ಮಂಗಳೂರು ಗೋಲಿಬಾರ್‌: ಪೊಲೀಸ್‌ ಕಮಿಷನರ್‌ಗೆ ನೋಟಿಸ್‌

By Kannadaprabha News  |  First Published Mar 5, 2020, 8:09 AM IST

ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಮ್ಯಾಜಿಸ್ಟ್ರೀರಿಯಲ್‌ ವಿಚಾರಣೆಯಲ್ಲಿ ಎಸಿಪಿ ಸಹಿತ 29 ಪೊಲೀಸರು ಹಾಜರಾಗಿ ಸಾಕ್ಷ್ಯ ಸಲ್ಲಿಸಿದ್ದರು. ಇದೀಗ ಪೊಲೀಸ್ ಕಮಿಷನರ್‌ಗೂ ನೋಟಿಸ್ ಕಳುಹಿಸಲಾಗಿದೆ.


ಮಂಗಳೂರು(ಮಾ.05): ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಮ್ಯಾಜಿಸ್ಟ್ರೀರಿಯಲ್‌ ವಿಚಾರಣೆಯಲ್ಲಿ ಎಸಿಪಿ ಸಹಿತ 29 ಪೊಲೀಸರು ಹಾಜರಾಗಿ ಸಾಕ್ಷ್ಯ ಸಲ್ಲಿಸಿದ್ದರು. ಇದೇ ವೇಳೆ ಮಾ.12ರಂದು ಹಾಜರಾಗಿ ಸಾಕ್ಷ್ಯ ಸಲ್ಲಿಸುವಂತೆ ನಗರ ಪೊಲೀಸ್‌ ಕಮಿಷನರ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟ್ರೀರಿಯಲ್‌ ತನಿಖಾಧಿಕಾರಿ ಜಗದೀಶ್‌ ವಿಚಾರಣೆ ನಡೆಸಿದರು. ಒಟ್ಟು 176 ಸಾಕ್ಷಿಗಳ ಪೈಕಿ ಬುಧವಾರ ಇಬ್ಬರು ಎಸಿಪಿಗಳಾದ ಕೋದಂಡರಾಮ ಮತ್ತು ಬೆಳ್ಳಿಯಪ್ಪ ಸಹಿತ 29 ಪೊಲೀಸರು ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದಾರೆ.

Latest Videos

undefined

ಮಂಗಳೂರು ಗೋಲಿಬಾರ್‌: ಮಾರ್ಚ್ 4ಕ್ಕೆ ಪೊಲೀಸರ ವಿಚಾರಣೆ

ಫೆ.25ರಂದು 12 ಪೊಲೀಸರಿಗೆ ಹಾಜರಾಗಲು ನೋಟಿಸ್‌ ಜಾರಿಗೊಳಿಸಲಾಗಿತ್ತು. ಆದರೆ, ಈ ಪೊಲೀಸರು ವೈಯಕ್ತಿಕ ಕಾರಣದಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಬುಧವಾರ 25 ಮಂದಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ, ಬುಧವಾರ ಒಟ್ಟು 37 ಮಂದಿಯ ಪೈಕಿ 29 ಮಂದಿ ಹಾಜರಾಗಿ ಸಾಕ್ಷ್ಯ ನೀಡಿದರು.

ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಮಾ.12ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌.ಹರ್ಷ ಹಾಗೂ ಮಾ.9ಕ್ಕೆ ಹಾಜರಾಗುವಂತೆ ಡಿಸಿಪಿ ಅರುಣಾಂಶುಗಿರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅದಲ್ಲದೆ ಈ ಎರಡೂ ದಿನಗಳಲ್ಲಿ ತಲಾ 40 ಮಂದಿ ಪೊಲೀಸರು ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ.

ಮಂಗಳೂರು ಗೋಲಿಬಾರ್: ಕಮಿಷನರ್ ಸೇರಿ 176 ಪೊಲೀಸರಿಗೆ ನೋಟಿಸ್

ಈ ಸಂದರ್ಭ ಸುದ್ದಿಗಾರರಲ್ಲಿ ಮಾತನಾಡಿದ ತನಿಖಾಧಿಕಾರಿ ಜಗದೀಶ್‌, ಮಾ.23ರಂದು ತನಿಖೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯ ಹೇಳಲು ಸಿದ್ಧರಿರುವ ಪೊಲೀಸ್‌ ಇಲಾಖೆಯ 176 ಮಂದಿಯ ವಿಚಾರಣೆ ನಡೆಸಿ ನಿಗದಿತ ದಿನದೊಳಗೆ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು. ಕಾರಣಾಂತರದಿಂದ ಆ ದಿನದೊಳಗೆ ವರದಿ ಸಲ್ಲಿಸಲಾಗದಿದ್ದರೆ ಅವಧಿ ವಿಸ್ತರಿಸಲು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದರು.

ಕಳೆದ ವರ್ಷ ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯ ವೇಳೆ ನಗರದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಉಂಟಾಗಿತ್ತು. ಈ ವೇಳೆ ಸಂಭವಿಸಿದ ಹಿಂಸಾಚಾರ ಮತ್ತು ಗೋಲಿಬಾರ್‌ಗೆ ಇಬ್ಬರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದರು. ಹಿಂಸಾಚಾರ ಮತ್ತು ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಆರಂಭಿಸಿದ ಮ್ಯಾಜಿಸ್ಟ್ರೀರಿಯಲ್‌ ತನಿಖೆಯಲ್ಲಿ ಡಿ.31ರಂದು ಸ್ಥಳ ಮಹಜರು, ಜ.7, ಫೆ.6, ಫೆ.13ರಂದು ಸಾರ್ವಜನಿಕರ ಲಿಖಿತ ಸಾಕ್ಷಿ ಹೇಳಿಕೆ ಮತ್ತು ವೀಡಿಯೋ ದೃಶ್ಯಾವಳಿ ಸಲ್ಲಿಸಲು ಹಾಗೂ ಫೆ.25ರಂದು ಪೊಲೀಸರಿಗೆ ಖುದ್ದು ಸಾಕ್ಷ್ಯ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಆ ದಿನ ಪೊಲೀಸರು ಗೈರು ಹಾಜರಾಗಿದ್ದರು.

click me!