ಬೆಂಗಳೂರಲ್ಲಿ ಸಾರಿಗೆ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದ ‘ಬೆಂಗಳೂರು ಭೂಸಾರಿಗೆ ಪ್ರಾಧಿಕಾರ ವಿಧೇಯಕ- 2022’ಕ್ಕೆ ಸುದೀರ್ಘ ಚರ್ಚೆ ಬಳಿಕ ಪರಿಷತ್‌ನಲ್ಲೂ ಸರ್ವಾನುಮತದಿಂದ ಅಂಗೀಕಾರ.
ವಿಧಾನ ಪರಿಷತ್(ಡಿ.29): ಬೆಂಗಳೂರಲ್ಲಿ ಸಾರಿಗೆ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದ ‘ಬೆಂಗಳೂರು ಭೂಸಾರಿಗೆ ಪ್ರಾಧಿಕಾರ ವಿಧೇಯಕ- 2022’ಕ್ಕೆ ಸುದೀರ್ಘ ಚರ್ಚೆ ಬಳಿಕ ಪರಿಷತ್‌ನಲ್ಲೂ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ಈ ಮಸೂದೆಯನ್ನು ಮಂಡಿಸಿ, ವಿಧೇಯಕ ಅಗತ್ಯತೆ ಬಗ್ಗೆ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಪ್ರಾಧಿಕಾರದ ಜವಾಬ್ದಾರಿಯನ್ನು ಏಜೆನ್ಸಿ ಎಂದು ಬರೆಯಲಾಗಿದೆ. ಏಜೆನ್ಸಿ ಎಂದರೆ ಖಾಸಗಿಯೇ. ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವೇ ಎಂಬ ಸಂಶಯ ಬರುತ್ತದೆ. ಈ ಬಗ್ಗೆ ಸ್ಪಷ್ಟಪಡಿಸಬೇಕು. ಬೆಂಗಳೂರಿನಲ್ಲಿ ಮೂಲಸೌಲಭ್ಯಗಳನ್ನು ಹೆಚ್ಚಿಸಬೇಕು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸರ್ಕಾರ ಏನೇ ಕ್ರಮ ಕೈಗೊಂಡರೂ ಅದಕ್ಕೆ ನಮ್ಮ ಸಹಮತವಿದೆ ಎಂದರು.
KARNATAKA WINTER SESSION: ಒತ್ತುವರಿ ಸರ್ಕಾರಿ ಭೂಮಿ ಗುತ್ತಿಗೆಗೆ: ಮಸೂದೆಗೆ ಅಸ್ತು
ಕಾಂಗ್ರೆಸ್‌ನ ಯು.ಬಿ.ವೆಂಕಟೇಶ ಮಾತನಾಡಿ, ಬೆಂಗಳೂರಿನಲ್ಲಿ 500 ಎಂಎನ್‌ಸಿ ಕಂಪನಿಗಳಿವೆ. 450ಕ್ಕೂ ಹೆಚ್ಚು ಆರ್‌ಆ್ಯಂಡ್‌ಡಿ ಸೆಂಟರ್‌ಗಳಿವೆ. 40 ಲಕ್ಷಕ್ಕೂ ಅಧಿಕ ಐಟಿ ಬಿಟಿಗಳಲ್ಲಿ ಕೆಲಸ ಮಾಡುವವರು ಇದ್ದಾರೆ. ಆದರೆ ಅಲ್ಲಿನ ಟ್ರಾಫಿಕ್ ಸಮಸ್ಯೆಯಿಂದ ಇಡೀ ನಗರದ ನಿವಾಸಿಗಳು ತತ್ತರಿಸುವಂತಾಗಿದೆ. ಸರಿಯಾಗಿ ವ್ಯವಸ್ಥೆ ಮಾಡುವ ಮೂಲಕ ಈ ಪ್ರಾಧಿಕಾರ ರಚನೆ ಮಾಡಬೇಕು. ಸರ್ಕಾರದ ಹಿಡಿತವೂ ಇದರ ಮೇಲಿರಬೇಕು ಎಂದರು.
ಬಿಜೆಪಿ ಸದಸ್ಯ ಕೆ.ಎಸ್.ನವೀನ ಮಾತನಾಡಿ, ಸಂಚಾರ ವ್ಯವಸ್ಥೆಯಲ್ಲಿ ವಿಶ್ವದಲ್ಲೇ ಬೆಂಗಳೂರು 5ನೆಯ ಕೆಟ್ಟನಗರ ಎಂದು ಹೆಸರು ಪಡೆದಿದೆ. ಮೇಲ್ಸೇತುವೆಯಾಗಲಿ, ರಸ್ತೆಗಳಲ್ಲಿನ ಸಿಗ್ನಲ್‌ಗಳು ಸರಿಯಾಗಿಲ್ಲ. ಪ್ರಾಧಿಕಾರದಿಂದಲೂ ಮತ್ತಷ್ಟುಸಮಸ್ಯೆಯಾಗುವಂತಾಗಬಾರದು. ಆ ರೀತಿ ಇದಕ್ಕೆ ಚಾಣಾಕ್ಷ್ಯ, ತಾಂತ್ರಿಕವಾಗಿ ಜ್ಞಾನವಿದ್ದವರನ್ನೇ ನಿಯೋಜಿಸಬೇಕು ಎಂದು ಸಲಹೆ ಮಾಡಿದರು. ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಮರಿತಿಬ್ಬೆಗೌಡ ಸೇರಿದಂತೆ ಹಲವರು ಚರ್ಚೆಯಲ್ಲಿ ಪಾಲ್ಗೊಂಡರು. ಬಳಿಕ ಸಭಾಪತಿಗಳು ಧ್ವನಿಮತಕ್ಕೆ ಹಾಕುವ ಮೂಲಕ ಅಂಗೀಕಾರ ಪಡೆದರು.