Latest Videos

ಬೋಳಿಯಾರ್ ಚೂರಿ ಇರಿತ: ಕ್ಷೇತ್ರದ ಹೊರಗಿನವರ ಎಂಟ್ರಿಗೆ ಸ್ಪೀಕರ್ ಖಾದರ್ ಕಿಡಿ..!

By Girish GoudarFirst Published Jun 14, 2024, 1:12 PM IST
Highlights

ಬೋಳಿಯಾರ್ ಅನ್ನೋದು ಸಹೋದರತೆ ಇರೋ ಊರು. ಕೆಲವೇ ಕೆಲವು ಯುವಕರಿಂದ ಅಲ್ಲಿ ಕೆಟ್ಟ ಹೆಸರು ಬಂದಿದೆ.‌ ಆದರೆ ಅದನ್ನ ಅಲ್ಲಿನ ಊರಿನವರೇ ಸರಿ ಪಡಿಸುವ ಕೆಲಸ ಮಾಡ್ತಿದಾರೆ. ಆದರೆ ದಯವಿಟ್ಟು ಹೊರಗಿನವರು ಯಾರೂ ಶಾಂತಿ‌ ಕೆಡಿಸಬೇಡಿ: ಸ್ಪೀಕರ್ ಯು.ಟಿ.ಖಾದರ್ 

ಮಂಗಳೂರು(ಜೂ.14):  ಬೋಳಿಯಾರ್‌ನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ನಡೆದ ಚೂರಿ ಇರಿತ ಪ್ರಕರಣದಲ್ಲಿ ಕ್ಷೇತ್ರದ ಹೊರಗಿನ ವ್ಯಕ್ತಿಗಳು ರಾಜಕೀಯ ಮಾಡ್ತಿರೋದಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯು.ಟಿ‌.ಖಾದರ್ ಅವರು, ಬೋಳಿಯಾರ್ ಅನ್ನೋದು ಸಹೋದರತೆ ಇರೋ ಊರು. ಕೆಲವೇ ಕೆಲವು ಯುವಕರಿಂದ ಅಲ್ಲಿ ಕೆಟ್ಟ ಹೆಸರು ಬಂದಿದೆ.‌ ಆದರೆ ಅದನ್ನ ಅಲ್ಲಿನ ಊರಿನವರೇ ಸರಿ ಪಡಿಸುವ ಕೆಲಸ ಮಾಡ್ತಿದಾರೆ. ಆದರೆ ದಯವಿಟ್ಟು ಹೊರಗಿನವರು ಯಾರೂ ಶಾಂತಿ‌ ಕೆಡಿಸಬೇಡಿ.‌ ಹೊರಗಿನವರು ಬಾಯಿ ಮುಚ್ಚು ಕೂರುವುದೇ ದೇಶ ಪ್ರೇಮ.‌ ಹೊರಗಿನ ಎಲ್ಲರೂ ಅಲ್ಲಿ ಮೂಗು ತೂರಿಸೋ ಕೆಲಸ ಬಿಟ್ಟು ಬಿಡಿ. ಭಾರತ್ ಮಾತ ಕೀ ಜೈ ಅಂತ ಎಲ್ಲಾ ದೇಶಭಕ್ತರು ಎಲ್ಲೂ ಹೇಳಬಹುದು. ಆದರೆ ಅಲ್ಲಿ ಬೇರೆ ಏನು ಅವಾಚ್ಯ ಶಬ್ದ ಬೈದಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಅಲ್ಲಿ ರಾಜಕೀಯ ಮಾಡಿದ್ರೆ ಯಾರಿಗೂ ಒಂದು ಓಟ್ ಹೆಚ್ಚಾಗಲ್ಲ. ಯಾವುದೇ ಪಕ್ಷಕ್ಕೂ ಅಲ್ಲಿ ಓಟ್ ಹೆಚ್ಚಾಗಲ್ಲ. ನನ್ನ ಚುನಾವಣೆಯಲ್ಲಿ ಎರಡು ಪಕ್ಷ ಸೇರಿ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟರು‌. ಅವರು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನೀಗ ಸ್ಪೀಕರ್, ಹಾಗಾಗಿ ಯಾವುದೇ ಪಕ್ಷದ ಹೆಸರು ಹೇಳಲ್ಲ. ಈ ವಿಚಾರ ಸುಮ್ಮನೆ ದೊಡ್ಡದು ಮಾಡೋರೇ ದೇಶದ್ರೋಹಿಗಳು. ಪೊಲೀಸರಿಗೆ ಕೆಲಸ ಮಾಡಲು ಬಿಡಿ, ಅವರು ಎಲ್ಲವನ್ನೂ ಸರಿ‌ ಮಾಡ್ತಾರೆ ಎಂದರು. 

ದಕ್ಷಿಣ ಕನ್ನಡ: ಮೋದಿ ಪದಗ್ರಹಣ. ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ

ಇನ್ನು ಬೋಳಿಯಾರ್ ಘಟನೆಯಲ್ಲಿ ಮೆರವಣಿಗೆ ಎಲ್ಲವೂ ಆಗಿದೆ. ಆದರೆ ಮತ್ತೆ ಮೂರು ಜನ ಬೈಕ್ ನಲ್ಲಿ ಬಂದು ಸಮಸ್ಯೆ ಮಾಡಿದ್ದಾರೆ. ಆ ಬಳಿಕ ಅವರು ಬೈಕ್ ನಲ್ಲಿ ಬಂದು ಮತ್ತೆ ಹಲ್ಲೆ ಮಾಡಿರೋದು ದೊಡ್ಡ ತಪ್ಪು‌. ಭಾರತ್ ಮಾತಕೀ ಜೈ ಎಲ್ಲೂ ಕೂಡ ಹೇಳಬಹುದು. ರಸ್ತೆ, ಮಸೀದಿ, ಎಲ್ಲೂ ನಾವು ಭಾರತ್ ಮಾತ ಕೀ ಜೈ ಹೇಳಬಹುದು. ಅವರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ಸ್ಥಳೀಯರು ಪೊಲೀಸ್ ದೂರು ನೀಡಿದ್ದಾರೆ. ಇದರ ಬಗ್ಗೆ ಹೊರಗಿನವರು ಬಂದು ಮಾತನಾಡೋ ಅಗತ್ಯ ಇಲ್ಲ. ಎರಡೂ ಕಡೆಯ ತಪ್ಪಿನ ಬಗ್ಗೆ ಪೊಲೀಸರು ಸಿಸಿಟಿವಿ ನೋಡಿ ಕ್ರಮ ತೆಗೋತಾರೆ. ನಾನು ಶಾಸಕನಾಗಿ 99% ಸತ್ಪ್ರಜೆಗಳನ್ನ ನೋಡಿಕೊಳ್ಳೋದು ಜವಾಬ್ದಾರಿ. ಉಳಿದ 1% ಕೆಟ್ಟ ಜನರನ್ನು ‌ಪೊಲೀಸರು ನೋಡಿಕೊಳ್ತಾರೆ. ವಾಟ್ಸಪ್ ಮೆಸೇಜ್, ವಾಯಿಸ್ ಮೆಸೇಜ್ ನೋಡಿಕೊಂಡಿದ್ರೆ ಸಮಾಜ ಎಲ್ಲಿಗೆ ಮುಟ್ಟಬಹುದು.‌ ಪೊಲೀಸರು ತನಿಖೆಗೆ ಕಳೆದುಕೊಂಡು ಹೋಗಬಾರದು ಅಂದ್ರೆ ಹೇಗೆ? ಆರೋಪಿಯ ಹೆಂಡತಿಯನ್ನು ಠಾಣೆಗೆ ಕರೆದು ವಿಚಾರಣೆ ಮಾಡಿ ಬಿಟ್ಟಿದ್ದಾರೆ. ಆದರೆ ಇದರ ವಿರುದ್ದ ಫೇಕ್ ವಾಯ್ಸ್ ಆಗಿ ಜನರಲ್ಲಿ‌ ಗೊಂದಲ ಮಾಡಿದ್ದಾರೆ‌. ಅಲ್ಲಿನ ಜನರಿಗೆ ಯಾವುದೇ ಸಮಸ್ಯೆ ಇಲ್ಲ, ಹೊರಗಿನವರಿಗೆ ಸಮಸ್ಯೆ. ನಾವು ಅಲ್ಲಿನ ಸಮಸ್ಯೆ ಬಗೆ ಹರಿಸಲು ಕೆಲಸ ಮಾಡಬೇಕು. ಅದು ಬಿಟ್ಟು ಅಲ್ಲಿನ ಸಮಸ್ಯೆ ಮತ್ತಷ್ಟು ಹೆಚ್ಚಿಸಲು ನಾವು ಹೋಗಬಾರದು ಎಂದು ತಿಳಸಿದ್ದಾರೆ. 

ನಾನು ಆಸ್ಪತ್ರೆಗೆ ಹೋಗಿಲ್ಲ, ಇಂಥದ್ದಕ್ಕೆ ನಾವು ಪ್ರೋತ್ಸಾಹ ಕೊಡಬಾರದು. ಆಸ್ಪತ್ರೆಯಲ್ಲಿ ಬಡವರಿದ್ದಾರೆ, ಅವರನ್ನು ‌ನಾವು ನೋಡಬೇಕು. ಅದು ಬಿಟ್ಟು ಸಮಸ್ಯೆ ಸೃಷ್ಟಿಸಿ ಗಲಾಟೆ ಮಾಡಿ ಆಸ್ಪತ್ರೆಗೆ ಸೇರಿದವ್ರನ್ನ ನೋಡೋದಲ್ಲ. ಅವರನ್ನು ಅವರಷ್ಟಕ್ಕೆ ಬಿಡಿ, ಅವರು ಅಲ್ಲಿಗೆ ಸರಿಯಾಗ್ತಾರೆ. ನಾವು ರಾಜಕಾರಣಿಗಳು ಇಂಥದ್ದಕ್ಕೆ ತಲೆ ಹಾಕಲೇಬಾರದು. ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ ತಪ್ಪು ಮಾಡಿದವರಿಗೆ ಸಪೋರ್ಟ್ ಮಾಡಲ್ಲ‌. ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡೋದು ಎಲ್ಲಾ ಮಾಡಿದರೆ‌ ಮತ್ತೆ ಗೊಂದಲ ಆಗುತ್ತೆ. ಯಾಕೆ ಒಬ್ಬೊಬ್ಬರು ರಾಜಕೀಯದವರು ಅವರ ಹತ್ತಿರ ಹೋಗಬೇಕು. ನನ್ನನ್ನೂ ಸೇರಿಸಿ ರಾಜಕೀಯದವರು ಅಲ್ಲಿಗೆ ಹೋಗಲೇ ಬಾರದು ಎಂದರು.

'ನನಗೆ ಸ್ಥಾನ ಮುಖ್ಯವಲ್ಲ, ಕೆಲಸ ಮಾಡೋದು‌ ಮುಖ್ಯ'

ಸ್ಪೀಕರ್ ಸ್ಥಾನದಿಂದ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಖಾದರ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಹಣೆ ಬರಹ ಎಲ್ಲಿಗೆ ಕರೆದುಕೊಂಡು ಹೋಗುತ್ತೆ ಗೊತ್ತಿಲ್ಲ. ನಾನು ಹಿಂದೆ ಎಣಿಸಿದ್ದೆ ನಮ್ಮ ಶ್ರಮ ನಮ್ಮನ್ನ ತೆಗೆದುಕೊಂಡು ಹೋಗುತ್ತೆ ಅಂತ. ಈಗ ನನಗೆ ಅಶೀರ್ವಾದ ಕೂಡ ಹೆಚ್ಚಾಗಿ ಬೇಕು ಅಂತ ಗೊತ್ತಾಗಿದೆ.‌ ಶಾಸಕ, ಮಂತ್ರಿ, ಸ್ಪೀಕರ್ ಎಲ್ಲದರಲ್ಲೂ ನಾನು ಖುಷಿಯಾಗಿದ್ದೇನೆ. ನನಗೆ ಸ್ಥಾನ ಮುಖ್ಯವಲ್ಲ, ನಾವು ಕೆಲಸ ಮಾಡೋದು‌ ಮುಖ್ಯ. ನಾನು ಮಾಜಿಯಾದ್ರೂ ಬಹಳ ಸಂತೋಷವಾಗಿ ಕೆಲಸ ಮಾಡ್ತೇನೆ. ನಾನು ಎಲ್ಲರ ಆಶೀರ್ವಾದದಿಂದ ಸ್ಪೀಕರ್ ಆಗಿ ಖುಷಿಯಾಗಿದ್ದೇನೆ. ಮೇಲೆ ಹೋದರೂ ಕೆಳಗೆ ಇಳಿದರೂ ನಾನು ಖುಷಿಯಲ್ಲಿ ಇದ್ದೇನೆ. ನನ್ನ ಅಧಿಕಾರ ಶಾಶ್ವತ ಅಲ್ಲ ಅಂತ ನನಗೆ ಪ್ರತೀ ನಿತ್ಯ ಗೊತ್ತಿದೆ. ಮಾಜಿ ಶಾಸಕ ಆದರೂ‌ ನಾನು ಬಹಳ ಖುಷಿಯಲ್ಲಿ‌ ಇರ್ತೇನೆ ಎಂದರು.

click me!