
ಚಿತ್ರದುರ್ಗ: ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಇದ್ದ ದಿನವೇ ದರೋಡೆಕೋರರು ಕನ್ನ ಹಾಕಿ, 23 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿರುವ ಘಟನೆ ಚಿತ್ರದುರ್ಗ ನಗರದ ದೊಡ್ಡಪೇಟೆ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ದೊಡ್ಡಪೇಟೆಯ ರಾಜಾರಾಮ್ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ. ಹಬ್ಬದ ಕೆಲ ದಿನಗಳ ಮುಂಚೆ ಮನೆಯವರು ಊರಿನ ಹೊರಗೆ ತೆರಳಿದ್ದರು. ಎರಡು ದಿನದ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಹಬ್ಬದ ದಿನ ಮನೆಗೆ ಬಂದು ನೋಡಿದಾಗ ಕಳ್ಳತನ ಬಯಲಾಗಿದೆ. ಮಹಾಲಕ್ಷ್ಮೀ ಪೂಜೆಗೆಂದು ಬಂದ ಕುಟುಂಬಸ್ಥರಿಗೆ ಈ ವೇಳೆ ಶಾಕ್ ಆಗಿದೆ. ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು 170 ಗ್ರಾಂ ತೂಕದ ಚಿನ್ನಾಭರಣ ಹಾಗೂ 2.5 ಕೆಜಿ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆ.
ಹಬ್ಬದ ದಿನ ಮನೆಗೆ ಮರಳಿದ ಕುಟುಂಬಸ್ಥರು ಬೀಗ ಮುರಿದು ಬಿದ್ದಿರುವುದನ್ನು ಕಂಡು ಶಾಕ್‌ಗೆ ಒಳಗಾದರು. ಮಹಾಲಕ್ಷ್ಮೀ ಪೂಜೆಯ ಸಡಗರದಲ್ಲಿ ಇರಬೇಕಾದ ಕುಟುಂಬಕ್ಕೆ ಕಳ್ಳತನದ ಘಟನೆ ಕಣ್ಣೀರಾಗಿಸಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್ಪಿ ಗೆ ನಗರಠಾಣೆ CPI ಉಮೇಶ್ ಬಾಬು ಸಾಥ್ ನೀಡಿದರು.