ವಿಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯದ್ದೇ ಗೆಲುವು: ಖಾದರ್ ವಿಶ್ವಾಸ ಉಪಚುನಾವಣೆಯಲ್ಲಿ ರಾಜಕೀಯದಿಂದ ಶಾಶ್ವತವಾಗಿ ಅನರ್ಹರನ್ನಾಗಿಸಬೇಕು| ಮೂರು ಬಾರಿ ಶಾಸಕರಾಗಿಯೂ ಆನಂದ ಸಿಂಗ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ| ಇದರಿಂದ ಜನರು ರೋಸಿ ಹೋಗಿದ್ದಾರೆ| ಆನಂದ್ ಸಿಂಗ್ ಗೆ ಸೋಲುಣಿಸಲೇಬೇಕು ಎಂದು ಜನರು ನಿರ್ಧರಿಸಿದ್ದಾರೆ|
ಹೊಸಪೇಟೆ(ನ.30): ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರ ಗೆಲುವು ಖಚಿತ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿವೆ. ಬಳ್ಳಾರಿ ಜಿಲ್ಲೆಯಲ್ಲಿ ನಾವು ಮೊದಲಿನಿಂದಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಾ ಬಂದಿದ್ದೇವೆ. ಈ ಉಪ ಚುನಾವಣೆಯಲ್ಲಿ ಸಹ ನಮ್ಮ ಅಭ್ಯರ್ಥಿ ಜಯ ದಾಖಲಿಸುತ್ತಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಸೇರಿದಂತೆ 17 ಶಾಸಕರನ್ನು ಸುಪ್ರೀಂಕೋರ್ಟ್ ಅನರ್ಹರೆಂದು ತೀರ್ಪು ನೀಡಿದ್ದು, ಕ್ಷೇತ್ರದ ಜನರು ಸಹ ಉಪಚುನಾವಣೆಯಲ್ಲಿ ರಾಜಕೀಯದಿಂದ ಶಾಶ್ವತವಾಗಿ ಅನರ್ಹರನ್ನಾಗಿಸಬೇಕು. ಕಾಂಗ್ರೆಸ್‌ನಲ್ಲಿ ಅಸಮಾಧಾನಗಳಿಲ್ಲ. ಅನರ್ಹರನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಕ್ರಿಕೆಟ್ ಆಟಗಾರರಂತೆ ಆಗಮಿಸುತ್ತಾರೆ. ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ವಿಜಯನಗರದಲ್ಲಿ ಜಯಗಳಿಸುವುದು ನಮ್ಮ ಗುರಿಯಾಗಿದೆ. ಈ ದಿಸೆಯಲ್ಲಿ ಪಕ್ಷ ವಿವಿಧ ಪ್ರಚಾರ ಕಾರ್ಯ ರೂಪಿಸಿಕೊಂಡಿದೆ. ಪಕ್ಷದ ರಾಜ್ಯದ ಹಿರಿಯ ಮುಖಂಡರು ಆಗಮಿಸಿ, ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ತಿಳಿಸಿದರು.
ಆನಂದ ಸಿಂಗ್ ರಾಜಕೀಯಕ್ಕೆ ಯೋಗ್ಯನಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುತ್ತೇನೆಂದಿದ್ದಕ್ಕೆ ಪಕ್ಷಕ್ಕೆ ಸೇರಿಸಿಕೊಂಡಿದ್ದೆವು. ಅವರ ರಾಜಕೀಯ ಚೆಲ್ಲಾಟಕ್ಕೆ ಸುಪ್ರೀಂ ನೀಡಿರುವ ಅನರ್ಹ ತೀರ್ಪನ್ನು ಉಪಚುನಾವಣೆಯಲ್ಲಿ ಜನರು ಎತ್ತಿ ಹಿಡಿಯಲಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅನರ್ಹರಿಗೆ ಸೋಲಾಗುವುದು ಖಚಿತ. ಮೂರು ಬಾರಿ ಶಾಸಕರಾಗಿಯೂ ಆನಂದ ಸಿಂಗ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇದರಿಂದ ಜನರು ರೋಸಿ ಹೋಗಿದ್ದಾರೆ. ಅವರಿಗೆ ಸೋಲುಣಿಸಲೇಬೇಕು ಎಂದು ನಿರ್ಧರಿಸಿದ್ದಾರೆ ಎಂದರು.
ಪಕ್ಷದ ಮುಖಂಡರಾದ ಸಿರಾಜ್ ಶೇಖ್, ಕೆ.ಸಿ. ಕೊಂಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್. ಮಹ್ಮದ್ ಇಮಾಮ್ ನಿಯಾಜಿ, ದೀಪಕ್ ಸಿಂಗ್, ಬುಡಾ ಮಾಜಿ ಅಧ್ಯಕ್ಷ ಆಂಜನೇಯ, ಮುಖಂಡರಾದ ಫಹೀಂ ಭಾಷ, ಭಾಗ್ಯಲಕ್ಷ್ಮೀ ಭರಾಡೆ ಸುದ್ದಿಗೋಷ್ಠಿಯಲ್ಲಿದ್ದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.