ತಮಿಳು ನಾಮಫಲಕಗಳ ತೆರವಿಗೆ ಆಗ್ರಹ : ಜು.26ರಂದು ಕೆಜಿಎಫ್‌ಗೆ ಮುತ್ತಿಗೆ

By Kannadaprabha NewsFirst Published Jul 16, 2021, 1:46 PM IST
Highlights
  • ಜಿಲ್ಲೆಯ ಕೆಜಿಎಫ್‌ ನಗರದಲ್ಲಿ ತಮಿಳು ನಾಮಫಲಕಗಳನ್ನು ತೆರವುಗೊಳಿಸುವಂತೆ ಆಗ್ರಹ
  • ಜು.26ರಂದು ಕೆಜಿಎಫ್‌ಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿಕೆ

 ಕೋಲಾರ (ಜು.16):  ಜಿಲ್ಲೆಯ ಕೆಜಿಎಫ್‌ ನಗರದಲ್ಲಿ ತಮಿಳು ನಾಮಫಲಕಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕನ್ನಡ, ರೈತಪರ ಸಂಘಟನೆಗಳೊಂದಿಗೆ ಬೆಂಗಳೂರಿನ ಕೆ.ಆರ್‌.ಪುರಂನಿಂದ ರ‍್ಯಾಲಿ  ಮೂಲಕ ತೆರಳಿ ಜು.26ರಂದು ಕೆಜಿಎಫ್‌ಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೆಜಿಎಫ್‌ ಕನ್ನಡಿಗರ ಗಂಡುಮೆಟ್ಟಿದ ನಾಡು. ಕನ್ನಡ ಅಭಿಮಾನಿಗಳ ಅಪೇಕ್ಷೆಯಂತೆ ನಾವು ಕಳೆದ ವಾರ ಕೆಜಿಎಫ್‌ಗೆ ತೆರಳಿ ಪ್ರತಿಭಟನೆ ನಡೆಸಿ, ತಮಿಳು ನಾಮಫಲಕಗಳಿಗೆ ಮಸಿ ಬಳಿದು, ಇನ್ಮುಂದೆ ಕನ್ನಡ ಭಾಷೆಯೇ ಇರಬೇಕೆಂದು ಆಗ್ರಹಿಸಿದ್ದೆವು ಎಂದು ಹೇಳಿದರು.

PUC ಪಾಸ್ ಮಾಡಿ, SSLC ಪಾಸ್ ಮಾಡಿದ್ರೆ ತಪ್ಪೇನು? ಸರ್ಕಾರಕ್ಕೆ ವಾಟಾಳ್ ಪ್ರಶ್ನೆ

ಭಾಷಾ ರಕ್ಷಣಗೆಗಾಗಿ ಫಲಕಕ್ಕೆ ಮಸಿ :  ಆದರೆ, ನಗರಸಭೆಯಲ್ಲಿ ಏಕಾಏಕಿ ತೀರ್ಮಾನ ಕೈಗೊಂಡು ಮತ್ತೆ ತಮಿಳು ಭಾಷೆಗೆ ಅವಕಾಶ ನೀಡಿ ನಮ್ಮ ಮೇಲೆ ಸವಾಲು ಹಾಕಿದ್ದಾರೆ. ಇದು ಸವಾಲಿನ ಪ್ರಶ್ನೆಯಲ್ಲ. ಭಾಷಾ ರಕ್ಷಣೆಯ ಉದ್ದೇಶದಿಂದ ಮಸಿ ಬಳಿದಿದ್ದೆವು. ಅದನ್ನು ಅರಿತು ಗೌರವ ಸಲ್ಲಿಸಬೇಕಿದ್ದ ನಗರಸಭೆಯು ವೀರಾವೇಷದಿಂದ ನಾಮಫಲಕಗಳನ್ನು ತಮಿಳಿನಲ್ಲಿ ಬರೆಯಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ತಮಿಳಿಗರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಮಾತನಾಡಿದ್ದಾರೆ. ಅದಕ್ಕೆಲ್ಲ ತಾವು ಚಿಂತಿಸುವುದಿಲ್ಲ ಎಂದರು.

ಇನ್ನು ಈ ಭಾಗದ ಜನಪ್ರತಿನಿಧಿಗಳೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಚುನಾವಣೆ ಗಿಮಿಕ್‌ಗಾಗಿ ಸುಮ್ಮನಿದ್ದಾರೆ. ಸರ್ಕಾರದ ನೀತಿ ಸ್ಪಷ್ಟವಾಗಿ ಗೊತ್ತಿದ್ದರೆ ತಮಿಳು ನಾಮಫಲಕಗಳನ್ನು ತೆಗೆಯಬೇಕು. ವೋಟಿಗಾಗಿ ಜನಪ್ರತಿನಿಧಿಗಳು ಈ ರೀತಿ ಮೌನಕ್ಕೆ ಶರಣಾಗಿದ್ದು, ಪ್ರಾಮಾಣಿಕವಾಗಿ ತಮಿಳು ನಾಮಫಲಕ ತೆಗೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಾಧಿಕಾರಿ ಸತ್ತುಹೋಗಿದೆ :  ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಸತ್ತು ಹೋಗಿವೆ. ಕನ್ನಡ ಸಾಹಿತ್ಯ ಪರಿಷತ್ತು ವರ್ಷಕ್ಕೆ ಒಮ್ಮೆ ಸಮ್ಮೇಳನ ನಡೆಸಿ ಊಟ ಹಾಕುವುದಕ್ಕೆ ಸೀಮಿತವಾಗಿ ಬಿಟ್ಟಿದೆ. ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿಗಳ ಬಳಿಯೂ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಏನೇ ಆದರೂ ತಮಿಳು ನಾಮಫಲಕ ತೆಗೆಯೋವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕೆಜಿಎಫ್‌ ನಗರಸಭೆಯಲ್ಲಿ ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೂಡಲೇ ಅದನ್ನು ಸೂಪರ್‌ಸೀಡ್‌ ಮಾಡಿ ಕನ್ನಡಿಗರಿಗೆ ಅವಕಾಶ ನೀಡಬೇಕು. ತಮ್ಮ ಬೇಡಿಕೆ, ಹೋರಾಟಗಳ ಕುರಿತಾಗಿ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದೆ. ಅವರು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಚಳುವಳಿ ಪಕ್ಷದ ನಾರಾಯಣಸ್ವಾಮಿ, ರಾಮು, ಪಾರ್ಥಸಾರಥಿ, ಕನ್ನಡಪರ ಸಂಘಟನೆಗಳ ಮುಖಂಡರಾದ ಕನ್ನಡಮಿತ್ರ ವೆಂಕಟಪ್ಪ, ಗಲ್‌ಪೇಟೆ ಸಂತೋಷ್‌, ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಭಾಗವಹಿಸಿದ್ದರು.

click me!