
ಬೆಂಗಳೂರು (ಜೂ.27): ಬೆಂಗಳೂರು ವೆಸ್ಟ್ ಸಿಟಿ ಕಾರ್ಪೊರೇಷನ್ (BWCC) ಮಾಲೀಕತ್ವದ, ನಗರದ ಅತ್ಯಂತ ಮಹತ್ವಾಕಾಂಕ್ಷೆಯ ಮೊದಲ ಹವಾನಿಯಂತ್ರಿತ (AC) ಅಂಡರ್‌ಗ್ರೌಂಡ್ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 'ಕೃಷ್ಣದೇವರಾಯ ಪಾಲಿಕೆ ಬಜಾರ್' ಉದ್ಘಾಟನೆಯಾಗಿ ಬರೋಬ್ಬರಿ 23 ತಿಂಗಳು ಕಳೆದರೂ ಜನರಿಲ್ಲದೆ ಭಣಗುಡುತ್ತಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ವ್ಯಯಿಸಿ ನಿರ್ಮಿಸಿದ ಈ ಸುಸಜ್ಜಿತ ಮಾರ್ಕೆಟ್ ಈಗ ಅಧಿಕಾರಿಗಳ ಮತ್ತು ಯೋಜನೆಯ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿದೆ.
ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಗಾಗಿ ಸುಮಾರು ₹14 ಕೋಟಿ ಭಾರಿ ವೆಚ್ಚದಲ್ಲಿ ಈ ಭೂಗತ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ಇಲ್ಲಿ ಒಟ್ಟು 79 ಸುಸಜ್ಜಿತ ಅಂಗಡಿ ಮುಂಗಟ್ಟುಗಳಿವೆಯಾದರೂ, ಅವುಗಳಲ್ಲಿ ಬಹುತೇಕ ಅಂಗಡಿಗಳು ಇನ್ನೂ ಬೀಗ ಹಾಕಿದ ಸ್ಥಿತಿಯಲ್ಲೇ ಇವೆ. ಇದಕ್ಕೆ ಕಾರಣ ಬೀದಿ ಬದಿ ವ್ಯಾಪಾರಿಗಳು ನೆಲದಡಿಯ ಈ ಎಸಿ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲು ಯಾವುದೇ ಆಸಕ್ತಿ ತೋರಿಸುತ್ತಿಲ್ಲ.
ಮಾರುಕಟ್ಟೆಯ ಒಳಗೆ ಅಂಗಡಿಗಳು ಖಾಲಿ ಬಿದ್ದಿದ್ದರೆ, ಹೊರಗಿನ ಸರ್ವಿಸ್ ರಸ್ತೆಯ ಫುಟ್‌ಪಾತ್‌ಗಳನ್ನು (ಪಾದಚಾರಿ ಮಾರ್ಗ) ಬೀದಿ ಬದಿ ವ್ಯಾಪಾರಿಗಳು ಸಂಪೂರ್ಣವಾಗಿ ಅತಿಕ್ರಮಿಸಿಕೊಂಡು ಸಣ್ಣಪುಟ್ಟ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲಿ ನಡೆಯುವುದೇ ದುಸ್ತರವಾಗಿದೆ. ಇದರ ಜೊತೆಗೆ ಸರ್ವಿಸ್ ರಸ್ತೆಯ ಇರಡೂ ಬದಿಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಹಾಗೂ ಗೊಂದಲ ಮತ್ತಷ್ಟು ಹೆಚ್ಚಾಗಿದೆ.
ಬೀದಿ ಬದಿ ವ್ಯಾಪಾರಿಗಳನ್ನು ತಕ್ಷಣವೇ ಈ ಭೂಗತ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿರುವ ಸಾಮಾಜಿಕ ಕಾರ್ಯಕರ್ತರು, "ಸರ್ವಿಸ್ ರಸ್ತೆಯ ಫುಟ್‌ಪಾತ್ ಮೇಲಿರುವ ವ್ಯಾಪಾರಿಗಳನ್ನು ಕೆಳಗೆ ಶಿಫ್ಟ್ ಮಾಡಿ, ಮಾರುಕಟ್ಟೆಯಿಂದ ಆದಾಯ ಗಳಿಸುವಂತೆ ನಾನು ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ನಾಲ್ಕೈದು ವ್ಯಾಪಾರಿಗಳು ಅಂಗಡಿಗಳನ್ನು ಬಾಡಿಗೆಗೆ ಪಡೆಯಲು ಮುಂದೆ ಬಂದಿದ್ದರಾದರೂ, ಅವರು ತಮಗೆ ನೀಡಲಾದ ಜಾಗವನ್ನು ಕೇವಲ ಸಾಮಗ್ರಿಗಳನ್ನು ಇಡುವ 'ಸ್ಟೋರ್ ರೂಮ್' (ಗೋದಾಮು) ಗಳಾಗಿ ಬಳಸುತ್ತಿದ್ದಾರೆ! ತಾವೇನಿದ್ದರೂ ವ್ಯಾಪಾರವನ್ನು ಮಾತ್ರ ರಸ್ತೆ ಬದಿಯಲ್ಲೇ ಮುಂದುವರಿಸಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಬಜಾರ್‌ಗೆ ಭೇಟಿ ನೀಡಿದಾಗಲೂ ಈ ಕಹಿ ಸತ್ಯ ಬೆಳಕಿಗೆ ಬಂದಿದೆ; ಇಲ್ಲಿನ ಅಂಗಡಿಗಳಲ್ಲಿ ಪೀಠೋಪಕರಣಗಳು, ಛತ್ರಿಗಳು ಮತ್ತು ಇತರ ವಸ್ತುಗಳನ್ನು ತುಂಬಿಡಲಾಗಿದೆ.
ಈ ಭೂಗತ ಮಾರುಕಟ್ಟೆಗೆ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರು ಡಿಸೆಂಬರ್ 10, 2017 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಆರಂಭದಲ್ಲಿ ಈ ಯೋಜನೆಗೆ ₹5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು ಮತ್ತು 18 ತಿಂಗಳಲ್ಲಿ ಅಂದರೆ ಜೂನ್ 2019 ರೊಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು. ಆದರೆ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕೇವಲ ಶೇ. 60 ರಷ್ಟು ಕೆಲಸ ಮಾತ್ರ ಮುಗಿಸಿ ನಿಯಮ ಉಲ್ಲಂಘಿಸಿದ್ದರು.ಕೊನೆಗೆ ಯೋಜನೆ ಮುಗಿಯುವಾಗ ವೆಚ್ಚ ₹14 ಕೋಟಿಗೆ ತಲುಪಿತ್ತು.
"ನಾನು ಕಳೆದ 40 ವರ್ಷಗಳಿಂದ ರಸ್ತೆ ಬದಿಯ ಪುಟ್ಟ ಅಂಗಡಿಯಲ್ಲಿ ಪೂಜಾ ಸಾಮಗ್ರಿಗಳನ್ನು ಮಾರುತ್ತಿದ್ದೇನೆ. ನಮ್ಮ ಶಾಸಕರ ಕಚೇರಿಯಿಂದ 18 ತಿಂಗಳ ಹಿಂದೆಯೇ ಈ ಭೂಗತ ಮಾರುಕಟ್ಟೆಯಲ್ಲಿ ನನಗೊಂದು ಅಂಗಡಿ ಮಂಜೂರು ಮಾಡಲಾಗಿದೆ. ಆದರೆ ಅಧಿಕಾರಿಗಳು ಇದುವರೆಗೂ ಈ ಅಂಗಡಿಗೆ ಎಷ್ಟು ಬಾಡಿಗೆ ಕಟ್ಟಬೇಕು ಎಂಬುದನ್ನೇ ನಿಗದಿಪಡಿಸಿಲ್ಲ," ಎಂದು ಬೀದಿ ಬದಿ ವ್ಯಾಪಾರಿ ಮಂಜು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮತ್ತೊಬ್ಬ ವ್ಯಾಪಾರಿ ಸಂಜಯ್ ಮಾತನಾಡಿ, ಪುನರ್ವಸತಿ ಯೋಜನೆಯಡಿ ಸುಮಾರು 50 ಬೀದಿ ಬದಿ ವ್ಯಾಪಾರಿಗಳಿಗೆ ಇಲ್ಲಿ ಅಂಗಡಿ ಸಿಗುವ ನಿರೀಕ್ಷೆಯಿದೆ. ನಾನು ಈ ಎಸಿ ಮಾರುಕಟ್ಟೆಗೆ ಶಿಫ್ಟ್ ಆಗಲು ಸಿದ್ಧನಿದ್ದೇನೆ, ಆದರೆ ಬಿಡಬ್ಲ್ಯೂಸಿಸಿ ಅಧಿಕಾರಿಗಳು ಇನ್ನೂ ಬಾಡಿಗೆ ದರ ಫಿಕ್ಸ್ ಮಾಡಿಲ್ಲ ಎಂದಿದ್ದಾರೆ.