ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಜನಜೀವನವೇ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಅನಶಿ ಘಾಟ್, ಹೊನ್ನಾವರ, ಕಾರವಾರ, ಗೋಕರ್ಣ ಭಾಗಗಳಲ್ಲಿ ಅಲ್ಲಲ್ಲಿ ಭೂಕುಸಿತವಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಜು.12): ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಜನಜೀವನವೇ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಅನಶಿ ಘಾಟ್, ಹೊನ್ನಾವರ, ಕಾರವಾರ, ಗೋಕರ್ಣ ಭಾಗಗಳಲ್ಲಿ ಅಲ್ಲಲ್ಲಿ ಭೂಕುಸಿತವಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಈ ಕಾರಣದಿಂದ ಸದ್ಯ ಅನಶಿ ಘಾಟ್‌ನಲ್ಲಂತೂ ರಾತ್ರಿ ಸಂಚಾರವನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಾಗಿರುವ ನೆರೆ ಕಾಟ, ಆಸ್ತಿಪಾಸ್ತಿಗಳ ಹಾನಿ, ಜನರ ಸಂಕಷ್ಟಕ್ಕೆ ಸ್ಪಂದಿಸಲು ಇದೀಗ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಭೇಟಿ ನೀಡುತ್ತಿದ್ದು, ಜನರ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ದೊರಕುವ ಭರವಸೆ ದೊರಕಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.
undefined
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ಜನರಂತೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿರಂತರ ಮಳೆಗೆ ಕಾರವಾರ, ಹೊನ್ನಾವರ, ಭಟ್ಕಳ, ಶಿರಸಿ, ಜೊಯಿಡಾ, ಗೋಕರ್ಣ ಮುಂತಾದೆಡೆ ಸಾಕಷ್ಟು ಹಾನಿಗಳಾಗಿದ್ದು, ಜನರಂತೂ ಹೈರಾಣಾಗಿದ್ದಾರೆ. ಮಳೆಯೊಂದಿಗೆ ಜಿಲ್ಲೆಯ ಅನಶಿ ಘಾಟ್ ಸೇರಿದಂತೆ ರಾಜ್ಯ ಹೆದ್ದಾರಿಗಳಲ್ಲೂ ಹಲವೆಡೆ ಭೂ ಕುಸಿತಗಳೂ ನಡೆದಿದ್ದು, ಜನರು ಓಡಾಡಲೂ ಭೀತಿ ಎದುರಿಸುತ್ತಿದ್ದಾರೆ. ಅನಶಿಯಲ್ಲಂತೂ ಈಗಾಗಲೇ ಮೂರು ಭಾರಿ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಬಿದ್ದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಕೆಲವು ವಾಹನ ಸವಾರರು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ.
ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ: ಹೆದ್ದಾರಿಗಳ ಬಳಿಯೇ ಗುಡ್ಡ ಕುಸಿತ, ಹೆಚ್ಚಿದ ಆತಂಕ
ಈ ಗುಡ್ಡ ಕುಸಿತದಿಂದ ಕಾರವಾರ, ಜೋಯಿಡಾ ಮಾತ್ರವಲ್ಲದೇ ಬೆಳಗಾವಿ, ಹಳಿಯಾಳ, ದಾಂಡೇಲಿ ಭಾಗದ ನಾಗರಿಕರು ತೊಂದರೆ ಅನುಭವಿಸಿದ್ದು, ಈ ಭಾಗದಲ್ಲಂತೂ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅಂದಹಾಗೆ, ಜೊಯಿಡಾ, ದಾಂಡೇಲಿ, ಹಳಿಯಾಳದಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಈ ಮಾರ್ಗ ಸಮೀಪವಾಗಿತ್ತು. ಆದ್ರೆ, ಸದ್ಯ ಗುಡ್ಡ ಕುಸಿತದಿಂದ ರಸ್ತೆ ಬಂದ್ ಆದ ಕಾರಣ ಯಲ್ಲಾಪುರ ಮೂಲಕ ಸುತ್ತವರಿದು ಕಾರವಾರಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆ ಕಾಟ, ಗುಡ್ಡ ಕುಸಿತದೊಂದಿಗೆ ಜಿಲ್ಲೆಯಲ್ಲಿ ಕಡಲ ಕೊರೆತದ ಆತಂಕ ಕೂಡಾ ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯ ಭಟ್ಕಳ-ಹೊನ್ನಾವರ ಭಾಗಕ್ಕೆ ಭೇಟಿ ನೀಡಲಿದ್ದು, ಜನರಿಗೆ ಶೀಘ್ರದಲ್ಲಿ ಪರಿಹಾರ ಕೂಡಾ ಒದಗಲಿದೆ ಎಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ.
ಇನ್ನು ಜಿಲ್ಲೆಯ ಅಣಶಿ ಘಾಟ್‌ನಲ್ಲಿ ಕಳೆದ ವರ್ಷ ಕೂಡಾ ಇದೇ ಪರಿಸ್ಥಿತಿ ಉಂಟಾಗಿ ಎರಡು ತಿಂಗಳ ಕಾಲ ಸಂಚಾರ ಬಂದ್ ಮಾಡಲಾಗಿತ್ತು. ಇಲ್ಲಿನ ಪರಿಸ್ಥಿತಿಯನ್ನು ಅರಿತ ಜಿಲ್ಲಾಡಳಿತ ಜಿಯೋಲಾಜಿಕಲ್ ಸರ್ವೆ ಆಪ್ ಇಂಡಿಯಾ ವಿಜ್ಞಾನಿಗಳ ಮೂಲಕ ಸರ್ವೆ ಮಾಡಿಸಿದ್ದ ಪರಿಣಾಮ ಅಣಶಿ ಪ್ರದೇಶ ಅಪಾಯಕಾರಿ ವಲಯ ಎಂದು ವರದಿ ನೀಡಿತ್ತು. ಆದರೆ, ಈ ಬಾರಿ ಮಳೆ ಶುರುವಾದ ಬಳಿಕ ಮತ್ತೆ ಗುಡ್ಡ ಕುಸಿತವಾಗಿರೋದು ನಾಗರಿಕರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಜಿಲ್ಲಾಡಳಿತ ರಾತ್ರಿ ಏಳರಿಂದ ಬೆಳಿಗ್ಗೆ ಏಳರವರೆಗೆ ಸಂಚಾರ ನಿಷೇಧಿಸಿತ್ತು. ಇದೀಗ ಮತ್ತೆ ಮತ್ತೆ ಕುಸಿತದ ಘಟನೆ ಪುನರಾವರ್ತನೆಯಾಗ್ತಿರೋದ್ರಿಂದ ಮಾರ್ಗವನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಅಂಕೋಲಾ- ಹುಬ್ಬಳ್ಳಿ ಮಾರ್ಗದಿಂದ ಪರಿಸರಕ್ಕೆ ಧಕ್ಕೆಯಾಗಲ್ಲ: ಗಾಂವಕರ
ಇದರೊಂದಿಗೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಈವರೆಗೆ ಓರ್ವ ವ್ಯಕ್ತಿ, ಎರಡು ಜಾನುವಾರು ಸಾವಿಗೀಡಾಗಿದ್ದು, 15 ಹೆಕ್ಟೇರ್ ಬೆಳೆ ಹಾಗೂ 230 ಮನೆಗಳಿಗೆ ಹಾನಿಯಾಗಿವೆ. 97 ಕಿ.ಮೀ. ಗ್ರಾಮೀಣ ರಸ್ತೆ, 36 ಕಿ.ಮೀ.ಪಿಡಬ್ಲ್ಯೂಡಿ ರಸ್ತೆ, 1104 ವಿದ್ಯುತ್ ಕಂಬಗಳು ಹಾನಿಗೀಡಾಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಅಂದಾಜು 5 ಕೋಟಿ ರೂ. ನಷ್ಟವಾಗಿದೆ. ಒಟ್ಟಿನಲ್ಲಿ ಪ್ರವಾಹದ ಭೀತಿಯೊಂದಿಗೆ ಪದೇಪದೇ ಜಿಲ್ಲೆಯ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಇದರೊಂದಿಗೆ ಕಡಲ ಕೊರೆತ ಕೂಡಾ ಮೀನುಗಾರರಲ್ಲಿ ಆತಂಕ ಉಂಟು ಮಾಡಿದೆ. ಈ ಕಾರಣದಿಂದ ಸಿಎಂ ಭೇಟಿ ಜನರ ಸಮಸ್ಯೆಗೆ ಪರಿಹಾರ ಒದಗಿಸಲಿದೆಯೇ ಎಂದು ಕಾದು ನೋಡಬೇಕಷ್ಟೇ.