
ನರಗುಂದ(ಜ.22): ಮಹದಾಯಿ ನೀರು ಪಡೆದುಕೊಳ್ಳಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿರುವ ಕಾನೂನು ಹೋರಾಟ ನಿಧಾನಗತಿಯಲ್ಲಿ ಸಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಪಿಐಎಲ್ ಸಲ್ಲಿಸಿದ್ದು, ಇಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಮತ್ತೊಮ್ಮೆ ರಾಷ್ಟ್ರಪತಿಗಳಿಗೆ ದಯಾಮರಣ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಪತಿಗಳು ಮಹದಾಯಿ ಹೋರಾಟಗಾರರಿಗೆ ದಯಾಮರಣಕ್ಕೆ ಅವಕಾಶ ಕೊಡದೇ ಇದ್ದಲ್ಲಿ ಲೋಕಸಭೆಯ ಎದುರು ನಮ್ಮ ಪ್ರಾಣ ನೀಡಲು ಮಹದಾಯಿ ಹೋರಾಟಗಾರರು ನಿರ್ಧರಿಸಿರುವುದಾಗಿ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೃಷಿ ಪ್ರಧಾನ ದೇಶದಲ್ಲಿ ರೈತರು ಹಗಲು, ರಾತ್ರಿ ಎನ್ನದೆ ದುಡಿದು ಬೆಳೆದ ಬೆಳೆಗೆ ರಾಜಕಾರಣಿಗಳ ಕುತಂತ್ರದಿಂದ ಇಂದು ಯೋಗ್ಯ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದ ಸೊಬರದಮಠ ಶ್ರೀ, ಕೇಂದ್ರ ಸರ್ಕಾರ ರೈತರು ಬೆಳೆದ ಹೆಸರಿಗೆ 6975, ಹತ್ತಿ 5450, ಉದ್ದು 5600, ಗೋವಿನ ಜೋಳ 1700, ಗೋಧಿ . 1840, ಕಡಲೆ 4620ರ ಬೆಂಬಲ ಬೆಲೆಯಲ್ಲಿ ಖರೀದಿಸಲು ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಸಹ 3 ಸಾವಿರ ಪ್ರೋತ್ಸಾಹಧನ ನೀಡಿ ರೈತರ ಬೆಳೆಗಳನ್ನು ಖರೀದಿ ಮಾಡಬೇಕೆಂದು ಮನವಿ ನೀಡಿದರೂ ಕೂಡ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಈ ಬೆಂಬಲ ಬೆಲೆಯಲ್ಲಿ ರೈತರ ಬೆಳೆಗಳನ್ನು ಖರೀದಿಸಿದರೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ ಎಂದು ರಾಜ್ಯ ಸರ್ಕಾರ ಖರೀದಿಗೆ ಹಿಂದೇಟು ಹಾಕುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ, ಹತ್ತಿ, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ ಮಾಡದೇ ಇರುವ ಹಿನ್ನಲೆಯಲ್ಲಿ ಜ. 27 ರಂದು ಗದಗ ಮತ್ತು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಈ ಭಾಗದ ರೈತರು ಸರ್ಕಾರದ ವಿರುದ್ಧ ಅಹೋರಾತ್ರಿ ಹೋರಾಟ ಹಮ್ಮಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎ.ಪಿ. ಪಾಟೀಲ, ಎಸ್.ಬಿ. ಜೋಗಣ್ಣವರ, ರಮೇಶ ನಾಯ್ಕರ, ಆನಂದ ತೊಂಡಿಹಾಳ, ವಿಜಯ ಕೊತಿನ, ಮಲ್ಲಪ್ಪ ಗೋನಾಳ, ಹನಮಂತ ಸರನಾಯ್ಕರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ನಾಗರತ್ನ ಸವಳಬಾವಿ, ಹೇಮಕ್ಕ ಗಾಳಿ, ಶಾಂತವ್ವ ಭೂಸರಡ್ಡಿ ಸೇರಿದಂತೆ ಹಲವರಿದ್ದರು.