'ಮಹದಾಯಿ ಕಾಮಗಾರಿ ಆರಂಭಿಸದಿದ್ದರೆ ಬೆಂಗಳೂರು ಚಲೋ'

By Kannadaprabha NewsFirst Published Feb 4, 2021, 8:24 AM IST
Highlights

ಸರ್ಕಾರಕ್ಕೆ 1 ತಿಂಗಳು ಗಡವು ನೀಡಿದ ಮಹದಾಯಿ ಹೋರಾಟಗಾರರು| ನ್ಯಾಯಾಧೀಕರಣ ನೀಡಿರುವ 13.5 ಟಿಎಂಸಿ ನೀರು ಬಳಸಲು ಡ್ಯಾಂ ಕಟ್ಟುವ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಮೀನಮೇಷ| ಸರ್ಕಾರ ಮಹದಾಯಿ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಬೇಸರ ಮೂಡಿಸಿದೆ: ವೀರೇಶ ಸೊಬರದಮಠ| 

ಹುಬ್ಬಳ್ಳಿ(ಫೆ.04): ತಿಂಗಳ ಅಂತ್ಯದೊಳಗೆ ಮಹದಾಯಿ ನೀರಿನ ಬಳಕೆ ಸಂಬಂಧ ಕಾಮಗಾರಿ ಆರಂಭಕ್ಕೆ ಚಾಲನೆ ನೀಡದಿದ್ದರೆ ಬೆಂಗಳೂರು ಚಲೋ ಹೋರಾಟ ನಡೆಸುವುದಾಗಿ ‘ಕರ್ನಾಟಕ ರೈತಸೇನಾ ಸಂಘ’ದ ಅಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಧೀಕರಣ ನೀಡಿರುವ 13.5 ಟಿಎಂಸಿ ನೀರು ಬಳಸಲು ಡ್ಯಾಂ ಕಟ್ಟುವ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಕಾಮಗಾರಿಗಾಗಿ ಹಿಂದೆಯೇ 500 ಕೋಟಿ ರು. ಮೀಸಲು ಇಡಲಾಗಿದೆ. ಮಳೆಗಾಲ, ಕೊರೋನಾ ವೇಳೆಯಲ್ಲಿ ಕಾಮಗಾರಿ ನಡೆಸಲು ಸಾಧ್ಯವಿಲ್ಲವೆಂದು ನಾವೂ ಸುಮ್ಮನಿದ್ದೆವು. ಆದರೆ, ಇನ್ನೂ ಕೂಡ ಸರ್ಕಾರ ಮಹದಾಯಿ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಬೇಸರ ಮೂಡಿಸಿದೆ.

ಹೀಗಾಗಿ ತಿಂಗಳ ಗಡುವು ನೀಡುತ್ತೇವೆ. ಸರ್ಕಾರ ಕಾಮಗಾರಿಯ ಟೆಂಡರ್‌ ಕರೆಯುವುದು ಸೇರಿ ಇತರೆ ಪ್ರಕ್ರಿಯೆ ನಡೆಸಲು ಮುಂದಾಗಬೇಕು. ಇಲ್ಲವೆ ಮಹದಾಯಿ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆ 11 ತಾಲೂಕುಗಳ ರೈತರ, ಕನ್ನಡಪರ ಸಂಘಟನೆಗಳ ಸಭೆ ನಡೆಸುತ್ತೇವೆ. ನಂತರ ‘ಬೆಂಗಳೂರು ಚಲೋ’ ಹೋರಾಟ ನಡೆಸಲಾಗುವುದು ಎಂದರು. ಯಾವುದೇ ಕಾರಣಕ್ಕಾಗಿ ಈ ಬಾರಿ ಹುಸಿ ಭರವಸೆ ಒಪ್ಪಿ ವಾಪಸ್‌ ಬರುವುದಿಲ್ಲ. ಸಂಘಟನೆ ಒಡೆಯುವ ಪ್ರಯತ್ನಕ್ಕೆ ಮಣಿಯಲ್ಲ ಎಂದರು.

ಕರ್ನಾಟಕ ಜತೆ ಮಹದಾಯಿ ಮಾತುಕತೆ ಇಲ್ಲ: ಗೋವಾ!

ನಂಜುಂಡಪ್ಪ ವರದಿ ಪ್ರಕಾರ ಬೆಂಗಳೂರಿನಲ್ಲಿ ಇರುವ ಪ್ರಮುಖ 9 ಇಲಾಖೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ತರಬೇಕು. 2018ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 9 ಇಲಾಖೆಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ತರುವ ಆದೇಶ ಮಾಡಿದ್ದಾರೆ. ಆದರೆ ಉಕ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇದಿನ್ನೂ ಕಾರ್ಯಗತವಾಗಿಲ್ಲ.

ಇನ್ನು, ಕರ್ನಾಟಕದ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಹೇಳಿಕೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸರ್ವಪಕ್ಷಗಳ ಸಭೆ ಕರೆದು ಗಡಿ ಸಂಬಂಧ ಸೂಕ್ತ ವರದಿ ಸಿದ್ಧಪಡಿಸಬೇಕು. ಮುಖಂಡರ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ದು ವರದಿ ಸಲ್ಲಿಸಿ ಮತ್ತೆ ಮತ್ತೆ ಮಹಾರಾಷ್ಟ್ರ ಗಡಿ ಸಂಬಂಧ ಹೇಳಿಕೆ ನೀಡುವುದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರಕ್ಕೆ ತಡೆ ಹಾಕಬೇಕು. ಬೆಂಗಳೂರು ಚಲೋ ಹೋರಾಟದಲ್ಲಿ ಇವುಗಳ ಕುರಿತಂತೆಯೂ ಹೋರಾಟ ಮಾಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಗುರು ರಾಯನಗೌಡ್ರ, ಮಲ್ಲಿಕಾರ್ಜುನ ಅಲೇಕಾರ, ಸಿದ್ದಲಿಂಗೇಶ ಪಾಟೀಲ್‌, ಮಹೇಶ ನಾವಳ್ಳಿ ಸೇರಿ ಇತರರಿದ್ದರು.
 

click me!