ನಾಲ್ಕನೇ ಮಳೆಗಾಲ ಮುಗಿಯೋಕ್ ಬಂದ್ರು ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಳ್ಲಿಲ್ಲ. ಜನ ಸೂರಿಗಾಗಿ ಹೋರಾಡೋದ ನಿಲ್ಸಿಲ್ಲ. ಇದೀಗ ಬಿಜೆಪಿ ಹೋಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಚಾಲ್ತಿಯಲ್ಲಿದೆ. ಈ ಗ್ಯಾರಂಟಿ ಸರ್ಕಾರದಲ್ಲಿ ಪರಿಹಾರದ ಗ್ಯಾರಂಟಿಗೆ ಜನ ದಾರಿ ಕಾಯ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.09): ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ 2019ರ ಆಗಸ್ಟ್ 9 ಮತ್ತು 10 ರಂದು ದಾಖಲೆ ಪ್ರಮಾಣದಲ್ಲಿ ಮಳೆ ಸುರಿದು ಇತ್ತು. ಆ ರಣಮಳೆಗೆ ಇಡೀ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿತ್ತು. ರಾತ್ರಿ ಸುರಿದ 22 ಇಂಚು ಮಳೆಗೆ ಬೆಟ್ಟ-ಗುಡ್ಡಗಳು ಕಣ್ಣೆದುರೇ ಕಳಚಿದ್ದವು. ಉಟ್ಟ ಬಟ್ಟೆಯಲ್ಲಿ ಓಡಿ ಬಂದು ಜನ ಜೀವ ಉಳಿಸ್ಕೊಂಡಿದ್ರು. ಜನಪ್ರತಿನಿಧಿಗಳು ಬದುಕು ಕಟ್ಟಿಕೊಡುವ ಭರವಸೆಯನ್ನಿಟ್ಟಿದ್ರು. ನಾಲ್ಕನೇ ಮಳೆಗಾಲ ಮುಗಿಯೋಕ್ ಬಂದ್ರು ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಳ್ಲಿಲ್ಲ. ಜನ ಸೂರಿಗಾಗಿ ಹೋರಾಡೋದ ನಿಲ್ಸಿಲ್ಲ. ಇದೀಗ ಬಿಜೆಪಿ ಹೋಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಚಾಲ್ತಿಯಲ್ಲಿದೆ. ಈ ಗ್ಯಾರಂಟಿ ಸರ್ಕಾರದಲ್ಲಿ ಪರಿಹಾರದ ಗ್ಯಾರಂಟಿಗೆ ಜನ ದಾರಿ ಕಾಯ್ತಿದ್ದಾರೆ.
undefined
ಹೊಸ ಜೀವನ ಕಟ್ಟಿಕೊಳ್ಳಲು ಹೋರಾಟ :
ಅಂದು ರಕ್ಕಸ ಮಳೆಯ ಅಬ್ಬರಕ್ಕೆ ಮೂಡಿಗೆರೆಯ ಮಲೆಮನೆ ಗ್ರಾಮದ 6 ಮನೆ, ಎರಡು ದೇವಸ್ಥಾನ ಹಾಗೂ ಅಂದಾಜು 40 ಎಕರೆ ಜಮೀನು ಕಣ್ಣೆದುರೇ ತರಗೆಲೆಯಂತೆ ಕೊಚ್ಚಿ ಹೋಗಿತ್ತು. ಗುಡ್ಡಗಳು ಮಳೆ ನೀರಿನಲ್ಲಿ ತೇಲಿ ಬಂದಿದ ಪರಿಣಾಮ ಜನ ಮನೆ ಸೇರಿದಂತೆ ಮನೆ-ಮಠ, ಆಸ್ತಿ-ಪಾಸ್ತಿಯನ್ನ ಕಳೆದುಕೊಂಡಿದ್ರು. ರಾತ್ರೋರಾತ್ರಿ ಉಟ್ಟ ಬಟ್ಟೆಯಲೇ ಓಡಿ ಬಂದು ಜೀವ ಉಳಿಸಿಕೊಂಡಿದ್ರು. ಅಂದಿನಿಂದಲೂ ಹೊಸ ಜೀವನ ಕಟ್ಟಿಕೊಳ್ಳಲು ಹೋರಾಡ್ತಾನೆ ಇದ್ದಾರೆ. ಬಾಡಿಗೆ ಮನೆಗೆ ಹೋಗಿ ಹಣ ಕೊಡ್ತೀವಿ ಅಂದಿತ್ತು ಸರ್ಕಾರ. ಒಂದು ವರ್ಷದೊಳಗೆ ಮನೆ, ಬದಲಿ ಜಮೀನು ಕೊಟ್ಟು ಹೊಸ ಬದುಕನ್ನ ಕಟ್ಟಿಕೊಡ್ತೀವಿ ಅಂತೇಳಿದ್ದ ಜನಪ್ರತಿನಿಧಿಗಳು ಬಂದ ದಾರಿಗೆ ಸುಂಕವಿಲ್ಲ ಅಂತ ಸುಮ್ಮನಾಗಿದ್ರು. ಅಂದು ಸರ್ಕಾರ ಕೊಟ್ಟ ಮಾತನ್ನ ಮರೆತಿದ್ರಿಂದ ಜನ ಇಂದಿಗೂ ನಿರ್ಗತಿಕರಾಗೇ ಇದ್ದಾರೆ. ಸಮರ್ಪಕವಾಗಿ ಸರ್ಕಾರ ಬಾಡಿಗೆ ಹಣವನ್ನೂ ಕೊಡ್ಲಿಲ್ಲ. ಅಂದಿನ ಬಿಜೆಪಿ ಸರ್ಕಾರದ ದಾರಿ ಕಾದು ನೊಂದಿರೋ ಜನ ಇದೀಗ ಗ್ಯಾರಂಟಿಯ ಕಾಂಗ್ರೆಸ್ ಸರ್ಕಾರದ ದಾರಿಯನ್ನೂ ಕಾಯ್ತಿದ್ದಾರೆ.
ಕೈಮಗ್ಗದಲ್ಲಿ ಬದುಕು ಕಟ್ಟಿಕೊಂಡು ಯಶಸ್ವಿಯಾದ ರಮಣಿ!
ಜಿಲ್ಲಾಡಳಿತ ಗುರುತು ಮಾಡಿರುವ ಜಾಗದಲ್ಲಿ ಕಾಡು ಪ್ರಾಣಿಗಳು ಕಾಟ :
ಪ್ರವಾಹದ ನಂತರ ಮಲೆಮನೆ ಗ್ರಾಮಕ್ಕೆ ಬಂದೋದವರ ಸಂಖ್ಯೆ ಒಂದೆರಡಲ್ಲ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಅರ್.ಆಶೋಕ್, ಮಾಧುಸ್ವಾಮಿ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಅಂಗಾರ ಸೇರಿ ಎಲ್ಲರೂ ತಮ್ಮ ಪಾದಸ್ಪರ್ಶ ಮಾಡಿದ್ರು. ಆದ್ರೆ, ನೋ ಯೂಸ್. ಬಂದವರೆಲ್ಲಾ ಮಲೆಮನೆ ಸಂತ್ರಸ್ಥ ಗ್ರಾಮಸ್ಥರಿಗೆ ಪರ್ಯಾಯ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ರು. ಮಾತಿನಲ್ಲೇ ಸಮಾಧಾನ ಹೇಳಿದ್ದರಿಂದ ಸ್ಥಳಿಯರು ಶೀಘ್ರದಲ್ಲೇ ಹೊಸ ಬದುಕಿನ ಕನಸು ಕಂಡಿದ್ರು. ಆದ್ರೆ, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಅಂದಿನ ಸಮಾಧಾನದ ಮಾತು ಇಂದು ಕಾರ್ಯರೂಪಕ್ಕೆ ಬರಲೇ ಇಲ್ಲ. ಮೂರು ವರ್ಷ ಕಳೆದ್ರು ಅವರಿಗೆ ಇಂದಿಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ನೊಂದವರು ಕಳೆದ ಮೂರು ತಿಂಗಳ ಹಿಂದೆ ತಾಲೂಕು ಕಚೇರಿಯಲ್ಲಿ ವಿಷ ಕುಡಿಯೋಕು ಮುಂದಾಗಿದ್ದರು.ಆಗ ಎಚ್ಚೇತಗೊಂಡ ಜಿಲ್ಲಾಡಳಿತ ಒಂದು ಜಾಗವನ್ನು ಗುರುತು ಮಾಡಿತ್ತು. ಅದು ಮೂಡಿಗೆರೆ ಭೈರಾಪುರದಲ್ಲಿ ಜಾಗ, ಅಲ್ಲಿ ಕಾಡಾನೆಯ ಹವಾಳಿ , ಮಳೆ ಹೆಚ್ಚು , ಈ ಹಿನ್ನಲೆಯಲ್ಲಿ ಈ ಜಾಗಕ್ಕೆ ಹೋಗಲು ಇವರು ಮನಸ್ಸು ಮಾಡುತ್ತಿಲ್ಲ, ಬದಲಿ ಜಾಗವನ್ನು ಸಂತ್ರಸ್ಥರು ಕೇಳುತ್ತಿದ್ದಾರೆ, ಆದ್ರೆ ಜಿಲ್ಲಾಡಳಿತ ಕೊಡಲು ಒಪ್ಪಿಗೆ ನೀಡುತ್ತಿಲ್ಲ.
ಒಟ್ಟಾರೆ, 2019ರ ಮಹಾಮಳೆ ಮಲೆಮನೆ ಗ್ರಾಮಸ್ಥರ ಬದುಕನ್ನ ಅಕ್ಷರಶಃ ಮೂರಾಬಟ್ಟೆಯನ್ನಾಗಿಸಿತ್ತು. ಅದರಲ್ಲೂ ಮಲೆಮನೆ ಗ್ರಾಮದ 5 ಮನೆಗಳು, ಸುಮಾರು 40 ಎಕರೆ ಪ್ರದೇಶ ಸಂಪೂರ್ಣ ಕೊಚ್ಚಿಹೋಗಿತ್ತು. ಒಂದೇ ರಾತ್ರಿಗೆ ಎಲ್ಲವನ್ನೂ ಕಳೆದುಕೊಂಡ ಜನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ ಜನಪ್ರತಿನಿಧಿಗಳು ಹಾಗೂ ಸರ್ಕಾರ ಸಂತ್ರಸ್ಥರಿಗೆ ಭರವಸೆ ನೀಡಿದ್ದೇ ಹೆಚ್ಚಾಯ್ತೋ ವಿನಃ, ಸೌಲಭ್ಯ ಕಲ್ಪಸಿದ್ದು ತುಂಬಾ ಕಡಿಮೆ.