ಕಲಬುರಗಿ: ಹಿರಿಯ ಸಾಹಿತಿ ವಸಂತ ಕುಷ್ಟಗಿ ಇನ್ನಿಲ್ಲ

By Kannadaprabha NewsFirst Published Jun 5, 2021, 7:28 AM IST
Highlights

* ಸದಾಕಾಲ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು ಕುಷ್ಟಗಿ
* ಹಾರೈಕೆ ಕವಿ ಎಂದೇ ಕನ್ನಡ ನಾಡಿನಾದ್ಯಂತ ಮನೆಮಾತಾಗಿದ್ದ ಗಾಂಧಿವಾದಿ
* ಹೃದಯಾಘಾತದಿಂದ ನಿಧನ, ಸಿಎಂ ಸಂತಾಪ
 

ಕಲಬುರಗಿ(ಜೂ.05): ನಾಡಿನ ಹಿರಿಯ ಸಾಹಿತಿ, ವಿದ್ವಾಂಸ, ವಿಮರ್ಶಕ, ಭಾಷಾಜ್ಞಾನಿ, ದಾಸ ಸಾಹಿತ್ಯ ಸಂಶೋಧಕ ಪ್ರೊ.ವಸಂತ ಕುಷ್ಟಗಿ(85) ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅನಾರೋಗ್ಯದಿಂದಾಗಿ ವಾರದ ಹಿಂದೆಯೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರೊ.ಕುಷ್ಟಗಿಯವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದರು. ಅವರು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ಬತ್ತೇರೇಶ ಕಿಂಕರ ರಾಘವೇಂದ್ರ ಕುಷ್ಟಗಿ ಹಾಗೂ ಸುಂದರಾಬಾಯಿ ದಂಪತಿ ಮಗನಾದ ಪ್ರೊ.ಕುಷ್ಟಗಿಯವರು ಕವಿ, ಭಾಷಾ ವಿದ್ವಾಂಸ, ಲೇಖಕರು, ಸಂಶೋಧಕರು, ಚಿಂತಕರಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರ ಹಾರೈಕೆ ಕವಿತೆ 10ನೇ ತರಗತಿಯ ಪಠ್ಯಕ್ಕೆ ಆಯ್ಕೆಯಾಗಿತ್ತು. ಇದರೊಂದಿಗೆ ಹಾರೈಕೆ ಕವಿ ಎಂದೇ ಕನ್ನಡ ನಾಡಿನಾದ್ಯಂತ ಮನೆಮಾತಾಗಿದ್ದರು.

ಕಲಬುರಗಿಯಲ್ಲಿ ಭಾರೀ ಮಳೆ: ಮನೆ ಗೋಡೆ ಬಿದ್ದು ಬಾಲಕಿ ಸಾವು

ಹೈದ್ರಾಬಾದ್‌ನಲ್ಲಿರುವ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಮಾಡಿ ಸ್ನಾತಕೋತ್ತರ ಪದವೀಧರರಾಗಿದ್ದ ಕುಷ್ಟಗಿಯವರು 8 ಕವನ ಸಂಕಲನ, 30ಕ್ಕೂ ಗದ್ಯ ಸಂಕಲನ, 16ಕ್ಕೂ ಹೆಚ್ಚು ಸಂಪಾದನೆ ಕೃತಿಗಳು, 25ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ರಾಜ್ಯೋತ್ಸವ ಪುರಸ್ಕಾರ, ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್‌ ಸೇರಿದಂತೆ ಅನೇಕ ಪ್ರಶಸ್ತಿ- ಪುರಸ್ಕಾರಗಳು ಇವರನ್ನು ಅರಸಿಕೊಂಡು ಬಂದಿವೆ. ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್‌, ಮರಾಠಿ, ತೆಲುಗು, ಸಂಸ್ಕೃತ ಭಾಷಾ ಬಲ್ಲವರಾಗಿದ್ದರು. ಗಾಂಧಿ ವಾದಿಯಾಗಿದ್ದ ಅವರು, ಸದಾಕಾಲ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು.

ಮುಖ್ಯಮಂತ್ರಿ ಸಂತಾಪ: 

ಪ್ರೊ.ವಸಂತ ಕುಷ್ಟಗಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಸಂತಾಪ ಸೂಚಿಸಿದ್ದಾರೆ.
 

click me!