'ಬಿಜೆಪಿ ಸೇರಲು ಜೆಡಿಎಸ್‌ನ ನಾಲ್ವರು ಶಾಸಕರ ಉತ್ಸುಕ'

By Kannadaprabha NewsFirst Published Aug 9, 2020, 11:43 AM IST
Highlights

ಜೆಡಿಎಸ್‌ ಸೇರಿದಂತೆ ಅನ್ಯ ಪಕ್ಷಗಳಿಂದ ವಲಸೆ ಬರುವ ಶಾಸಕರು ಮುಂದಿನ ವಿಧಾನ ಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರಲು ಉತ್ಸಾಹ| ಟಿಕೆಟ್‌ ಕೊಡುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ| ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸಭೆ|

ಮದ್ದೂರು(ಆ.09):  ಮಂಡ್ಯ ಜಿಲ್ಲೆಯ ನಾಲ್ವರು ಜೆಡಿಎಸ್‌ ಶಾಸಕರು ಬಿಜೆಪಿಗೆ ಸೇರುವುದಕ್ಕೆ ಉತ್ಸುಕರಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷ ಸೇರುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಪಟ್ಟಣದ ಸೋಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಜೆಡಿಎಸ್‌ ಸೇರಿದಂತೆ ಅನ್ಯ ಪಕ್ಷಗಳಿಂದ ವಲಸೆ ಬರುವ ಶಾಸಕರು ಮುಂದಿನ ವಿಧಾನ ಸಭಾ ಚುನಾವಣೆ ವೇಳೆಗೆ ಬಿಜೆಪಿ ಸೇರಲು ಉತ್ಸಾಹ ತೋರುತ್ತಿದ್ದಾರೆ. ಇವರುಗಳಿಗೆ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಬಿಜೆಪಿ ಸಿದ್ಧಾಂತಗಳು ಮತ್ತು ತತ್ವವನ್ನು ಒಪ್ಪಿ ಬರುವವರಿಗೆ ಪಕ್ಷ ಸೇರುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ಪಕ್ಷದ ಸಂಘಟನೆಗೆ ಶ್ರಮಿಸುತ್ತಿರುವ ಮನ್‌ಮುಲ್‌ ನಿರ್ದೇಶಕ ಎಸ್‌.ಬಿ. ಸ್ವಾಮಿ ಅವರಿಗೆ ಕಾರ‍್ಯಕರ್ತರು ಒಪ್ಪಿದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಸೂಚ್ಯವಾಗಿ ಸುಳಿವು ನೀಡಿದರು.

ಕಾವೇರಿ ಕೊಳ್ಳದಲ್ಲಿ ಭಾರೀ ಮಳೆ: KRS ಡ್ಯಾಂ ಬಹುತೇಕ ಭರ್ತಿ, ಸಂತಸದಲ್ಲಿ ರೈತರು..!

ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿ ಸಂಘಟನೆಗೊಳ್ಳಬೇಕು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಸಹ ಪ್ರವಾಸ ಕೈಗೊಂಡು ಪಕ್ಷದ ಕಾರ‍್ಯಕರ್ತರನ್ನು ಹುರಿದುಂಬಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಕಾರ‍್ಯಕರ್ತರು ಸನ್ನದ್ಧರಾಗಬೇಕು ಎಂದು ಹೇಳಿದರು.

ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಗೊಂದಲವಿದೆ. ಹಿರಿಯ-ಕಿರಿಯರು ಹಾಗೂ ವಲಸೆ ಕಾರ‍್ಯಕರ್ತರು ಎಂಬ ಬೇಧ ಭಾವ ಬಿಟ್ಟು ಒಗ್ಗಟ್ಟಿನಿಂದ ಸಂಘಟನೆಗೆ ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ಸಂಘಟನೆಯಿಂದ ದೂರ ಉಳಿದಿರುವವರನ್ನು ಕರೆದು ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲು ಪದಾಧಿಕಾರಿಗಳು ಸಿದ್ಧರಾಗಬೇಕು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್‌, ಮಾಜಿ ಅಧ್ಯಕ್ಷ ನಾಗಣ್ಣಗೌಡ, ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಶಿವಲಿಂಗೇಗೌಡ, ಪ.ನಾ. ಸುರೇಶ್‌, ಉಪಾಧ್ಯಕ್ಷ ಶ್ರೀಧರ್‌, ತಾಲೂಕು ಘಟಕದ ಅಧ್ಯಕ್ಷ ಪಣ್ಣೇದೊಡ್ಡಿ ರಘು, ಎಪಿಎಂಸಿ ಅಧ್ಯಕ್ಷ ಜಿ.ಸಿ. ಮಹೇಂದ್ರ, ಉಪಾಧ್ಯಕ್ಷ ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ರೈತ ಮೋರ್ಚಾ ಘಟಕದ ಅಧ್ಯಕ್ಷ ಶಿವದಾಸ್‌ ಸತೀಶ್‌ ಸೇರಿದಂತೆ ಪಕ್ಷದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
 

click me!