ಪ್ರಾಥಮಿಕ ಹಂತದಿಂದ ಡಿಗ್ರಿಯವರೆಗೂ ಆನ್‌ಲೈನ್ ತರಗತಿ ನಡೆಸುವುದು ಬೇಡ| ಜಾಗಟೆ ಬಾರಿಸಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ| ಕೊರೋನಾ ಪ್ರಕರಣಗಳು ಕಡಿಮೆ ಇದ್ದ ವೇಳೆ ಲಾಕ್‌ಡೌನ್ ಮಾಡಿದ್ದರು. ಆದರೆ, ಈಗ ಕೊರೋನಾ ಅಟ್ಟಹಾಸ ಮೆರೆಯುವ ವೇಳೆ ಎಲ್ಲದಕ್ಕೂ ಮುಕ್ತ ಅವಕಾಶ ನೀಡಲಾಗಿದೆ|
ಹುಬ್ಬಳ್ಳಿ(ಜೂ.14): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪದವಿ ವರೆಗೆ ಆನ್‌ಲೈನ್ ಬೋಧನೆ ಖಂಡಿಸಿ ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಏಕಾಂಗಿಯಾಗಿ ಜಾಗಟೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಚೆನ್ನಮ್ಮ ವೃತ್ತದಲ್ಲಿ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಜಾಗಟೆ ಬಾರಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಹೇಳಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಸರ್ಕಾರ ಕೊರೋನಾ ಸ್ಥಿತಿಯನ್ನು ಅವೈಜ್ಞಾನಿಕವಾಗಿ ನಿಭಾಯಿಸಿದೆ. ಕೊರೋನಾ ಪ್ರಕರಣಗಳು ಕಡಿಮೆ ಇದ್ದ ವೇಳೆ ಲಾಕ್‌ಡೌನ್ ಮಾಡಿದ್ದರು. ಆದರೆ, ಈಗ ಕೊರೋನಾ ಅಟ್ಟಹಾಸ ಮೆರೆಯುವ ವೇಳೆ ಎಲ್ಲದಕ್ಕೂ ಮುಕ್ತ ಅವಕಾಶ ನೀಡಲಾಗಿದೆ ಎಂದರು. ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಆತಂಕದಿಂದಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಇಂಥ ಸಂದರ್ಭದಲ್ಲಿ ಪರೀಕ್ಷೆಯನ್ನು ನಡೆಸುವುದು ಸರಿಯಲ್ಲ ಎಂದರು.
ಪಾಕ್ ಪರ ಘೋಷಣೆ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಕೆ ವಿಳಂಬಕ್ಕೆ ಇನ್ಸ್‌ಪೆಕ್ಟರ್ ಸಸ್ಪೆಂಡ್
ಸಚಿವ ಸುರೇಶಕುಮಾರ ಹಠಕ್ಕೆ ಬಿದ್ದು ಪರೀಕ್ಷೆ ಮಾಡಲು ಹೊರಟಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಡೋಲಾಯಮಾನವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಿಗೆ ಕೊರೋನಾ ಹರಡುವ ಸಾಧ್ಯತೆ ಇದೆ. ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಂತರ ಮೌಲ್ಯಮಾಪನ ಮಾಡುವ ಶಿಕ್ಷಕರ ಭವಿಷ್ಯದ ಪ್ರಶ್ನೆ ಎದುರಾಗಿದೆ. ಹೀಗಾಗಿ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಪಡಿಸಬೇಕು. ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಒತ್ತಾಯಿಸಿದ ಅವರು, ಒಂದು ವೇಳೆ ಪರೀಕ್ಷೆಗಳನ್ನು ನಡೆಸುವುದಾದರೆ ಪ್ರತಿ ವಿದ್ಯಾರ್ಥಿಗೆ 50 ಲಕ್ಷ ಠೇವಣಿ ಹಾಗೂ ಶಿಕ್ಷಕರಿಗೆ 25 ಲಕ್ಷ ಠೇವಣಿ ಇಟ್ಟು ಪರೀಕ್ಷೆ ನಡೆಸಲಿ ಎಂದರು.
ಇನ್ನು ಸಾಕಷ್ಟು ಪ್ರತಿಭಟನೆ ಬಳಿಕ ಸರ್ಕಾರ ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರವು ಆನ್‌ಲೈನ್ ಬೋಧನೆಯನ್ನು ರದ್ದುಪಡಿಸಿದೆ. ಆದರೆ, 6 ರಿಂದ ಪದವಿ ವರೆಗೆ ಆನ್‌ಲೈನ್ ಶಿಕ್ಷಣ ಮುಂದುವರಿಸಿದೆ. ಆನ್‌ಲೈನ್ ಬೋಧನೆಯಿಂದ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯುತ್ತಿದೆ. ಹೀಗಾಗಿ ಪ್ರಾಥಮಿಕ ಹಂತದಿಂದ ಡಿಗ್ರಿಯವರೆಗೂ ಆನ್‌ಲೈನ್ ತರಗತಿ ನಡೆಸುವುದು ಬೇಡ. ಈ ಕುರಿತಂತೆ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಾವು ಆನ್‌ಲೈನ್ ಶಿಕ್ಷಣದಂತೆ ಕರ್ನಾಟಕವನ್ನು ಅಮೆರಿಕ ಮಾಡಲು ಆಗುವುದಿಲ್ಲ ಎಂದರು.