ಕರ್ನಾಟಕ ಬಜೆಟ್ 2020: 'ಮಹದಾಯಿಗೆ ಕನಿಷ್ಠ 1000 ಕೋಟಿ ಮೀಸಲಿಡಲಿ'

By Kannadaprabha NewsFirst Published Mar 5, 2020, 8:30 AM IST
Highlights

ಗೆಜೆಟ್ ನೋಟಿಫಿಕೇಶನ್ ಆಗಿದೆ | ಈಗ ಏನಿದ್ದರೂ ರಾಜ್ಯ ಸರ್ಕಾರದ ಕೆಲಸ | ಈ ಬಜೆಟ್‌ನಲ್ಲಿ ಹಣ ಮೀಸಲಿಡಲಿ| ರಾಜ್ಯ ಸರ್ಕಾರ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು| 

ಶಿವಾನಂದ ಗೊಂಬಿ 

ಹುಬ್ಬಳ್ಳಿ(ಮಾ.05): ಉತ್ತರ ಕರ್ನಾಟಕದ ದಶಕಗಳ ಕನಸಾದ ಮಹದಾಯಿ ವಿವಾದ ಇದೀಗಷ್ಟೇ ಮುಗಿದಿದೆ. ಅತ್ತ ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿಯೂ ಆಗಿದೆ. ಈಗೇನಿದ್ದರೂ ರಾಜ್ಯ ಸರ್ಕಾರದ ಕೆಲಸ. ಈ ನಿಟ್ಟಿನಲ್ಲಿ  ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಎಷ್ಟು ತೆಗೆದಿರಿಸಲಿದೆ. ಎಷ್ಟು ತೆಗೆದಿರಿಸಿದರೆ ಉತ್ತಮ ಎಂಬೆಲ್ಲ ಲೆಕ್ಕಾಚಾರ ಹಾಕುತ್ತಿರುವ ಮಹದಾಯಿ ಹೋರಾಟಗಾರರು, ಕನಿಷ್ಠ ಪಕ್ಷ ಈ ಕೆಲಸಗಳಿಗೆ ಈ ಬಜೆಟ್‌ನಲ್ಲಿ 1 ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

ಹೌದು, ಮಹದಾಯಿ ವಿವಾದ ಸುಮಾರು 4 ದಶಕಗಳ ಹೋರಾಟ. 4 ದಶಕಗಳಿಂದಲೂ ಆಗಾಗ ಇದರ ಬಗ್ಗೆ ಧ್ವನಿ ಎತ್ತುತ್ತಿದ್ದ ಹೋರಾಟಗಾರರಿಗೆ 2020 ಬಲು ಶುಭವಾಗಿ ಗೋಚರಿಸಿದೆ. ಅತ್ತ 2018ರ ಅಗಸ್ಟ್‌ನಲ್ಲಿ ನ್ಯಾಯಾಧಿಕರಣ 13.5 ಟಿಎಂಸಿ ನೀರು ಕರ್ನಾಟಕದ ಪಾಲು ಎಂದು ತೀರ್ಪು ನೀಡಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

18 ತಿಂಗಳು ದಾಟಿದರೂ ಕೇಂದ್ರ ಸರ್ಕಾರ ಮಾತ್ರ ಅಧಿಸೂಚನೆ ಹೊರಡಿಸುವ ಗೋಜಿಗೆ ಹೋಗಿರಲಿಲ್ಲ. ಕೊನೆಗೆ ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ಅಧಿಸೂಚನೆ ಹೊರಡಿಸಿ ಎಂದು ಸೂಚನೆ ನೀಡಿತ್ತು. ಹೀಗೆ ಸೂಚನೆ ನೀಡಿದ ಒಂದು ವಾರದಲ್ಲೇ ಕೇಂದ್ರ ಸರ್ಕಾರವೂ ಅಧಿಸೂಚನೆಯನ್ನೂ ಹೊರಡಿಸಿದೆ. 

ಸಬೂಬು ಹೇಳುವಂತಿಲ್ಲ: 

ಇಷ್ಟು ದಿನ ಕೇಂದ್ರ ಸರ್ಕಾರ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಗೋವಾ, ಮಹಾರಾಷ್ಟ್ರಗಳು ಮೇಲ್ಮನವಿ ಸಲ್ಲಿಸಿವೆ. ಹೀಗಾಗಿ ನಾವೇನು ಮಾಡಲು ಬರುತ್ತಿಲ್ಲ ಎಂದೆಲ್ಲ ಸಬೂಬು ಹೇಳುತ್ತಿದ್ದ ರಾಜ್ಯ ಸರ್ಕಾರ, ಈ ಸಲ ಹಾಗೆ ಮಾಡುವಂತಿಲ್ಲ. ಏಕೆಂದರೆ ಆಗಲೇ ಅಧಿಸೂಚನೆ ಹೊರಡಿಸುವ ಮೂಲಕ ತನ್ನ ಕೆಲಸವನ್ನು ಕೇಂದ್ರ ಮಾಡಿ ಮುಗಿಸಿದೆ. ಇನ್ನೇನಿದ್ದರೂ ರಾಜ್ಯ ಸರ್ಕಾರದ ಕೆಲಸವೇ ಉಳಿದಿರುವುದು. ಹಾಗೆ ನೋಡಿದರೆ ಕಳಸಾ ನಾಲೆ ಜೋಡಣೆಯ ಕಾಮಗಾರಿಯೂ ಮುಕ್ಕಾಲು ಭಾಗವೇ ಮುಗಿದಿದೆ. ಇನ್ನು ಕಾಲ ಭಾಗ ಮಾತ್ರ ಉಳಿದಿರುವುದು. ಕೇಂದ್ರ ಸರ್ಕಾರ ಅರಣ್ಯ ಸೇರಿದಂತೆ ಮತ್ತಿತರ ಇಲಾಖೆಗಳಿಂದ ಕೆಲವೊಂದು ಕಾಮಗಾರಿಗಳಿಗೆ ಅನುಮತಿ ಪಡೆಯಬೇಕು. ಇದಕ್ಕಾಗಿ ಪ್ರತ್ಯೇಕವಾದ ಹಿರಿಯ ಸಚಿವರು, ಅಧಿಕಾರಿಗಳ ತಂಡವನ್ನೇ ರಚಿಸಬೇಕು. ಇನ್ನು ಈಗ ಸಿಕ್ಕಿರುವ ನೀರಿನಲ್ಲಿ ಯಾವ್ಯಾವ ಕಾಮಗಾರಿ ಕೈಗೊಳ್ಳಬೇಕು. ಆ ನೀರನ್ನು ಬಳಸಿಕೊಳ್ಳಲು, ಸಂಗ್ರಹಿಸಿಟ್ಟುಕೊಳ್ಳಲು ನಮ್ಮಲ್ಲಿನ ತಯಾರಿಯೇನು? ಎಂಬುದನ್ನೆಲ್ಲ ಅಧ್ಯಯನ ಮಾಡಲು ತಜ್ಞರ ಕಮಿಟಿ ರಚಿಸಬೇಕು. ಸುಪ್ರೀಂಕೋರ್ಟಿನ ನಿರ್ದೇಶನದಂತೆ ಕಳಸಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸಬೇಕು. 

ಕಳಸಾ- ಬಂಡೂರಿ ಕಾಲುವೆ ಮತ್ತು ಸಣ್ಣ ಡ್ಯಾಂಗಳ ನಿರ್ಮಾಣ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಮಾಡಬೇಕು. ವಿವಾದ ಇದ್ದಾಗ ತೋರಿದ್ದ ಉತ್ಸಾಹವನ್ನು ಸರ್ಕಾರ ಈಗ ತೋರಿಸಬೇಕಿದೆ. ಬಜೆಟ್‌ನಲ್ಲಿ ಮಹದಾಯಿ, ಕಳಸಾ- ಬಂಡೂರಿಗಾಗಿ ಕನಿಷ್ಠವೆಂದರೂ 1 ಸಾವಿರ ಕೋಟಿಯನ್ನಾದರೂ ಮೀಸಲಿಡಬೇಕು. ಸಮಿತಿ ರಚನೆ ಬಗ್ಗೆಯೂ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂಬುದು ಮಹದಾಯಿ ಹೋರಾಟಗಾರರ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಎಷ್ಟು ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಮಹದಾಯಿ ವಿಷಯವಾಗಿ ಸಬೂಬು ಹೇಳಲು ರಾಜ್ಯ ಸರ್ಕಾರದ ಬಳಿ ವಿಷಯವೇ ಇಲ್ಲ. ಈಗ ಏನೇ ಮಾಡಬೇಕಿದ್ದರೂ ಅದನ್ನು ರಾಜ್ಯ ಸರ್ಕಾರವೇ ಮಾಡಬೇಕು. ಇದಕ್ಕಾಗಿ ಈ ಬಜೆಟ್‌ನಲ್ಲಿ ಕನಿಷ್ಠವೆಂದರೂ 1 ಸಾವಿರ ಕೋಟಿಯನ್ನಾದರೂ ಮೀಸಲಿಡಬೇಕು ಎಂದು , ರೈತಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದ್ದಾರೆ. 

ಮಹದಾಯಿ ಸಮಸ್ಯೆ ಸದ್ಯಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಮೂಲಕ ಶಮನ ಮಾಡಿದೆ. ಆದರೆ ರಾಜ್ಯ ಸರ್ಕಾರ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು. ಇದಕ್ಕಾಗಿ ಅಗತ್ಯವಿರುವ ಕೇಂದ್ರ ಸರ್ಕಾರದ ಇಲಾಖೆಗಳಿಂದ ಅನುಮತಿ ಪಡೆಯಬೇಕು. 2 ಸಾವಿರ ಕೋಟಿ ಮೀಸಲಿಡಬೇಕು ಎಂದು ಕಳಸಾ ಹೋರಾಟಗಾರ ವಿಜಯ ಕುಲಕರ್ಣಿ ತಿಳಿಸಿದ್ದಾರೆ.  
 

click me!