ಮಂಗಳೂರಿನಲ್ಲಿ ವಿಹಿಂಪ ಕೇಂದ್ರೀಯ ಬೈಠಕ್‌, ವಿದೇಶದಿಂದಲೂ ಜನ ಭಾಗಿ

By Kannadaprabha News  |  First Published Dec 4, 2019, 8:50 AM IST

ವಿಶ್ವಹಿಂದು ಪರಿಷತ್‌(ವಿಹಿಂಪ) ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಡಿ.25ರಿಂದ 30ರ ವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ದೇಶ, ವಿದೇಶ ಸೇರಿದಂತೆ ಸುಮಾರು 400ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ.


ಮಂಗಳೂರು(ಡಿ.04): ವಿಶ್ವಹಿಂದು ಪರಿಷತ್‌(ವಿಹಿಂಪ) ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಡಿ.25ರಿಂದ 30ರ ವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ದೇಶ, ವಿದೇಶ ಸೇರಿದಂತೆ ಸುಮಾರು 400ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಈ ಬೈಠಕ್‌ನಲ್ಲಿ ಚರ್ಚಿಸುವ ನಿರ್ಧಾರವನ್ನು ವಿಹಿಂಪ ಹಿರಿಯರು ಕೈಗೊಳ್ಳಲಿದ್ದಾರೆ.

ಮಂಗಳವಾರ ಇಲ್ಲಿನ ವಿಹಿಂಪ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಹಿಂಪ ಕರ್ನಾಟಕ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ ಈ ಮಾಹಿತಿ ನೀಡಿದರು.

Tap to resize

Latest Videos

undefined

ಮಂಗಳೂರಿನ ಸಂಘನಿಕೇತನದಲ್ಲಿ ಆರು ದಿನಗಳ ಕಾಲ ಈ ಸಭೆ ನಡೆಯಲಿದೆ. ಬೈಠಕ್‌ ಡಿ.25ರಂದು ಆರಂಭಗೊಂಡರೂ ಇದರ ಉದ್ಘಾಟನೆ ಡಿ.27ರಂದು ನಡೆಯಲಿದೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆರ್‌ಎಸ್‌ಎಸ್‌ ಸರಕಾರ್ಯವಾಹ ಸುರೇಶ್‌ ಭಯ್ಯಾಜಿ ಜೋಶಿ ಹಾಗೂ ವಿಹಿಂಪ ಕೇಂದ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ಜೆ ಮಾರ್ಗದರ್ಶನ ಮಾಡಲಿದ್ದಾರೆ. ಅಮೆರಿಕ, ಜರ್ಮನಿ, ಮಲೇಷಿಯಾ, ಬಾಂಗ್ಲಾದೇಶ, ನೇಪಾಳ ಸೇರಿದಂತೆ 32 ದೇಶಗಳಿಂದ ವಿಹಿಂಪ ಕೇಂದ್ರೀಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ವರ್ಷದ ಕಾರ್ಯಕ್ರಮಗಳ ಅವಲೋಕನ ಹಾಗೂ ಮುಂದಿನ ಯೋಜನೆಗಳನ್ನು ಇಲ್ಲಿ ನಿರ್ಧರಿಸಲಾಗುತ್ತದೆ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಇಲ್ಲಿ ಪ್ರಸ್ತಾಪಿಸುವ ಬಗ್ಗೆ ಹಿರಿಯರು ತೀರ್ಮಾನಿಸುತ್ತಾರೆ ಎಂದಿದ್ದಾರೆ.

ಡಿಸೆಂಬರ್‌ 3ನೇ ವಾರ ಮಂಗಳೂರಲ್ಲಿ BSNL 4ಜಿ..!

ಮೊದಲ ಹಾಗೂ ಕೊನೆಯ ಎರಡು ದಿನಗಳಂದು ಮಹತ್ವದ ಚರ್ಚೆ ನಡೆಯಲಿದೆ. ಪ್ರತಿ ದಿನ ಸಂಜೆ ಬೈಠಕ್‌ನಲ್ಲಿ ನಡೆದ ಚರ್ಚೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಯಲಿದೆ. ಈ ಬೈಠಕ್‌ ಯಶಸ್ಸುಗೊಳಿಸಲು 50ಕ್ಕೂ ಅಧಿಕ ಮಂದಿಯ ವಿವಿಧ ಸಮಿತಿಯನ್ನು ರಚಿಸಲಾಗಿದೆ. ಆರು ದಿನಗಳ ಬೈಠಕ್‌ಗೆ ಸುಮಾರು 15 ಲಕ್ಷ ರು. ವೆಚ್ಚವಾಗಲಿದೆ ಎಂದರು.

30 ದೇಶಗಳಲ್ಲಿ ವಿಹಿಂಪ ಕಾರ್ಯ:

ವಿಹಿಂಪ 1964ರಲ್ಲಿ ಸ್ಥಾಪನೆಗೊಂಡಿದ್ದು, ಈಗ 30ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯ ವಿಸ್ತಾರಗೊಂಡಿದೆ. ದೇಶಾದ್ಯಂತ 65 ಸಾವಿರಕ್ಕೂ ಅಧಿಕ ಸ್ಥಾನಗಳಲ್ಲಿ ವಿಹಿಂಪ ಸಮಿತಿಗಳಿವೆ. ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ, ಗೋಸಂರಕ್ಷಣೆ, ಸೇವಾ ಕಾರ್ಯ, ಶಿಕ್ಷಣ ಸಂಸ್ಕಾರ, ಆರೋಗ್ಯ, ಸ್ವಾವಲಂಬನೆಯ ಗ್ರಾಮ ವಿಕಾಸದ ಚಟುವಟಿಕೆ ಮೂಲಕ 78 ಸಾವಿರ ಗ್ರಾಮಗಳಲ್ಲಿ ಹಿಂದೂ ಸಮಾಜದ ಸಂಘಟನೆ ನಡೆಸಲಾಗುತ್ತಿದೆ. ಸಂಸ್ಕೃತಿಯ ವಿಕಾಸದ ಜೊತೆಗೆ ಧರ್ಮ ರಕ್ಷಣೆಯ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಕೇಂದ್ರೀಯ ಮಂಡಳಿ ಬೈಠಕ್‌ ಆಯೋಜನೆಗೊಂಡಿದೆ ಎಂದು ಅವರು ಹೇಳಿದರು.

ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ವಿಹಿಂಪ ಮಂಗಳೂರು ಅಧ್ಯಕ್ಷ ಗೋಪಾಲ್‌ ಕುತ್ತಾರ್‌, ಕಾರ್ಯದರ್ಶಿ ಶಿವಾನಂದ ಮೆಂಡನ್‌ ಇದ್ದರು.

ಅಯೋಧ್ಯೆ: ಟ್ರಸ್ಟಿಗಳ ತೀರ್ಮಾನಕ್ಕೆ ಬೆಂಬಲ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸಿದ್ಧತೆಗಳು ನಡೆಯುತ್ತಿವೆ. ಟ್ರಸ್ಟ್‌ ರಚಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದೆ. ಟ್ರಸ್ಟಿಗಳ ತೀರ್ಮಾನಕ್ಕೆ ವಿಹಿಂಪ ಬೆಂಬಲ ನೀಡಲಿದೆ. ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ತೀರ್ಮಾನ ಕೈಗೊಂಡು ಯಾವ ರೀತಿಯ ಪ್ರತಿನಿಧಿತ್ವ ನೀಡುತ್ತದೆಯೋ ಅದನ್ನು ವಿಹಿಂಪ ನಿರ್ವಹಿಸಲಿದೆ. ಟ್ರಸ್ಟ್‌ ಯಾವ ರೀತಿ ರಚನೆಯಾಗಬೇಕೆಂಬುದು ಹಿರಿಯರಿಗೆ ಬಿಟ್ಟಿದ್ದು. ರಾಮ ಮಂದಿರ ನಿರ್ಮಾಣ ಆಗಬೇಕೆಂಬುದು ನಮ್ಮ ಸಂಕಲ್ಪ ಎಂದು ಪ್ರೊ.ಎಂ.ಬಿ.ಪುರಾಣಿಕ್‌ ಹೇಳಿದ್ದಾರೆ.

ಸಂಸತ್ತಲ್ಲಿ ತುಳುಭಾಷೆ ಪರ ಧ್ವನಿಯೆತ್ತಿದ ಕೇರಳ ಸಂಸದ! ಕರಾವಳಿ ಎಂಪಿಗಳಿಗೆ ನೆಟ್ಟಿಗರ ಛೀಮಾರಿ!

click me!