Mysuru : ಕನ್ನಡಕ್ಕಾಗಿ ಜೀವನ ಪರ್ಯಂತ ಹೋರಾಡಿದ ಕುವೆಂಪು

By Kannadaprabha NewsFirst Published Dec 29, 2022, 5:21 AM IST
Highlights

ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನೆಲ, ಜಲ, ಭಾಷೆಗಾಗಿ ಜೀವನ ಪರ್ಯಂತ ಹೋರಾಟ ಮಾಡಿದರು ಎಂದು ಮೇಯರ್‌ ಶಿವಕುಮಾರ್‌ ತಿಳಿಸಿದರು.

  ಮೈಸೂರು :  ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನೆಲ, ಜಲ, ಭಾಷೆಗಾಗಿ ಜೀವನ ಪರ್ಯಂತ ಹೋರಾಟ ಮಾಡಿದರು ಎಂದು ಮೇಯರ್‌ ಶಿವಕುಮಾರ್‌ ತಿಳಿಸಿದರು.

ನಗರದ ಅಗ್ರಹಾರ ವೃತ್ತದಲ್ಲಿ (Karnataka)  ಸೇನಾ ಪಡೆ ವತಿಯಿಂದ ರಾಷ್ಟ್ರಕವಿ (Kuvempu)  ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕುವೆಂಪು ಅವರು ಕವಿತೆಗಳ ಮೂಲಕ ಸಮಾಜದ ಅಸಮಾನತೆಯನ್ನು ಅಳಿಸಿ ಹಾಕಲು ಶ್ರಮಿಸಿದರು. ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದರು ಎಂದು ಹೇಳಿದರು.

ಎಂಡಿಎ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌ ಮಾತನಾಡಿ, ಕುವೆಂಪು ಅವರು ನಮ್ಮ ರಾಜ್ಯ ಕಂಡಂತಹ ಮಹಾನ್‌ ಚೇತನ. ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದವರು ಎಂದು ಸ್ಮರಿಸಿದರು.

ಇದೇ ವೇಳೆ ನೆರೆದಿದ್ದ ಜನರಿಗೆ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಗಂಗಾಧರ್‌ ಅವರು ಸಿಹಿ ವಿತರಿಸಿದರು.

ಸಮಾಜ ಸೇವಕ ಕೆ. ರಘುರಾಮ್‌, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಕಾಂಗ್ರೆಸ್‌ ಮುಖಂಡ ಎನ್‌.ಎಂ. ನವೀನ್‌ಕುಮಾರ್‌, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಟಿ. ಸುರೇಶ್‌, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್‌ ಲೋಕೇಶ್‌ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್‌, ನಾಗಣ್ಣ, ಎಂಡಿಎ ಸದಸ್ಯೆ ಲಕ್ಷ್ಮೀದೇವಿ, ಮುಖಂಡರಾದ ಶಾಂತರಾಜೇ ಅರಸ್‌, ಪ್ರಜೀಶ್‌, ಯೋಗೀಶ್‌ ಉಪ್ಪಾರ, ಸಿ.ಎಚ್‌. ಕೃಷ್ಣಯ್ಯ, ಪ್ರಭುಶಂಕರ್‌, ರಾಮಣ್ಣ, ಎಸ್‌. ಚಂದ್ರು, ದರ್ಶನ್‌ ಗೌಡ, ಪ್ರಭಾಕರ, ಕೃಷ್ಣಮೂರ್ತಿ ಮೊದಲಾದವರು ಇದ್ದರು.

ಕುವೆಂಪು ಅವರ ಸಾಹಿತ್ಯ ಅತ್ಯಂತ ಪ್ರಸ್ತುತ

 ತುಮಕೂರು :  ಇಂದಿನ ಸಮಾಜಕ್ಕೆ ಕುವೆಂಪುರವರ ಸಾಹಿತ್ಯ ಮತ್ತು ನಾಟಕಗಳು ಅತ್ಯಂತ ಪ್ರಸ್ತುತ ಹಾಗೂ ಅತ್ಯಗತ್ಯವಾಗಿವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಂಗ ಕಹಳೆ, ಬೆಂಗಳೂರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದೊಂದಿಗೆ ಏರ್ಪಡಿಸಲಾಗಿರುವ 21ನೇ ಕುವೆಂಪು ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮನೋವಿಕಾಸಕ್ಕಾಗಿ ಕುವೆಂಪುರವರ ಮಕ್ಕಳ ನಾಟಕಗಳು ಶಾಲಾ ಪಠ್ಯದಲ್ಲೂ ಸೇರಬೇಕು. ಭಾರತದಾದ್ಯಂತ ಪ್ರತಿ ರಾಜ್ಯ, ಜಿಲ್ಲೆಯಲ್ಲೂ ಕುವೆಂಪುರವರ ನಾಟಕೋತ್ಸವದ ಮೂಲಕ ವಿಶ್ವಮಾನವ ಸಂದೇಶ ಸಾರುತ್ತಿರುವುದು ಒಂದು ಹೆಗ್ಗಳಿಕೆಯ ವಿಷಯ. ನಾಟಕ ತಂಡದವರು ಮಕ್ಕಳ ಮೂಲಕ ಕುವೆಂಪು ನಾಟಕಗಳನ್ನು ಅಭ್ಯಾಸ ಮಾಡಿ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ. ತುಮಕೂರು ಜಿಲ್ಲೆಯಲ್ಲಿ ರಂಗಕಲೆಗೆ ಸಾಕಷ್ಟುಪ್ರೋತ್ಸಾಹವಿದ್ದು, ತುಮಕೂರಿನ ಜನ ಕುವೆಂಪು ನಾಟಕಗಳನ್ನು ಹೆಚ್ಚು ವೀಕ್ಷಿಸಲಿ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್‌. ಸಿದ್ದಲಿಂಗಪ್ಪ ಮಾತನಾಡಿ, ಜಗತ್ತಿಗೇ ವಿಶ್ವಮಾನವ ಸಂದೇಶ ನೀಡಿದ ಕುವೆಂಪುರವರು ನಮ್ಮ ಕನ್ನಡಿಗರ ಹೆಮ್ಮೆ. ಅವರ ನಾಟಕಗಳು ದೇಶದಾದ್ಯಂತ 1000ಕ್ಕೂ ಹೆಚ್ಚು ಪ್ರದರ್ಶನ ನೀಡಿ ಕುವೆಂಪು ಸಾಹಿತ್ಯವನ್ನು ಪರಿಚಯಿಸುತ್ತಿರುವ ರಂಗ ಕಹಳೆ ಸಂಸ್ಥೆಯು ಅಭಿನಂದನಾರ್ಹವಾದುದು ಎಂದರು.

ನಾಟಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಡಾ. ಲಕ್ಷ್ಮಣದಾಸ್‌ ಮಾತನಾಡಿ, ಕುವೆಂಪು ಮಹಾಕವಿ, ಶಿಶು ಸಾಹಿತ್ಯದಿಂದಿಡಿದು ಮಹಾ ಕಾವ್ಯದವರೆಗೆ ಅವರು ರಚಿಸದೇ ಇರುವ ಕಾವ್ಯಗಳೇ ಇಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಪ್ರಕೃತಿ ಮತ್ತು ಮಾನವ ಸಂಬಂಧಗಳು ಕುವೆಂಪು ಸಾಹಿತ್ಯದ ವಸ್ತು ನಿಸರ್ಗದೊಡನೆ ಮಾನವ ಹೇಗೆ ಬಾಳಬೇಕೆಂಬುದನ್ನು ಕುವೆಂಪು ಕೃತಿಗಳು ಸಾರುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಆರ್‌.ರೇವಣ್ಣ, ನಾಟಕಮನೆ ಮಹಾಲಿಂಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್‌, ಹಿರಿಯ ಪತ್ರಕರ್ತರಾದ ಕೆ.ಜೆ.ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ನಂತರ ರಂಗ ಕಹಳೆ ಸಂಸ್ಥೆಯಿಂದ ಪ್ರದರ್ಶನಗೊಂಡ ಕುವೆಂಪು ನಾಟಕಗಳನ್ನು ಸಾರ್ವಜನಿಕರು ವೀಕ್ಷಿಸಿದರು.

click me!