ರೋಣ: ದಲಿತ ಮುಖಂಡನ ಸಾವಿನ ಸುತ್ತ ಅನುಮಾನದ ಹುತ್ತ..!

By Kannadaprabha NewsFirst Published Jul 16, 2021, 1:31 PM IST
Highlights

*ಒಂದೂವರೆ ತಿಂಗಳ ಹಿಂದೆ ಕೊರೋನಾಕ್ಕೆ ತುತ್ತಾಗಿ ಮೃತಪಟ್ಟಿದ್ದ ಮಂಜುನಾಥ
* ಕೋವಿಡ್‌ ನಿಯಮಾವಳಿ ಪ್ರಕಾರ ಅಂತ್ಯ ಸಂಸ್ಕಾರ 
* ಇದು ಸಹಜ ಸಾವಲ್ಲ ಕೊಲೆ ಮಾಡಲಾಗಿದೆ ಎಂಬ ಅನಾಮಧೇಯ ಪತ್ರಗಳು
 

ಪಿ.ಎಸ್‌.ಪಾಟೀಲ್‌

ರೋಣ(ಜು.16): ಕಳೆದ ಒಂದೂವರೆ ತಿಂಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದ ದಲಿತ ಯುವ ಮುಖಂಡನ ಸಾವಿನ ಸುತ್ತ ಈಗ ಅನುಮಾನದ ಹುತ್ತ ಹುಟ್ಟಿಕೊಂಡಿದೆ. ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ, ಪುರಸಭೆ ಮಾಜಿ ಸದಸ್ಯ, ಕಾರ್ಮಿಕ, ಶೋಷಿತರ ಧ್ವನಿಯಾಗಿದ್ದ ಮಂಜುನಾಥ ಹಾಳಕೇರಿ ಸಾವಿನ ಸುತ್ತ ನೂರೆಂಟು ಅನುಮಾನಗಳ ಹುತ್ತ ಹುಟ್ಟಿಕೊಂಡಿವೆ. ಈ ಸಾವು ಸಹಜವಲ್ಲ, ಇದೊಂದು ಕೊಲೆ ಎನ್ನುವ ಅನಾಮಧೇಯ ಪತ್ರ ಎಲ್ಲಡೆ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಕೊರೋನಾಗೆ ತುತ್ತಾಗಿ ಸಾವು:

ಮಂಜುನಾಥ ಹಾಳಕೇರಿ ಆರೋಗ್ಯದಲ್ಲಿ ಏರುಪೇರಾಗಿ ಮೇ 10 ರಂದು ರೋಣ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ವೇಳೆ ಕೊರೋನಾ ಟೆಸ್ವ್‌ ಮಾಡಲಾಗಿದ್ದು, ವರದಿ ಪಾಸಿಟಿವ್‌ ಬಂದಿತ್ತು. 3 ದಿನ ಇಲ್ಲಿದ್ದು, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಸಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದಾಗಿ ಮೇ 26 ರಂದು ಬೆಳಗ್ಗೆ ಮಂಜುನಾಥ ಸಾವನ್ನಪ್ಪಿದರು. ಕೋವಿಡ್‌ ನಿಯಮಾವಳಿ ಪ್ರಕಾರ ರೋಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಅನಾಮಧೇಯ ಪತ್ರ:

4 ದಿನಗಳ ಹಿಂದೆ ಮಂಜುನಾಥ ಮನೆ ಮತ್ತು ಪಟ್ಟಣದ 4 ವ್ಯಕ್ತಿಗಳ ಮನೆಗೆ ಅನಾಮಧೇಯ ಪತ್ರಗಳು ಬಂದಿದ್ದು, ಇದೊಂದು ವ್ಯವಸ್ಥಿತ ಕೊಲೆ. ಕೊಲೆಗೆ ಇಂತವರೇ ಸಂಚು ನಡೆಸಿದ್ದು ಎಂಬುದಾಗಿ ಕೆಲವರ ಹೆಸರು ಬರೆಯಲಾಗಿದೆ.
ಸಾವಿನ ಬಗ್ಗೆ ಮೊದಲೇ ಸಂಶಯದಲ್ಲಿದ್ದ ಅವರ ಹಿತ ಚಿಂತಕರು ಮತ್ತು ಮನೆಯವರಿಗೆ ಈ ಅನಾಮಧೇಯ ಪತ್ರ ಮತ್ತಷ್ಟು ಗೊಂದಲ, ಗುಮಾನಿ ಮೂಡಿಸಿದೆ. ಎಲ್ಲೆಡೆ ಅನಾಮಧೇಯ ಪತ್ರದ ಕುರಿತೇ ಚರ್ಚೆ ಜೋರಾಗಿದೆ.

ಗದಗ: ರಸ್ತೆಯ ಮೇಲೆಯೇ ಶವ ಸಂಸ್ಕಾರ..!

ಈ ಪತ್ರದ ಹಿನ್ನೆಲೆಯಲ್ಲಿ ಮಂಜುನಾಥ ಹಾಳಕೇರಿ ಪತ್ನಿ, ತಾಯಿ, ಮಕ್ಕಳು, ಸಹೋದರರು ಆತಂಕಗೊಂಡಿದ್ದು, ಇದು ಕೊಲೆಯೋ, ಸಹಜ ಸಾವೊ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಕೆಲ ಸಂಘಟನೆಗಳು ಈ ಕುರಿತು ಕೂಲಂಕಷ ತನಿಖೆಗೆ ಪೊಲೀಸ್‌ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.

ನಮ್ಮ ಅಣ್ಣ ಕೊರೋನಾದಿಂದ ಸತ್ತಿದ್ದಾನೆಂದು ನಾವು ಭಾವಿಸಿದ್ದೆವು. ಆದರೆ, ನಮ್ಮ ಮನೆಗೆ ಬಂದಿರುವ ಪತ್ರದಲ್ಲಿ ಕೊಲೆ ನಡೆದ ಕುರಿತು ತಿಳಿಸಲಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲಾಗುವುದು. ನಮ್ಮ ಅಣ್ಣನ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು ಎಂದು ಮೃತ ಮಂಜುನಾಥನ ಸಹೋದರ ಮರಿಯಪ್ಪ ಹಾಳಕೇರಿ ತಿಳಿಸಿದ್ದಾರೆ. 

ಈ ಕುರಿತು ಲಿಖಿತ ದೂರು ನೀಡಿದಲ್ಲಿ ತನಿಖೆ ಕೈಗೊಳ್ಳಲಾಗುವುದು. ಪತ್ರ ಬರೆದವರು ಯಾರು? ಇದರ ಹಿಂದೆ ಏನಿದೆ ಎಂಬುದನ್ನು ಶೀಘ್ರದಲ್ಲಿ ಪತ್ತೆ ಮಾಡಲಾಗುವುದು ಎಂದು ರೋಣ ಸಿಪಿಐ ಸುಧೀರ ಬೆಂಕಿ ಹೇಳಿದ್ದಾರೆ. 

click me!