ಬಾನಂದೂರು ಗ್ರಾಮದಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ನೇರ ಬಸ್ ಸೌಲಭ್ಯ ಕಲ್ಪಿಸಬೇಕೆಂಬ ತಾಲೂಕಿನ ಬಿಡದಿ ಹೋಬಳಿ ಬಾನಂದೂರು ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆ
ರಾಮನಗರ : ಬಾನಂದೂರು ಗ್ರಾಮದಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ನೇರ ಬಸ್ ಸೌಲಭ್ಯ ಕಲ್ಪಿಸಬೇಕೆಂಬ ತಾಲೂಕಿನ ಬಿಡದಿ ಹೋಬಳಿ ಬಾನಂದೂರು ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.
ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಬೈರವೈಕ್ಯ ಶ್ರೀ ಬಾಲಗಂಗಧರನಾಥ ಸ್ವಾಮೀಜಿಯವರ ಜನ್ಮಸ್ಥಳವಾದ ಬಾನಂದೂರಿನಿಂದ ಗೆ ಯಾವುದೇ ನೇರ ಬಸ್ ಸೌಕರ್ಯ ಇರಲಿಲ್ಲ.
ಈ ಬಗ್ಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಗ್ರಾಮದ ಮುಖಂಡರಾದ ಗಂಗಾಧರಯ್ಯ ಅವರು ಸಿ.ಎಂ.ಲಿಂಗಪ್ಪ ಅವರ ಮೂಲಕ ಸಾರಿಗೆ ಸಚಿವರಾದ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವರು ತಕ್ಷಣದಿಂದಲೇ ಬಸ್ ಸಂಚಾರ ಆರಂಭಿಸುವಂತೆ ಸೂಚನೆ ನೀಡಿದ್ದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಬಸ್ ಬಿಡಲು ವಿಳಂಬವಾಗಿತ್ತು. ಇದೀಗ ಬಾನಂದೂರು ಗ್ರಾಮದಿಂದ ಆದಿಚುಂಚನಗಿರಿ ಮಾರ್ಗದಲ್ಲಿ ಬಸ್ ಸಂಚರಿಸಲು ಆರಂಭವಾಗಿದೆ
ಇಂದಿನಿಂದ ಬಾನಂದೂರು-ಆದಿಚುಂಚನಗಿರಿ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಆರಂಭ
ಈ ಮಾರ್ಗದ ಬಸ್ ಬೆಳಿಗ್ಗೆ 8.15 ಕ್ಕೆ ಮರಳವಾಡಿ ಬಸ್ ನಿಲ್ದಾಣದಿಂದ ಹೊರಡಲಿದ್ದು, ಹಾರೋಹಳ್ಳಿ ಬಸ್ ನಿಲ್ದಾಣ 8.30ಕ್ಕೆ, ಬಾನಂದೂರು ಗ್ರಾಮದಿಂದ 8.50ಕ್ಕೆ, ಬಿಡದಿ ಬಸ್ ನಿಲ್ದಾಣ 9.15ಕ್ಕೆ, ರಾಮನಗರ ಬಸ್ ನಿಲ್ದಾಣ 9.45ಕ್ಕೆ, ಚನ್ನಪಟ್ಟಣ ಬಸ್ ನಿಲ್ದಾಣ 10.10ಕ್ಕೆ ಹೊರಟು ಮಂಡ್ಯ, ನಾಗಮಂಗಲ ಬೆಳ್ಳೂರು ಕ್ರಾಸ್ ಮೂಲಕ ಆದಿಚುಂಚನಗಿರಿಗೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ.
ಮಧ್ಯಾಹ್ನ 1.30 ಕ್ಕೆ ಆದಿಚಂಚನಗಿರಿ ಬಿಟ್ಟು ವಾಪಸ್ ಅದೇ ಮಾರ್ಗದಲ್ಲಿ ರಾಮನಗರಕ್ಕೆ4.30ಕ್ಕೆ ವಾಪಸ್ಸಾಗಲಿದ್ದು, ಬಾನಂದೂರು ಗ್ರಾಮಕ್ಕೆ 5.30 ರ ಸಮಯಕ್ಕೆ ಬರಲಿದ್ದು, ಹಾರೋಹಳ್ಳಿ, ಮರಳವಾಡಿ ಗೆ ವಾಪಸ್ಸು ಆಗಲಿದೆ. ಈ ಬಸ್ ವೇಗದೂತವಾಗಿದ್ದು, ನಿಗಧಿತ ಸ್ಥಳದಲ್ಲಿ ಮಾತ್ರ ನಿಲುಗಡೆ ನೀಡಲಿದೆ.
ಸಾರಿಗೆ ಸಚಿವರಿಗೆ ಅಭಿನಂದನೆ :
ಜಗದ್ಗುರು ಬೈರವೈಕ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ವಗ್ರಾಮ ಬಾನಂದೂರು ಗ್ರಾಮದಿಂದ ಆದಿಚುಂಚನಗಿರಿ ಕ್ಷೇತ್ರಕ್ಕೆ ನೇರ ಬಸ್ ಸೌಲಭ್ಯ ಒದಗಿಸಲು ಕಾರಣರಾದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಪತ್ರ ಬರೆದು ಮನವಿ ಮಾಡಿದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಬಸ್ ಸಂಚಾರಕ್ಕೆ ಶ್ರಮಿಸಿದ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್, ವಿಭಾಗೀಯ ಸಂಚಲನಾಧಿಕಾರಿ ಶ್ರೀನಿವಾಸಮೂರ್ತಿ, ಹಾರೋಹಳ್ಳಿ ಘಟಕ ವ್ಯವಸ್ಥಾಪಕ ಸಚಿನ್ ಅವರನ್ನು ಗ್ರಾಮಸ್ಥರ ಪರವಾಗಿ ಬಾನಂದೂರು ಗ್ರಾಮದ ಮುಖಂಡ ಗಂಗಾಧರಯ್ಯ ಅಭಿನಂದಿಸಿದ್ದಾರೆ.
ಬಾನಂದೂರಿನಿಂದ ಆದಿಚುಂಚನಗಿರಿಗೆ ಜೂನ್ 14ರಿಂದ ಪ್ರತಿನಿತ್ಯ ಸಾರಿಗೆ ಬಸ್ ಸಂಚಾರ ಮಾಡಲಿದೆ. ಜಿಲ್ಲೆಯ ಜನತೆ ಈ ಬಸ್ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು.
-ಜಗದೀಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ರಾಮನಗರ.