
ಶಿವಮೊಗ್ಗ: ಶಿವಮೊಗ್ಗದಲ್ಲಿ ವಂದೇ ಮಾತರಂ ವಿವಾದ ಭುಗಿಲೆದ್ದಿದೆ. ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮದಿಂದಲೇ ಹೊರನಡೆದಿದ್ದಾರೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಶಿವಮೊಗ್ಗ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಸಂಸತ್ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಜಿಲ್ಲಾ ಪಂಚಾಯತ್ ಸಿ ಇ ಓ ಹೇಮಂತ್ ಕುಮಾರ್, ನ್ಯಾಯಾಂಗ ಅಧಿಕಾರಿಗಳು, ಸಿವಿಲ್ ನ್ಯಾಯಾಧೀಶ ಸಂತೋಷ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಆದರೆ ಈ ವೇಳೆ ವಂದೇ ಮಾತರಂ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕೆಂದು ಒತ್ತಾಯಿಸಿ, ನಂತರ ಕಾರ್ಯಕ್ರಮದ ಸ್ಥಳದಿಂದಲೇ ಹೊರನಡೆದಿದ್ದಾರೆ. ಇದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಅಂಬೇಡ್ಕರ್ ಸಂವಿಧಾನ ತಂದುಕೊಟ್ಟರು. ಇದನ್ನು ಗಾಳಿಗೆ ತೂರುವ ಪ್ರಯತ್ನ ನಡೆದಿದೆ. ವಂದೇ ಮಾತರಂಗೆ 150 ವರ್ಷದ ಹಿನ್ನೆಲೆ ಇದೆ, ಸಂಸತ್‌ನಲ್ಲಿ ನಿರ್ಣಯ ಮಾಡಿ ಪೂರ್ಣ ಗಾಯನ ಮಾಡುವ ಕಾನೂನು ಜಾರಿಗೆ ತರಲಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನ ಉಳಿಸುವ ದಿನದಂದೇ ಸಂವಿಧಾನಕ್ಕೆ ಅಪಮಾನ ಮಾಡಿದೆ. ಎರಡು ಚರಣ ಮಾತ್ರ ಹಾಡಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದು ಕ್ಷಮಿಸಲು ಸಾಧ್ಯವಿಲ್ಲದ ಅಪರಾಧ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಚನ್ನಬಸಪ್ಪ ಮಾತನಾಡಿದ್ದಾರೆ.
ಅಲ್ಲದೇ, "ಜಿಲ್ಲಾಡಳಿತ ರಾಜ್ಯ ಸರ್ಕಾರದ ಆದೇಶವಿದೆ ಎನ್ನುತ್ತಿದೆ. ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು ಇದ್ದಾಗ ಪೂರ್ಣ ಹಾಡು, ಇಲ್ಲದಿದ್ದಾಗ ಎರಡು ಚರಣ ಮಾತ್ರ ಯಾಕೆ? ಜನಗಣಮನ ಹೇಗೆ ಪೂರ್ಣ ಹಾಡ್ತೀವೋ ಹಾಗೆ ವಂದೇ ಮಾತರಂ ಕೂಡ ಪೂರ್ಣ ಹಾಡಬೇಕು ಎಂಬುದು ಕಾನೂನು. ಇದು ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ಮಾಡಿದ ಅಪಮಾನ. ಸೆಪ್ಟೆಂಬರ್ 21, 22, 23 ರಂದು ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡ್ತೀವಿ" ಎಂದು ಗುಡುಗಿದ್ದಾರೆ. ಜೊತೆಗೆ "ಕಾಂಗ್ರೆಸ್ ಪಕ್ಷವನ್ನು ಒಂದು ಸಮಾಜಕ್ಕೆ ಅಡ ಇಟ್ಟಿದ್ದೀರಿ, ಈಗ ಸರ್ಕಾರವನ್ನೂ ಅಡ ಇಡಬೇಡಿ" ಎಂದು ಸಿಎಂ ಡಿಕೆ ಶಿವಕುಮಾರ್ಗೆ ಮನವಿ ಮಾಡಿದ್ದಾರೆ.
ವಂದೇ ಮಾತರಂ ಹಾಡಿನ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಶಿವಮೊಗ್ಗದಲ್ಲೂ ಈ ಘಟನೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. (ವರದಿ: ರಾಜೇಶ್ ಕಾಮತ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ)