* ಅಲೆಮಾರಿಗಳು ಬದುಕಿಗಾಗಿ ಹರಸಾಹಸ
* ಕೃಷಿ, ಬ್ಯಾಂಕ್ ಬೆಳಗ್ಗೆ 12ರ ವರೆಗೂ ಪ್ರಾರಂಭ
* ಪೌರಕಾರ್ಮಿಕರಿಗೆ ಮಾತ್ರ ತಪ್ಪಿಲ್ಲ ಕೆಲಸ
ಕೊಪ್ಪಳ(ಜೂ.02): ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ತಡೆಗಟ್ಟಲು ಜಿಲ್ಲಾಡಳಿತ ಈಗ ಸಂಪೂರ್ಣ ಲಾಕ್‌ಡೌನ್ ಮುಂದುವರೆಸಿದೆ. ಆದರೂ ಒಂದಿಷ್ಟು ಸಡಿಲಿಕೆ ನೀಡಿದ್ದರಿಂದ ಬೈಕ್, ವಾಹನ ಸಂಚಾರ ಹೆಚ್ಚಿದೆ.
ಜಿಲ್ಲಾ ಕೇಂದ್ರ ಕೊಪ್ಪಳ ನಗರ ಸೇರಿದಂತೆ ವಿವಿಧೆಡೆಯೂ ಬೆಳಗ್ಗೆ 8 ಗಂಟೆಯಿಂದ 12 ಗಂಟೆಯವರೆಗೂ ಬ್ಯಾಂಕ್ ತೆರೆದಿರುವುದರಿಂದ ಸಹಜವಾಗಿಯೇ ಜನರು ವಹಿವಾಟಿಗೆ ಆಗಮಿಸುತ್ತಿದ್ದಾರೆ. ಬ್ಯಾಂಕ್ ಪಾಸ್ ಬುಕ್ ಕೈಯಲ್ಲಿ ಹಿಡಿದುಕೊಂಡು ಬ್ಯಾಂಕಿಗೆ ಬಂದಿದ್ದೇವೆ ಎಂದು ಪೊಲೀಸರಿಂದ ಪಾರಾಗುತ್ತಾರೆ. ಅವರು ಯಾತಕ್ಕಾಗಿ ಬಂದಿದ್ದಾರೋ ದೇವರಿಗೆ ಗೊತ್ತು ಎನ್ನುತ್ತಾರೆ ಪೊಲೀಸರು.
undefined
ಜಿಲ್ಲಾಡಳಿತವೇ ಬ್ಯಾಂಕಿಗೆ ಬಂದವರಿಗೆ ಹಾಗೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವವರಿಗೆ ಅವಕಾಶ ನೀಡಲು ಸೂಚಿಸಿರುವುದರಿಂದ ಈ ರೀತಿ ಹೇಳಿಕೊಂಡು ಬರುವ ಎಲ್ಲರನ್ನೂ ಬಿಡುವುದು ಅನಿವಾರ್ಯವಾಗಿರುವುದರಿಂದ ಸಂಚಾರ ಮಧ್ಯಾಹ್ನ 12 ಗಂಟೆಯವರೆಗೂ ಹೆಚ್ಚಳವಾಗಿರುತ್ತದೆ. ಇದನ್ನು ಮೀರಿಯೂ ಒಂದಿಷ್ಟು ಜನರನ್ನು ವಿಚಾರಣೆ ಮಾಡಿದಾಗ ಸುಳ್ಳು ಹೇಳುವುದು ಪತ್ತೆಯಾಗುವುದರಿಂದ ಪೊಲೀಸರು ಅಂಥವರ ಬೈಕ್ ಸೀಜ್ ಮಾಡಿ, ಮನೆಗೆ ಕಳುಹಿಸುತ್ತಿದ್ದಾರೆ.
ಕೊಪ್ಪಳ: ಕೊರೋನಾದಿಂದ ಅನಾಥ ಮಕ್ಕಳ ಹೊಣೆ ಹೊರಲು ಮುಂದಾದ ಗಡ್ಡಿಮಠ ಶ್ರೀ
ಅಲೆಮಾರಿಗಳ ಸುತ್ತಾಟ:
ಈ ನಡುವೆ ಬದುಕು ಕಟ್ಟಿಕೊಳ್ಳಲು ಅಲೆಮಾರಿಗಳು ಸುತ್ತಾಡುತ್ತಲೇ ಇದ್ದಾರೆ. ಕೊಡ ಮತ್ತಿತರರ ವಸ್ತುಗಳನ್ನು ಮಾರಿಯೇ ಜೀವನ ನಡೆಸುವವರು ಇದಕ್ಕಾಗಿ ಅಲ್ಲಲ್ಲಿ ಸುತ್ತಾಡುತ್ತಿದ್ದಾರೆ. ಆದರೆ, ಖರೀದಿ ಮಾಡುವವರೇ ಇಲ್ಲ.
ಹೊತ್ತೊಯೋದೇ ಗತಿ:
ಕೃಷಿ ಚಟುವಟಿಕೆ ನಡೆಸಲು ಅವಕಾಶ ನೀಡಿ, ಅದಕ್ಕೆ ಸಂಬಂಧಿಸಿದ ಅಂಗಡಿಗಳನ್ನೂ ತೆರೆಯಲಾಗಿದೆ. ಆದರೆ, ಖರೀದಿ ಮಾಡಿರುವುದನ್ನು ತೆಗೆದುಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ ರೈತರಿಗೆ. ಅದರಲ್ಲೂ ರಸಗೊಬ್ಬರ, ಬೀಜ ಮತ್ತಿತರ ಪರಿಕರಗಳನ್ನು ಸಾಗಿಸಲು ವಾಹನಗಳಿಗೆ ಅವಕಾಶ ಇದ್ದರೂ ಸಿಗುತ್ತಿಲ್ಲ. ಸಿಕ್ಕರೂ ಸಿಕ್ಕಾಪಟ್ಟೆ ದುಬಾರಿ ಎನ್ನುತ್ತಾರೆ ರೈತರು.
ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ:
ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದೇ ಹೇಳಲಾಗುತ್ತದೆ. ಇಂಥ ಲಾಕ್‌ಡೌನ್ ಸಮಯದಲ್ಲಿಯೂ ಅವರು ನಗರ ಸ್ವಚ್ಛತೆಗಾಗಿ ಕಾರ್ಯ ಮಾಡುತ್ತಲೇ ಇದ್ದಾರೆ. ಅಲ್ಲದೆ ಗಲ್ಲಿ ಗಲ್ಲಿಯಲ್ಲಿಯೂ ಚರಂಡಿಯನ್ನು ಸ್ವಚ್ಛ ಮಾಡುವುದನ್ನು ಅವರು ಬಿಟ್ಟಿಲ್ಲ. ಎಲ್ಲರೂ ಲಾಕ್‌ಡೌನ್ ಎಂದು ಮನೆಯಲ್ಲಿ ಇದ್ದರೆ ಇವರು ಮಾತ್ರ ತಮ್ಮ ಕಾರ್ಯವನ್ನು ಚಾಚುತಪ್ಪದೇ ಮಾಡುತ್ತಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona