
ಹೊಸಪೇಟೆ: ಜಿಲ್ಲೆಯ ಐತಿಹಾಸಿಕ ಶ್ರೀಮಂತಿಕೆಗೆ ಮತ್ತೊಂದು ಗರಿ ಎಂಬಂತೆ, ಹೊಸಪೇಟೆಯಿಂದ ಬಳ್ಳಾರಿಗೆ ಹಾದು ಹೋಗುವ ಮಾರ್ಗದಲ್ಲಿರುವ ಧರ್ಮಸಾಗರ ಗ್ರಾಮದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಗ್ರಾಮವು ಕೇವಲ ಐತಿಹಾಸಿಕ ತಾಣವಷ್ಟೇ ಅಲ್ಲದೆ, ಆದಿಮಾನವನು ಇಲ್ಲಿ ವಾಸವಿದ್ದನು ಎನ್ನುವುದಕ್ಕೆ ಸ್ಪಷ್ಟ ಕುರುಹುಗಳನ್ನು ಒದಗಿಸುವ ಮೂಲಕ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ 'ವಿಜಯನಗರ ತಿರುಗಾಟ ಸಂಶೋಧನ ತಂಡ'ವು ಧರ್ಮಸಾಗರ ಗ್ರಾಮದ ನಿವಾಸಿ ಶಂಕರ ಅವರ ನೆರವಿನೊಂದಿಗೆ ನಡೆಸಿದ ಕ್ಷೇತ್ರಕಾರ್ಯದ ವೇಳೆ ಈ ಮಹತ್ವದ ಅನ್ವೇಷಣೆ ಬೆಳಕಿಗೆ ಬಂದಿದೆ.
ವಿಜಯನಗರ ಕಾಲದ ಐತಿಹಾಸಿಕ ಹಿನ್ನೆಲೆ ಮತ್ತು ದಾನಶಾಸನಗಳು ಧರ್ಮಸಾಗರ ಗ್ರಾಮದ ಪಕ್ಕದಲ್ಲೇ ಇರುವ ಪಾಪಿನಾಯಕನಹಳ್ಳಿಯನ್ನು ವಿಜಯನಗರದ ಕಾಲಾವಧಿಯಲ್ಲಿ 'ಪಾಪನಾಯಕ' ಎಂಬ ಪಾಳೆಯಗಾರ ಆಳುತ್ತಿದ್ದನು ಎಂಬ ಮಾಹಿತಿ ಲಭ್ಯವಿದೆ. ಇದಕ್ಕೆ ಪೂರಕವಾಗಿ ಆ ಗ್ರಾಮದ ಚಾವಡಿಯ ಬಳಿ ಹಾಗೂ ಹೊರವಲಯದ ಅಂಕಾಲಮ್ಮ ದೇಗುಲದ ಕಂಬದ ಮೇಲಿರುವ ಶಿಲಾಶಾಸನಗಳು ಸಾಕ್ಷ್ಯ ನುಡಿಯುತ್ತವೆ.
ಇದರೊಂದಿಗೆ, ಸಮೀಪದ ಬೈಲುವದ್ದಿಗೆರೆ ಗ್ರಾಮದ ಆಂಜನೇಯ ದೇಗುಲದ ಬಳಿ ಪತ್ತೆಯಾಗಿರುವ ಗ್ರಾನೈಟ್ ಕಲ್ಲಿನ ಶಾಸನವು ವಿಜಯನಗರ ಸಾಮ್ರಾಜ್ಯದ ಇಮ್ಮಡಿ ದೇವರಾಯನ ಕಾಲದ್ದಾಗಿದೆ. ಇಮ್ಮಡಿ ದೇವರಾಯನ ಪತ್ನಿ ಅಟಣಲಾದೇವಿಯ ನೆನಪಿಗಾಗಿ 'ಅಂಣಲಾಪುರ' ಎಂಬ ಊರನ್ನು ಹಿತ್ತಿಲ ಬಾಗಿಲ ಮಲ್ಲದೇವರು ನಿರ್ಮಿಸಿ, ಆತನ ಹೆಸರಲ್ಲೇ ದಾನ ನೀಡಿದ ವಿವರಗಳು ಈ ಅಪ್ರಕಟಿತ ಶಾಸನದಲ್ಲಿವೆ.
ಕೃಷ್ಣದೇವರಾಯನ ಕಾಲದ ಕೆರೆ ಶಾಸನ ಧರ್ಮಸಾಗರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಹಾಸು ಬಂಡೆಕಲ್ಲಿನ ಮೇಲೆ ಕೃಷ್ಣದೇವರಾಯನ ಕಾಲದ ಮತ್ತೊಂದು ಪ್ರಕಟಿತ ಶಾಸನವಿದೆ. ಇದು ಕನ್ನಡ ಲಿಪಿಯಲ್ಲಿದ್ದರೂ, ತೆಲುಗು ಮಿಶ್ರಿತ ಭಾಷೆಯಲ್ಲಿದೆ. "ಈ ದಾನಶಾಸನವು ವಿಜಯನಗರದ ಅರಸರು ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಿಗೆ ಸಮಾನ ಗೌರವ ನೀಡುತ್ತಿದ್ದರು ಎಂಬುದಕ್ಕೆ ಭದ್ರ ಪುರಾವೆಯಾಗಿದೆ" ಎಂದು ಸಂಶೋಧನ ತಂಡದ ಪ್ರಮುಖರಾದ ಪ್ರೊ. ತಿಪ್ಪೇಸ್ವಾಮಿ ಎಚ್. ತಿಳಿಸಿದ್ದಾರೆ.
'ಕರೆಕಲ್ಲು ಮಾಗಣಿ' ಮತ್ತು ಆದಿಮಾನವರ ಕಾಲದ ಕಲ್ಲುಗೊಡಲಿಗಳು ಧರ್ಮಸಾಗರದಲ್ಲಿ ಆದಿಮಾನವನು ನೆಲೆಸಿದ್ದಕ್ಕೆ ಸಾಕ್ಷಿಯಾಗಿ ತಜ್ಞರು ಇಲ್ಲಿನ ಗುಡ್ಡದ ಮೆಟ್ಟಿಲು ಕಲ್ಲುಗಳ ರಚನೆಯನ್ನು ಗುರುತಿಸಿದ್ದಾರೆ. ಭೂವೈಜ್ಞಾನಿಕವಾಗಿ ಇವುಗಳನ್ನು 'ಡೊಲರೈಟ್ ಡೈಕ್' (ಕಪ್ಪು ಶಿಲೆ) ಮಾದರಿ ಎಂದು ಕರೆಯಲಾಗುತ್ತದೆ.
ಸ್ಥಳೀಯರ ನಂಬಿಕೆ: ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯು ವನವಾಸದ ಸಂದರ್ಭದಲ್ಲಿ ಈ ಕಲ್ಲುಗುಡ್ಡದ ಮೇಲೆ ನಡೆದುಕೊಂಡು ಹೋಗಿದ್ದರಿಂದ ಇಲ್ಲಿನ ಕಲ್ಲುಗಳು ಕಪ್ಪಾಗಿವೆ ಎಂಬುದು ಗ್ರಾಮಸ್ಥರ ಗಾಢ ನಂಬಿಕೆಯಾಗಿದೆ. ಹೀಗಾಗಿಯೇ ಈ ಕಪ್ಪು ಗುಂಡುಕಲ್ಲುಗಳ ಸಮೂಹಕ್ಕೆ ಜನರು 'ಕರೆಕಲ್ಲು ಮಾಗಣಿ' ಎಂದು ಕರೆಯುತ್ತಾರೆ.
ಪುರಾತತ್ವ ಪುರಾವೆ: ಕ್ಷೇತ್ರಕಾರ್ಯದ ವೇಳೆ ಇಲ್ಲಿ ಆದಿಮಾನವ ಬಳಸುತ್ತಿದ್ದ ಎನ್ನಲಾದ ಅತ್ಯಂತ ನುಣುಪಾದ ಕೆತ್ತನೆಯುಳ್ಳ ಕಲ್ಲುಗೊಡಲಿಗಳು (Stone Axes) ದೊರೆತಿವೆ.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕ ಡಾ. ಗೋವಿಂದ ಅವರ ಪ್ರಕಾರ, "ಸ್ಥಳೀಯರ ಮಾಹಿತಿಯಂತೆ ಈ ಗುಡ್ಡದ ಇಳಿಜಾರಿನಲ್ಲಿ ಹಿಂದೆ 'ಹಳೆ ಊರು' ಇತ್ತು. ಅದಕ್ಕೆ ಪೂರಕವಾಗಿ ಅಲ್ಲಿ ವಾಸದ ಮನೆಗಳ ಹಳೆಯ ತಳಪಾಯದ ರಚನೆಗಳು, ಅನತಿ ದೂರದಲ್ಲೇ ಕೆರೆ ಹಾಗೂ ಕೆರೆಯ ತೂಬುಗಳು ಇಂದಿಗೂ ಕಾಣಸಿಗುತ್ತವೆ. ಆದರೆ, ಪ್ರಸ್ತುತ ಈ ಹಳೆಯ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ" ಎಂದಿದ್ದಾರೆ.
ರಹಸ್ಯಮಯ 101 ಲಿಂಗಗಳ ಗುಡಿ ಗ್ರಾಮದ ಹೊರವಲಯದಲ್ಲಿ ಪೂರ್ವಭಿಮುಖವಾಗಿ ನಿರ್ಮಿಸಲಾದ ಒಂದು ಸಣ್ಣ ವಿಶಿಷ್ಟ ಗುಡಿಯಿದೆ. ಈ ಗರ್ಭಗುಡಿಯ ಗೋಡೆಗೆ ಶಿವಲಿಂಗದ ಆಕಾರ ಹೋಲುವ ಗುಂಡುಕಲ್ಲುಗಳಿವೆ. ಇದರ ಎಡ ಮತ್ತು ಬಲ ಬದಿಯಲ್ಲಿರುವ ಸಣ್ಣ ಹಾಗೂ ದೊಡ್ಡದಾದ ಒಟ್ಟು 101 ಗುಂಡುಕಲ್ಲುಗಳನ್ನೇ ಶಿವಲಿಂಗಗಳೆಂದು ಭಾವಿಸಿ ಇಲ್ಲಿನ ಭಕ್ತರು ಅನಾದಿ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದಾರೆ. ಪ್ರತಿವರ್ಷ ಮಹಾಶಿವರಾತ್ರಿಯ ಜಾಗರಣೆಯ ದಿನದಂದು ಈ ಗುಡಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.
ಸಂಶೋಧಕರ ಅಪೀಲು: "ಧರ್ಮಸಾಗರದಲ್ಲಿ ದೊರೆತಿರುವ ಈ ಅಪರೂಪದ ಶಾಸನಗಳು, ಕಲ್ಲುಗೊಡಲಿಗಳು ಹಾಗೂ 101 ಲಿಂಗಗಳ ಗುಡಿಯಂತಹ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಸ್ಮಾರಕಗಳನ್ನು ಸಂಬಂಧಪಟ್ಟ ಪುರಾತತ್ವ ಇಲಾಖೆಯು ತಕ್ಷಣವೇ ರಕ್ಷಿಸಬೇಕು. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಸಂಶೋಧಕ ಡಾ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ.
ಈ ಯಶಸ್ವಿ ಕ್ಷೇತ್ರಕಾರ್ಯದಲ್ಲಿ ಸಂಶೋಧನ ತಂಡದ ಸದಸ್ಯರಾದ ಪ್ರೊ. ತಿಪ್ಪೇಸ್ವಾಮಿ ಎಚ್, ಡಾ. ಗೋವಿಂದ, ಡಾ. ಕೃಷ್ಣೇಗೌಡ ಹಾಗೂ ಸಂಶೋಧಕರಾದ ಎಚ್. ರವಿ, ಅಶೋಕ್ ನಾಯಕ್ ದಿದ್ದಿಗಿ ಮತ್ತು ಇಸ್ಮಾಯಿಲ್ ಸಿದ್ದಿಕ್ ಪಾಲ್ಗೊಂಡಿದ್ದರು.