ಸುಖಾಸುಮ್ಮನೆ ಕೆಎಲ್‌ಇ ಮೆಡಿಕಲ್ ಕಾಲೇಜಿಗೆ ವಿರೋಧ ಏಕೆ?| ಮೂರುಸಾವಿರ ಮಠದ ಪೀಠದ ಆಸೆಗಾಗಿ ದಿಂಗಾಲೇಶ್ವರ ಶ್ರೀ ಇಲ್ಲಸಲ್ಲದ ಆರೋಪ ಮಾಡುತ್ತ ಸಮಾಜದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ| ಸಮಾಜಕ್ಕೆ ಈ ಸ್ವಾಮೀಜಿ ಏನು ಕೊಡುಗೆ ಕೊಟ್ಟಿದ್ದಾರೆ?| ಶ್ರೀಗಳ ಸ್ವಾರ್ಥಕ್ಕೆ ಸಮಾಜದ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಪ್ರೊ. ವಿ.ಸಿ. ಸವಡಿ|
ಧಾರವಾಡ(ಫೆ.14): ಕೆಎಲ್‌ಇ ಸಂಸ್ಥೆಯಿಂದ ಹುಬ್ಬಳ್ಳಿಯಲ್ಲಿ ನಿರ್ಮಿಸಲ್ಪಡುವ ಮೆಡಿಕಲ್ ಕಾಲೇಜು-ಆಸ್ಪತ್ರೆಗೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧಿಸುವುದು ಖಂಡನೀಯ. ಮೂರು ಸಾವಿರ ಮಠಕ್ಕೂ ಹಾಗೂ ದಿಂಗಾಲೇಶ್ವರ ಸ್ವಾಮಿಗಳಿಗೂ ಸಂಬಂಧವೇ ಇಲ್ಲ ಎಂದು ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪ್ರೊ. ವಿ.ಸಿ. ಸವಡಿ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠದ ಪೀಠದ ಆಸೆಗಾಗಿ ದಿಂಗಾಲೇಶ್ವರ ಶ್ರೀ ಇಲ್ಲಸಲ್ಲದ ಆರೋಪ ಮಾಡುತ್ತ ಸಮಾಜದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸಮಾಜಕ್ಕೆ ಈ ಸ್ವಾಮೀಜಿ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಅವರ ಸ್ವಾರ್ಥಕ್ಕೆ ಸಮಾಜದ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಮಠದ ಆಸ್ತಿ ಮರಳಿಸದಿದ್ದರೆ ಕಾವಿ ಬಟ್ಟೆ ತೊರೆಯುವೆ: ದಿಂಗಾಲೇಶ್ವರ ಶ್ರೀ
ಇಂಥವರಿಂದ ಸಮಾಜದ ಅಭಿವೃದ್ಧಿ ಅಸಾಧ್ಯ. ಅವರೇ ಕಾಲೇಜು-ಆಸ್ಪತ್ರೆ ನಿರ್ಮಿಸುವುದಾದರೆ, ಇಷ್ಟುವರ್ಷ ಸುಮ್ಮನೆ ಕುಳಿತಿರುವುದೇಕೆ ಎಂದು ಪ್ರಶ್ನಿಸಿದ ಅವರು, ಮುಜಗಂ ಶ್ರೀಗಳು ಸ್ವಇಚ್ಛೆಯಿಂದ ಭೂಮಿದಾನ ಮಾಡಿದ ಕಾರಣಕ್ಕೆ ಕೆಎಲ್‌ಇ ಮೆಡಿಕಲ್ ಕಾಲೇಜು-ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ. ಕೆಎಲ್‌ಇ ಉತ್ತರ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿ, ಬಡ, ರೈತರ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದೆ. ಗದಗಿನ ತೋಂಟದಾರ್ಯ ಮಠ, ಸೇರಿ ನಾಡಿನ ವಿವಿಧ ಮಠಗಳು ಕೆಎಲ್‌ಇ ಸಂಸ್ಥೆಗೆ ಜಮೀನು ದಾನ ಮಾಡಿವೆ. ಸಂಸ್ಥೆಯ ಶೈಕ್ಷಣಿಕ ಕಾರ್ಯ ಅನನ್ಯ ಎಂದರು.
ಸಂಸ್ಥೆಯ ಮಹಾನ್ ಕಾರ್ಯಕ್ಕೆ ಕೈಜೋಡಿಸುವ ಬದಲಿಗೆ ಇಲ್ಲಸಲ್ಲದ ಆಪಾದನೆಗಳ ಮೂಲಕ ಜನರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಮೂಲಕ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಇದು ಸರಿಯಲ್ಲ. ದಿಂಗಾಲೇಶ್ವರ ಶ್ರೀಗಳ ಈ ದುರುದ್ದೇಶಕ್ಕೆ ಅಖಿಲ ಭಾರತ ವೀರಶೈವ-ಮಹಾಸಭಾದ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರು ಬೆಂಬಲಕ್ಕೆ ನಿಂತಿರುವುದು ಬೇಸರದ ಸಂಗತಿ. ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮರೆತು, ಸ್ವಾಮಿಗಳಿಗೆ ಲಿಂಗಾಯತ ಭವನದಲ್ಲಿ ಸಭೆ-ಸಮಾರಂಭ ಮಾಡಲು ಅನುವು ಮಾಡಿಕೊಟ್ಟು ಸ್ವಾಮಿಗಳ ಬೆಂಬಲಕ್ಕೆ ನಿಂತಿರುವುದಕ್ಕೆ ಸವಡಿ ಅವರು ಕಳವಳ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ನಾಗರಿಕ ಈಶ್ವರ ಬಲ್ಲೂರು ಇದ್ದರು.