ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಅಮಾನತು| ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶಿಟ್ ಸಲ್ಲಿಕೆಯಲ್ಲಿ ವಿಳಂಬ| ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅಮಾನತು ಮಾಡಿ ಆದೇಶ ಹೊರಡಿಸಿದ ಐಜಿಪಿ|
ಹುಬ್ಬಳ್ಳಿ(ಜೂ.13): ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಲು ವಿಳಂಬ ಮಾಡಿದ್ದ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅವರನ್ನು ಅಮಾನತು ಮಾಡಲಾಗಿದೆ. ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಓದುತ್ತಿದ್ದ ಕಾಶ್ಮೀರ ಮೂಲದ ತಾಲಿಬ್, ಆರ್ಮಿ, ಬಾಸಿತ್ ಎಂಬ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿ ದ್ದರು. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 90 ದಿನಗಳಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲು ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ವಿಫಲರಾಗಿದ್ದರು. ಆರೋಪಪಟ್ಟಿಸಲ್ಲಿಸಲು ವಿಳಂಬವಾದ ಕಾರಣ ಇಲ್ಲಿನ ಎರಡನೆಯ ಜೆಎಂಎಫ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
undefined
ಪಾಕ್ ಪರ ಘೋಷಣೆ ಕೂಗಿದವರಿಗೆ ಸಿಕ್ತು ಬೇಲ್: ತನಿಖಾಧಿಕಾರಿ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ
ಮೂವರು ಆರೋಪಿಗಳು ಜಾಮೀನು ಪಡೆದು ಹಿಂಡಲಗಾ ಜೈಲಿಂದ ಬಿಡುಗಡೆಯಾಗಿದ್ದಾರೆ. ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದ ಆರೋಪಿಗಳು ಬಿಡುಗಡೆಯಾಗಲು ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರು ಪೊಲೀಸರ ವಿರುದ್ಧ ಟೀಕಿಸಿದ್ದರು. ಅಲ್ಲದೇ, ತಪ್ಪಿತಸ್ಥ ಸಿಪಿಐ ಜಾಕ್ಸನ್ ಡಿಸೋಜಾ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದರು. ತಕ್ಷಣ ಎಚ್ಚೆತ್ತ ಐಜಿಪಿ ರಾಘವೇಂದ್ರ ಸುಹಾಸ್ ಅವರು ಸಿಪಿಐ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಅಲ್ಲದೇ, ಕಾಶ್ಮೀರಿಗಳ ಬೇಲ್ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಗದಗ ಡಿವೈಎಸ್‌ಪಿ ಅವರು ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.