಬಗಳ ಯುವಕ-ಯುವತಿ ಪರಸ್ಪರ ಪ್ರೀತಿಸಿ ಯಾರಿಗೂ ಸಿಗದೆ ಓಡಿಹೋಗಿ ಮದುವೆಯಾಗಿರುವುದೇ ಈ ಘಟನೆಗೆ ಕಾರಣವಾಗಿದೆ. 25 ವರ್ಷದ ಯುವಕ ಬಸವರಾಜ ವಾಲ್ಮೀಕಿ ಸಮುದಾಯದವನು ಕೂಲಿ ಕೆಲಸ ಮಾಡಿಕೊಂಡು ಸತ್ತೂರು ಗೊಲ್ಲರಹಟ್ಟಿಯಲ್ಲಿ ಇದ್ದವನು. ಇನ್ನು ಅದೇ ಊರಿನ ಯಾದವ ಸಮಾಜದ ಯುವತಿ ಐಶ್ವರ್ಯಾ ಕಾಲೇಜು ಓದುತ್ತಿದ್ದ ಹುಡುಗಿ. ಇಬ್ಬರು ನಡುವೆ ಪರಿಚಯ ಪ್ರೀತಿಗೆ ತಿರುಗಿ ಕಳೆದೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು, ಮದುವೆಯಾಗಲು ಮುಂದಾಗಿದ್ದರು ಎನ್ನಲಾಗಿದೆ.
ಆದರೆ ಈ ವಿಚಾರವಾಗಿ ಯುವತಿಯ ಮನೆಯವರಿಗೆ ಗೊತ್ತಾದ ಬಳಿಕ ಮದುವೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವಾಗ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದರೋ, ಜೋಡಿ ಮನೆಯಿಂದ ಓಡಿಹೋಗಲು ನಿರ್ಧರಿಸಿದ್ದಾರೆ. ಅಂತಯೇ ಕಳೆದ ನಾಲ್ಕು ದಿನಗಳ ಹಿಂದೆ ಯಾರಿಗೂ ಹೇಳದೇ ಮನೆಬಿಟ್ಟು ಓಡಿಹೋಗಿದ್ದಾರೆ. ಮದುವೆಯೂ ಆಗಿದ್ದಾರೆ ಎನ್ನಲಾಗಿದೆ. ಆದರೆ ಎಲ್ಲಿ ಇದ್ದಾರೆಂದು ತಿಳಿದುಬಂದಿಲ್ಲ.
ಈ ಪ್ರಕರಣದಲ್ಲಿ ಯುವಕ-ಯುವತಿಯ ಪ್ರೀತಿಯ ವಿಚಾರಕ್ಕೆ ಪೋಷಕರು ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ವಾಲ್ಮೀಕಿ ಸಮುದಾಯದ ಯುವಕ, ಯಾದವ ಸಮುದಾಯದ ಯುವತಿ ನಡುವೆ ಪ್ರೀತಿಯೇ ಎರಡು ಕುಟುಂಬಗಳ ನಡುವೆ ಮಾರಾಮಾರಿಗೆ ಕಾರಣವಾಗಿದೆ.
ವಾಲ್ಮೀಕಿ ಸಮುದಾಯದ ಯುವಕ ಬಸವರಾಜನ ಜೊತೆ ಐಶ್ವರ್ಯಾ ಓಡಿಹೋಗಿರುವ ವಿಚಾರ ತಿಳಿಯುತ್ತಿದ್ದಂತೆ ಕುದ್ದು ಹೋಗಿರುವ ಯುವತಿ ಕುಟುಂಬಸ್ಥರು ಏಕಾಏಕಿ ನೂರಕ್ಕೂ ಹೆಚ್ಚು ಜನರು ಯುವಕ ಬಸವರಾಜ ಕುಟುಂಬಸ್ಥರ ಮೇಲೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುವ ಆಘಾತಕಾರಿ ಘಟನೆಯ ವಿಡಿಯೋ ಬಸವರಾಜ ಮನೆಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.
ಬಸವರಾಜ ಐಶ್ವರ್ಯ ಓಡಿಹೋಗಲು ಯುವಕನ ಮನೆಯವರ ಕುಮ್ಮಕ್ಕಿನಿಂದಲೇ ಎಂದು ಯುವತಿಯ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಆದರೆ ಅವರು ಎಲ್ಲಿದ್ದಾರೆ, ಓಡಿಹೋದ ವಿಚಾರ ನಮಗೇನೂ ಗೊತ್ತಿಲ್ಲ ಹಲ್ಲೆಗೊಳಗಾದ ಯುವಕನ ಕುಟುಂಬಸ್ಥರು ನೋವಿನಿಂದ ಹೇಳುತ್ತಿರುವ ಮಾತಿದು. ಯುವಕ-ಯುವತಿ ಮಾಡಿದ ತಪ್ಪಿಗೆ ಪೋಷಕರ ಹಲ್ಲೆಗೊಳಗಾಗಿ ನರಳುವಂತಾಗಿದೆ ಹಲ್ಲೆ ನಡೆಸಿದ ಯುವಕನ ಕುಟುಂಬಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.