
ಉಡುಪಿ (ಮೇ.31): ಸ್ಯಾಂಡಲ್‌ವುಡ್‌ನ ಪ್ರಸಿದ್ಧ ತಾರಾ ದಂಪತಿಗಳಾದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಉಡುಪಿಯ ಐತಿಹಾಸಿಕ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ತಮ್ಮ ವಿಶೇಷ ಹರಕೆಯನ್ನು ಭಕ್ತಿಯಿಂದ ತೀರಿಸಿದ್ದಾರೆ. ಸುಮಾರು ಒಂದೂವರೆ ವರ್ಷದ ಹಿಂದೆ ತಾವು ಹೊತ್ತುಕೊಂಡಿದ್ದ ಹರಕೆಯ ಪ್ರಕಾರ, ಈ ಸ್ಟಾರ್ ದಂಪತಿಗಳು ತಮ್ಮ ಪುಟ್ಟ ಮಗನೊಂದಿಗೆ ಮಠದಲ್ಲಿ ಜನಸಾಮಾನ್ಯರಂತೆ ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ಸರಳತೆ ಮೆರೆದಿದ್ದಾರೆ.
ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿಗಳಿಗೆ ಒಂದೂವರೆ ವರ್ಷದ ಹಿಂದೆ ಮಗು ಜನಿಸಿತ್ತು. ತಮಗೆ ಮಗು ಹುಟ್ಟಿದರೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ‘ನೆಲಭೋಜನ’ (ನೆಲದ ಮೇಲೆ ಕುಳಿತು ಅನ್ನಪ್ರಸಾದ ಸ್ವೀಕರಿಸುವುದು) ಮಾಡುವುದಾಗಿ ದಂಪತಿಗಳು ವಿಶೇಷ ಹರಕೆ ಕಟ್ಟಿಕೊಂಡಿದ್ದರು. ಅದರಂತೆಯೇ, ಈಗ ತಮ್ಮ ಮುದ್ದಾದ ಮಗನಿಗೆ ಮೊದಲ ಬಾರಿಗೆ ಉಡುಪಿ ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ (ಆಂಜನೇಯ) ಭವ್ಯ ದರ್ಶನ ಮಾಡಿಸಿ, ಹರಕೆ ತೀರಿಸಿ ದಂಪತಿಗಳು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.
ಮಗನೊಂದಿಗೆ ದೇವರ ದರ್ಶನ ಪಡೆದ ಬಳಿಕ ವಸಿಷ್ಠ ಸಿಂಹ ದಂಪತಿಗಳು ಪ್ರಸ್ತುತ ಉಡುಪಿ ಕೃಷ್ಣ ಮಠದ ಪರ್ಯಾಯ ಪೀಠ ಅಲಂಕರಿಸಿರುವ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಶ್ರೀಗಳ ಭೇಟಿಯ ನಂತರ ಮುಖ್ಯಪ್ರಾಣನ ಸನ್ನಿಧಿಯ ಭೋಜನ ಶಾಲೆಯಲ್ಲಿ ಹರಕೆಯಂತೆ ಜನಸಾಮಾನ್ಯ ಭಕ್ತಾದಿಗಳ ಜೊತೆಯಲ್ಲೇ ಸಾಲಿನಲ್ಲಿ ಕುಳಿತು ನೆಲಭೋಜನದ ಅನ್ನಪ್ರಸಾದವನ್ನು ಅತ್ಯಂತ ಶ್ರದ್ಧೆಯಿಂದ ಸ್ವೀಕರಿಸಿದರು.
ಯಾವುದೇ ಸ್ಟಾರ್ ಗಿಮಿಕ್ ಅಥವಾ ಹಮ್ಮು-ಬಿಮ್ಮು ಇಲ್ಲದೆ, ಮಠದ ನಿಯಮದಂತೆ ಸಾಧಾರಣ ಭಕ್ತರಂತೆ ನೆಲದ ಮೇಲೆ ಕುಳಿತು ಊಟ ಮಾಡಿದ ತಾರಾ ದಂಪತಿಗಳ ಸರಳತೆಗೆ ಮಠಕ್ಕೆ ಬಂದಿದ್ದ ಇತರೆ ಭಕ್ತರು ಹಾಗೂ ಅಭಿಮಾನಿಗಳು ಮನಸೋತಿದ್ದಾರೆ. ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.