
ವಿಜಯನಗರ: ನಾನ್‌ವೆಜ್ (ಚಿಕನ್)ಗಾಗಿ ವಿದ್ಯಾರ್ಥಿಗಳು ಬಡಿದಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಗಿರಿಯಾಪುರ ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ನಡೆದಿದೆ. ವಸತಿ ಶಾಲೆ ನಿಯಮದ ಪ್ರಕಾರ ಪ್ರತಿವಾರ ಚಿಕನ್ ಬಡಿಸುವಲ್ಲಿ ತರಗತಿವಾರು ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ, ವಿದ್ಯಾರ್ಥಿಗಳು ಗಲಾಟೆ ಆರಂಭಿಸಿದ್ದಾರೆ. ಈ ವಿಚಾರವಾಗಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ವಿದ್ಯಾರ್ಥಿಗಳಲ್ಲಿ ಘರ್ಷಣೆ ಹೆಚ್ಚಾಗುತ್ತಿದಂತೆಯೇ ಗ್ರಾಮಸ್ಥರು ಹೋಗಿ, ಮಕ್ಕಳಿಗೆ ಮತ್ತು ವಸತಿ ಶಾಲೆ ಪ್ರಾಚಾರ್ಯರು, ಸಿಬ್ಬಂದಿಗೆ ತಿಳಿವಳಿಕೆ ನೀಡಿದ್ದರೂ ಗಲಾಟೆ ನಿಯಂತ್ರಣವಾಗಿಲ್ಲ. ಕೆಲ ವಿದ್ಯಾರ್ಥಿಗಳು ಹಿರೇಹಡಗಲಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ವಸತಿ ಶಾಲೆಗೆ ಭೇಟಿ ನೀಡಿದ ಪೊಲೀಸರು ಗಲಾಟೆ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕೆಳ ತರಗತಿ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ಬಹು ದಿನಗಳಿಂದಲೂ ಊಟ, ಉಪಾಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋಗಿದ್ದಾರೆ. ವಸತಿ ಶಾಲೆ ಸಿಬ್ಬಂದಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಇಷ್ಟಕ್ಕೆಲ್ಲ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಂಪಿಯಲ್ಲಿ ಬಿದ್ದಿರೋ ಖಾಲಿ ಪ್ಲಾಸ್ಟಿಕ್ ಬಾಟಲ್‌ಗೆ ದರ ನಿಗಿದಿ; ಪುರಾತತ್ವ ಇಲಾಖೆಯ ಯೋಜನೆ