ಕೊರೋನಾ ರಣಕೇಕೆ: ಕೊಪ್ಪಳದಲ್ಲಿ ವೆಂಟಿಲೇಟರ್‌ಗಾಗಿ ಪರದಾಟ

By Kannadaprabha News  |  First Published Aug 10, 2020, 12:16 PM IST

ಇದ್ದ ವೆಂಟಿಲೇಟರ್‌ ಇನ್‌ಸ್ಟಾಲ್‌ ಮಾಡಿಲ್ವಂತೆ ಜಿಲ್ಲಾಸ್ಪತ್ರೆಯಲ್ಲಿ| ರೋಗಿಗಳನ್ನು ದೇವರೇ ಕಾಪಾಡಬೇಕು|ತಂಗಡಗಿ ಆಪ್ತ ಸಹಾಯಕನಿಗೆ ಸಿಗುತ್ತಿಲ್ಲ ವೆಂಟಿಲೇಟರ್‌| ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ|


ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.10): ಜಿಲ್ಲೆಯಲ್ಲಿ ಕೋವಿಡ್‌-19 ತನ್ನ ರಣಕೇಕೆಯನ್ನು ಹಾಕುತ್ತಲೇ ಇದ್ದು, ಎದುರಿಸುವುದಕ್ಕೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಜಿಲ್ಲೆಯಲ್ಲಿ ಇಲ್ಲದಿರುವುದು ಕಳೆದ ನಾಲ್ಕಾರು ದಿನಗಳಿಂದ ಬೆಳಕಿಗೆ ಬರುತ್ತಿದೆ. ಅದೆಷ್ಟೋ ರೋಗಿಗಳಿಗೆ ವೆಂಟಿಲೇಟರ್‌ ಅವಶ್ಯಕತೆ ಇದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಿಗುತ್ತಲೇ ಇಲ್ಲ. ಇನ್ನು ದುರಂತ ಎಂದರೆ ಸರ್ಕಾರಿ ಆಸ್ಪತ್ರೆಯಲ್ಲಿ ಬಂದಿರುವ ವೆಂಟಿಲೇಟರ್‌ಗಳನ್ನು ಇದುವರೆಗೂ ಇನ್‌ಸ್ಟಾಲ್‌ ಮಾಡಿಲ್ವಂತೆ. ಕೇವಲ ಮೂರು ಮಾತ್ರ ಇನ್‌ಸ್ಟಾ​ಲ್‌ ಮಾಡಲಾಗಿದೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

Latest Videos

undefined

ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್‌ ಅವರು ಅನೇಕ ಬಾರಿ ವೆಂಟಿಲೇಟರ್‌ಗಳ ಕೊರತೆ ಇಲ್ಲ, ಇರುವಷ್ಟು ವೆಂಟಿಲೇಟರ್‌ಗಳಿಗೆ ಬಳಕೆಯಾಗಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ, ವಾಸ್ತವ ಚಿತ್ರಣವೇ ಬೇರೆಯೇ ಇದೆ ಎನ್ನುವುದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿಯೂ ಫುಲ್‌ ಇರುವುದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕೇಳಿದರೆ ಅಲ್ಲಿಯೂ ಫುಲ್‌ ಇವೆ ಎನ್ನುವ ಉತ್ತರ ಬಂದಿದೆ.

ಸಚಿವ ಬಿ.ಸಿ. ಪಾಟೀಲ್‌ಗೆ ಕೊರೋನಾ ದೃಢ: ಆತಂಕದಲ್ಲಿ ಕೊಪ್ಪಳದ ಜನತೆ..!

ಆಘಾತಕಾರಿ ಅಂಶ ಬೆಳಕಿಗೆ

ಜಾಡು ಹಿಡಿದು ಹೊರಟ ‘ಕನ್ನಡಪ್ರಭ’ಕ್ಕೆ ಸಿಕ್ಕ ಸುದ್ದಿ ಮಾತ್ರ ಆಘಾತಕಾರಿ. ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿಯೇ ವೆಂಟಿಲೇಟರ್‌ಗಳು ಇದ್ದರೂ ಇನ್‌ಸ್ಟಾ​ಲ್‌ ಮಾಡಿಲ್ವಂತೆ. ಸುಮಾರು 25 ವೆಂಟಿಲೇಟರ್‌ಗಳು ಬಂದಿದ್ದರೂ ಕೇವಲ ಮೂರು ಮಾತ್ರ ಇನ್‌ಸ್ಟಾ​ಲ್‌ ಮಾಡಲಾಗಿದೆ ಎನ್ನುವ ಮಾಹಿತಿ ದೊರೆತಿದೆ. ಆದರೆ, ಈ ಕುರಿತು ಅಧಿಕೃತ ಮಾಹಿತಿಯನ್ನು ಯಾವೊಬ್ಬ ವೈದ್ಯರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಅಧಿಕಾರಿ ಲಿಂಗರಾಜು ಅವರು ಸೇರಿದಂತೆ ಯಾರು ಸಹ ಹೇಳುತ್ತಿಲ್ಲ. ಇದರ ಸತ್ಯಾಸತ್ಯತೆಯನ್ನು ಇವರೇ ಹೇಳಬೇಕಾಗಿದೆ.

ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರಡ್ಡಿ ಅವರ ಮೊಬೈಲ್‌ಗೆ ಕರೆ ಮಾಡಿದರೆ ನಾಟ್‌ರೀಚೇಬಲ್‌ ಬಂದಿತು. ಇನ್ನು ಇವರದೇ ಮತ್ತೊಂದು ಸಂಖ್ಯೆಗೆ ಕರೆ ಮಾಡಿದರೆ ಅದು ಡಾ. ಮಹೇಂದ್ರಕರ್‌ ಅವರ ಮೊಬೈಲ್‌ಗೆ (ಕಾಲ್‌ಪಾರ್ವಡ್‌) ಹೋಯಿತು. ಡಾ. ಮಹೇಂದ್ರಕರ್‌ ಅವರು ಹೇಳುವ ಪ್ರಕಾರ ಮೂರು ವೆಂಟಿಲೇಟರ್‌ ಇದ್ದು, ಮೂರು ಫುಲ್‌ ಆಗಿವೆ. ಇನ್ನು ಉಳಿದವುಗಳನ್ನು ಇನ್‌ಸ್ಟಾಲ್‌ ಮಾಡಲು ಐಸಿಯು ಬೆಡ್‌ ಇಲ್ವಂತೆ. ಇನ್ನು ಅವರೇ ಹೇಳುವ ಪ್ರಕಾರ ಐಸಿಯುನಲ್ಲಿ 20 ಬೆಡ್‌ಗಳು ಇದ್ದು, ಅಷ್ಟುಫುಲ್‌ ಆಗಿವೆ ಎನ್ನುತ್ತಾರೆ. ಇರುವ ವೆಂಟಿಲೇಟರ್‌ ಎಷ್ಟು? ಈಗ ಕಾರ್ಯನಿರ್ವಹಿಸುತ್ತಿರುವ ವೆಂಟಿಲೇಟರ್‌ ಎಷ್ಟುಎಂದರೆ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದರು.

ಇನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಲಿಂಗರಾಜ ಅವರಿಗೆ ಕರೆ ಮಾಡಿ ಮಾತನಾಡಿಸಿದಾಗ ಜಿಲ್ಲೆಯಲ್ಲಿ ವೆಂಟಿಲೇಟರ್‌ಗಳ ಸಮಸ್ಯೆ ಇಲ್ಲ. 45ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಇವೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿನ ಮಾಹಿತಿಯನ್ನು ಅವರನ್ನೇ ಕೇಳಬೇಕು ಎಂದರು.

ಆಪ್ತಸಹಾಯಕನಿಗೂ ಇಲ್ಲ ವೆಂಟಿಲೇಟರ್‌

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕ ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರಿಗೆ ಆಕ್ಸಿಜನ್‌ ಮೇಲೆಯೇ ಚಿಕಿತ್ಸೆಯನ್ನು ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿನ ಮೂರು ವೆಂಟಿಲೇಟರ್‌ ಫುಲ್‌ ಆಗಿವೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಯಲ್ಲಿನ ವೆಂಟಿಲೇಟರ್‌ ಆದರೂ ಸಿಕ್ಕಿತು ಎನ್ನುವ ಪ್ರಯತ್ನ ಕೈಗೂಡಲೇ ಇಲ್ಲ. ಸ್ವತಃ ಶಿವರಾಜ ತಂಗಡಗಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಲಿಂಗರಾಜ್‌ ಅವರಿಗೆ ಕರೆ ಮಾಡಿ, ವೆಂಟಿಲೇಟರ್‌ ವ್ಯವಸ್ಥೆ ಮಾಡಿ ಎಂದರೂ ಪ್ರಯೋಜನವಾಗಿಲ್ಲ.

ಜಿಲ್ಲಾಧಿಕಾರಿಗಳೇ ಉತ್ತರಿಸಬೇಕು?

ಜಿಲ್ಲಾಸ್ಪತ್ರೆಯಲ್ಲಿ ಇರುವ ವೆಂಟಿಲೇಟರ್‌ಗಳ ಸಂಖ್ಯೆ ಎಷ್ಟು? ಎಷ್ಟುಇನ್‌ಸ್ಟಾಲ್‌ ಮಾಡಲಾಗಿದೆ? ಬಂದಿದ್ದರೂ ಇನ್ನು ಇನ್‌ಸ್ಟಾಲ್‌ ಮಾಡದೆ ಇರುವ ವೆಂಟಿಲೇಟರ್‌ಗಳು ಎಷ್ಟು? ಇಷ್ಟೆಲ್ಲ ಸಮಸ್ಯೆ ಇದ್ದರೂ ಇದುವರೆಗೂ ಯಾಕೆ ಇನ್‌ಸ್ಟಾಲ್‌ ಮಾಡಿಲ್ಲ? ಎನ್ನುವ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ ಸುರಳ್ಕರ್‌ ಅವರೇ ಉತ್ತರ ನೀಡಬೇಕು. ಕೂಡಲೇ ಇನ್‌ಸ್ಟಾಲ್‌ ಆಗದೆ ಇರುವ ವೆಂಟಿಲೇಟರ್‌ಗಳನ್ನು ಇನ್‌ಸ್ಟಾಲ್‌ ಮಾಡಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
 

click me!