* ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆ ಮೀರಿದ ಬೀದಿ ನಾಯಿಗಳ ಹಾವಳಿ
* ಶಸ್ತ್ರ ಚಿಕಿತ್ಸೆ ಪ್ರಮಾಣ ಹೆಚ್ಚಳ: ಚೌಹಾಣ್
* ಇಲಾಖೆಯಿಂದಲೇ ಸಂತಾನಹರಣ ಚಿಕಿತ್ಸೆಗೆ ಪ್ರಸ್ತಾವನೆ ಸಲ್ಲಿಸಿ
ಬೆಂಗಳೂರು(ಜು.12): ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಪ್ರತಿ ನಿತ್ಯ 240 ನಾಯಿಗಳ ಬದಲಿಗೆ 400 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಶುa ಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬೀದಿನಾಯಿಗಳ ರಕ್ಷಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ಪ್ರತಿನಿತ್ಯ 240 ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು 400ಕ್ಕೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಬಿಬಿಎಂಪಿಯೊಂದಿಗೆ ನಮ್ಮ ಪಶು ಸಂಗೋಪನೆ ಇಲಾಖೆ ಕೈಜೋಡಿಸಿ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ ಎಂದರು.
ಮುಂಡಗೋಡ: ನರಭಕ್ಷಕ ನಾಯಿಗಳ ಕಾಟಕ್ಕೆ ಬೆಚ್ಚಿಬಿದ್ದ ಜನತೆ..!
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಪ್ರಾಣಿ ಸಹಾಯವಾಣಿ ಕೇಂದ್ರಕ್ಕೆ ಪ್ರತಿನಿತ್ಯ ಕರೆಗಳು ಬರುತ್ತಿವೆ. ವೈಯಕ್ತಿಕವಾಗಿ ಶಾಸಕರು ನನಗೆ ಕರೆ ಮಾಡಿ ಇಲಾಖೆ ವತಿಯಿಂದ ಬೀದಿನಾಯಿಗಳ ಹಾವಳಿ ತಡೆಗಟ್ಟುವ ಕೆಲಸಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಆದ್ದರಿಂದ ಬಿಬಿಎಂಪಿ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಪಶುಸಂಗೋಪನೆ ಕಾಲೇಜು ಪ್ರಾಧ್ಯಾಪಕರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಕುರಿತು ಸಭೆ ನಡೆಸಿರುವುದಾಗಿ ತಿಳಿಸಿದರು.
ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹೀಮ್, ಆಯುಕ್ತ ಡಾ. ಬಸವ ರಾಜೇಂದ್ರ, ನಿರ್ದೇಶಕ ಡಾ. ಮಂಜುನಾಥ್ ಪಾಳೇಗಾರ್, ಬಿಬಿಎಂಪಿ ಪಶುಸಂಗೋಪನೆ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಶಿಂಧೆ, ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಎಸ್.ನಾಗರಾಜ್ ಹಾಜರಿದ್ದರು.
ಬೀದಿನಾಯಿಗಳ ದಾಳಿಗೆ ಪೌರ ಸಂಸ್ಥೆಗಳೇ ಹೊಣೆ: ಹೈಕೋರ್ಟ್
ಇಲಾಖೆಯಿಂದಲೇ ಸಂತಾನಹರಣ ಚಿಕಿತ್ಸೆಗೆ ಪ್ರಸ್ತಾವನೆ ಸಲ್ಲಿಸಿ: ಸೂಚನೆ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 8 ವಲಯಗಳಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸುವ ಕಾರ್ಯವನ್ನು ಖಾಸಗಿ ಎನ್.ಜಿ.ಒ ಸಂಸ್ಥೆಗಳಿಗೆ ನೀಡಲಾಗಿದೆ. ಇದರ ಹೊರತಾಗಿಯೂ ಪಶು ಸಂಗೋಪನೆ ಇಲಾಖೆಯ ಆಸ್ಪತ್ರೆಗಳಲ್ಲಿಯೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಖಾಸಗಿ ಎನ್‌ಜಿಒ ಸಂಸ್ಥೆಗಳ ಬದಲಾಗಿ ಇಲಾಖೆಯಿಂದಲೇ ಸಂತಾನೋತ್ಪತ್ತಿ ತಡೆಗಟ್ಟಲು ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಚುಚ್ಚುಮದ್ದು ನೀಡುವ ಸಂಬಂಧ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಬಿಬಿಎಂಪಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪ್ರಭು ಚೌಹಾಣ್ ಹೇಳಿದರು.
ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಪರಿಹಾರ ಹುಡುಕಿ, ಬೀದಿ ನಾಯಿಗಳ ನಿಯಂತ್ರಿಸಿ ಸಾರ್ವಜನಿಕರು ನೆಮ್ಮದಿಯಿಂದ ಜೀವನ ಸಾಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಹುಚ್ಚು ನಾಯಿ ರೋಗ ನಿಯಂತ್ರಣಕ್ಕಾಗಿ ಲಸಿಕೆ ಹಾಕುವ ಕಾರ್ಯವನ್ನು ತೀವ್ರಗೊಳಿಸುವುದು ಹಾಗೂ ಲಸಿಕೆ ಸಂಖ್ಯೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.