ನುರಿತ ವೈದ್ಯರಿಲ್ಲ ಎಂದು 6 ವೆಂಟಿಲೇಟರ್ ಬಳಕೆ ಇಲ್ಲ| ಆಸ್ಪತ್ರೆಯವರ ಬೇಜವಾಬ್ದಾರಿಗೆ ಜನರ ಹಿಡಿಶಾಪ| ಕೋವಿಡ್ ಸಂದರ್ಭದಲ್ಲೂ ಈ ನಿರ್ಲಕ್ಷ್ಯ ತರವೆ?| ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕು ಆಸ್ಪತ್ರೆ ಕರ್ಮಕಾಂಡ|
ರಾಹುಲ್ ದೊಡ್ಮನಿ
ಕಲಬುರಗಿ(ಏ.19): ಕೊರೋನಾ ಕಾಲದಲ್ಲಿ ಆಕ್ಸಿಜನ್ ವೆಂಟಿಲೇಟರ್ ಬರ ಕಲಬುರಗಿ ಜಿಲ್ಲಾದ್ಯಂತ ಕಾಡುತ್ತಿರುವಾಗ ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಲಕ್ಷಾಂತರ ರು. ಮೌಲ್ಯದ 6 ವೆಂಟಿಲೇಟರ್ ಯಂತ್ರೋಪಕರಣಗಳು ಬಳಕೆಯಾಗದೆ ಮೂಲೆ ಸೇರಿವೆ.
ಅಫಜಲ್ಪುರ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಬರುವುದಕ್ಕಿಂತ ಮೊದಲೇ ವೆಂಟಿಲೇಟರ್‌ಗಳಿವೆ. ಆದರೆ, ಅವು ಆಸ್ಪತ್ರೆಗೆ ಬಂದಾಗಿನಿಂದ ಈವರೆಗೂ ಬಳಕೆಯಲ್ಲಿಲ್ಲ. ಕೋವಿಡ್‌ಗಿಂತ ಮೊದಲು ಅಷ್ಟಾಗಿ ವೆಂಟಿಲೇಟರ್ ಅವಶ್ಯಕತೆ ರೋಗಿಗಳಿಗೆ ಇಲ್ಲದಿರಬಹುದು. ಈಗ ವೆಂಟಿಲೇಟರ್ ಅತ್ಯಾವಶ್ಯಕವಾಗಿದೆ. ಆದರೆ, ಅಫಜಲ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ 6 ವೆಂಟಿಲೇಟರ್ ಇದ್ದರೂ ಬಳಸದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ.
ನುರಿತ ವೈದ್ಯರಿಲ್ಲವೆಂಬ ಸಿದ್ಧ ಉತ್ತರ:
ವೆಂಟಿಲೇಟರ್ ಎಂಬ ಜೀವ ರಕ್ಷಕ ಯಂತ್ರ ಮೂಲೆ ಸೇರಿದ್ಯಾಕೆ ಎಂದು ಕೇಳಿದರೆ ಸಂಬಂಧಪಟ್ಟವರು ವೆಂಟಿಲೇಟರ್ ಬಳಸಲು ನುರಿತ ವೈದ್ಯರು ಬೇಕು. ನಮ್ಮಲ್ಲಿ ನುರಿತ ವೈದ್ಯರಿಲ್ಲ ಹೀಗಾಗಿ ವೆಂಟಿಲೇಟರ್ ಬಳಕೆ ಮಾಡುತ್ತಿಲ್ಲ ಎಂಬ ಸಿದ್ಧ ಉತ್ತರ ನೀಡುತ್ತಿದ್ದಾರೆ. ನುರಿತವರಿಲ್ಲ ಎಂದರೆ ಇದ್ದವರಿಗೆ ತರಬೇತಿ ನೀಡಬಹುದು, ಇಲ್ಲವೆ ನುರಿತ ವೈದ್ಯರನ್ನು ನೇಮಿಸಿ ಬಡ ರೋಗಿಗಳಿಗೆ ಆರೋಗ್ಯ ಸೇವೆ ನೀಡಬಹುದಾದರೂ ಇದ್ಯಾವುದನ್ನೂ ಮಾಡದ ಕಾರಣ ಯಂತ್ರಗಳು ಮೂಲೆ ಸೇರಿವೆ.
8 ತಾಸು ಅಲೆದರೂ ಬೆಡ್ ಸಿಗದೆ ಕೊರೋನಾ ರೋಗಿ ಸಾವು..!
ಹೆಚ್ಚಿದ ಸಾವು ನೋವು:
ತಾಲೂಕಿನಾದ್ಯಂತ ಕೋವಿಡ್ 2ನೇ ಅಲೇ ಭೀತಿ ಹುಟ್ಟಿಸಿದೆ. 2ನೇ ಅಲೇ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 302 ಜನರಿಗೆ ಸೋಂಕು ತಗುಲಿ ರೌದ್ರನರ್ತನ ಮಾಡುತ್ತಿದೆ. 302 ಜನರ ಪೈಕಿ 10 ಜನರು ಸೋಂಕಿಗೆ ಬಲಿಯಾಗಿದ್ದಾರೆ. 129 ಜನ ರೋಗದಿಂದ ಗುಣಮುಖರಾಗಿದ್ದಾರೆ. ಸಧ್ಯ 163 ಸಕ್ರೀಯ ಪ್ರಕರಣಗಳಿವೆ. ಇವರಲ್ಲಿ 133 ಜನ ಹೋಮ್ ಐಸೋಲೇಟ್ ಆಗಿದ್ದಾರೆ. 28 ಜನ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅತೀ ಹೆಚ್ಚು ಗೊಬ್ಬೂರ(ಬಿ), ಅತೀ ಕಡಿಮೆ ಬಡದಾಳ, ಮಣೂರ ಪಿಹೆಚ್‌ಸಿಯಲ್ಲಿ ಪಾಸಿಟಿವ್ ಪ್ರಮಾಣ: ಅಫಜಲ್ಪುರ ತಾಲೂಕಿನಲ್ಲೇ ಅತೀ ಹೆಚ್ಚು ಕೊವಿಡ್ ಪ್ರಕರಣಗಳು ಬಂದರವಾಡ ಗ್ರಾಮದಲ್ಲಿ ದಾಖಲಾಗಿವೆ. ಗೊಬ್ಬೂರ(ಬಿ) ಪಿಹೆಚ್‌ಸಿ ವ್ಯಾಪ್ತಿಗೆ ಬರುವ ಬಂದರವಾಡ ಗ್ರಾಮದಲ್ಲಿ ಇಲ್ಲಿಯವರೆಗೆ 42 ಪ್ರಕರಣಗಳಿದ್ದು ಒಟ್ಟು ಗೊಬ್ಬೂರ(ಬಿ) ಪಿಹೆಚ್‌ಸಿ ವ್ಯಾಪ್ತಿಯಲ್ಲಿ 78 ಕೇಸ್‌ಗಳು ದಾಖಲಾಗುವ ಮೂಲಕ ತಾಲೂಕಿನಲ್ಲೇ ಅತೀ ಹೆಚ್ಚು ಕೊವಿಡ್ ಕೇಸ್‌ಗಳಿರುವ ಪಿಹೆಚ್‌ಸಿಯಾಗಿದೆ. ಇನ್ನೂ ಅಫಜಲ್ಪುರದಲ್ಲಿ 48, ರೇವೂರ(ಬಿ) ಪಿಹೆಚ್‌ಸಿಯಲ್ಲಿ 38 ಕೇಸ್‌ಗಳು ದಾಖಲಾಗುವ ಮೂಲಕ ಕ್ರಮವಾಗಿ 2-3ನೇ ಸ್ಥಾನದಲ್ಲಿವೆ. ಅತೀ ಕಡಿಮೆ ಕೊವಿಡ್ ಕೇಸ್‌ಗಳನ್ನು ಹೊಂದಿರುವ ಬಡದಾಳ ಹಾಗೂ ಮಣೂರ ಪಿಹೆಚ್‌ಸಿಗಳು ಕೊನೆಯ ಸ್ಥಾನದಲ್ಲಿವೆ.
ಆಕ್ಸಿಜನ್ ಕೊರತೆ: ಆಸ್ಪತ್ರೆಯಲ್ಲಿ 6 ಸೋಂಕಿತರ ಸಾವು!
ಅಫಜಲ್ಪುರ ಆಸ್ಪತ್ರೆಯಲ್ಲಿ 6 ವೆಂಟಿಲೇಟರ್‌ಗಳಿದ್ದರೂ ನುರಿತ ವೈದ್ಯರು ಇಲ್ಲದ್ದರಿಂದ ಅವುಗಳನ್ನು ಬಳಸುತ್ತಿಲ್ಲ. ಕೇವಲ ಒಬ್ಬ ಅನಸ್ತೇಷಿಯಾ ವೈದ್ಯರಿದ್ದಾರೆ. ಅವರೊಬ್ಬರಿಂದ 6 ವೆಂಟಿಲೇಟರ್‌ಗಳ ನಿರ್ವಹಣೆ ಅಸಾಧ್ಯ. ನುರಿತ ಸಿಬ್ಬಂದಿಗಳನ್ನು ಆದಷ್ಟುಬೇಗ ನೇಮಿಸಿ ವೆಂಟಿಲೇಟರ್ ಸೇವೆ ರೋಗಿಗಳಿಗೆ ಸಿಗುಂತೆ ಮಾಡಲಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ತಿಳಿಸಿದ್ದಾರೆ
ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳಿದ್ದು ಅವುಗಳು ಬಳಕೆಯಾಗುತ್ತಿಲ್ಲವೆಂದು ಗಮನಕ್ಕೆ ಬಂದಿದೆ. ಹೀಗಾಗಿ ಕೂಡಲೇ ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಕರೊಂದಿಗೆ ಮಾತನಾಡಿ ಕೂಡಲೇ ನುರಿತ ವೆಂಟಿಲೇಟರ್ ಬಳಸಬಲ್ಲ ನುರಿತ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಸೂಚಿಸುತ್ತೇನೆ ಎಂದು ಅಫಜಲ್ಪುರ ಶಾಸಕ ಎಂ.ವೈ ಪಾಟೀಲ್ ಹೇಳಿದ್ದಾರೆ.
ಕೊರೋನಾ ಮಹಾಮಾರಿಯ ಭೀತಿ ಇನ್ನಷ್ಟು ಹೆಚ್ಚಾಗುವ ಸಾದ್ಯತೆ ಇದೆ. ಮುಂದಿನ ದಿನಗಳಲ್ಲಿ ವೆಂಟಿಲೇಟರ್ ಕೊರತೆ ಕಾಡಬಹುದು. ಶೀಘ್ರ ತಾಲೂಕು ಆಸ್ಪತ್ರೆಯಲ್ಲಿನ ವೆಂಟಿಲೇಟರ್‌ಗಳು ಕಾರ್ಯಾರಂಭ ಮಾಡಿ ಬಡ ರೋಗಿಗಳಿಗೆ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲು ಡಿಹೆಚ್‌ಒ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ತಿಳಿಸಿದ್ದಾರೆ.