ಪ್ರೇಮಿಗಳ ದಿನಾಚರಣೆ ಆಗಿದ್ದರಿಂದ ಜಿಲ್ಲೆಯ ನಂದಿಬೆಟ್ಟಕ್ಕೆ ಬರೋಬರಿ 8 ರಿಂದ 9 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರೇಮಿಗಳು ಸುಮಾರು 5. 6 ಸಾವಿರ ವಾಹನಗಳಲ್ಲಿ ಗಿರಿಧಾಮಕ್ಕೆ ಬೇಟಿ ನೀಡಿದ್ದ
ಚಿಕ್ಕಬಳ್ಳಾಪುರ (ಫೆ.15): ಜಿಲ್ಲೆಯ ವಿವಿಧೆಡೆ ಭಾನುವಾರ ಪ್ರೇಮಿಗಳ ದಿನಾಚರಣೆಯ ಸಂಭ್ರಮ, ಸಡಗರ ಎದ್ದು ಕಾಣುತ್ತಿತ್ತು. ಪ್ರೇಮಿಗಳ ಪಾಲಿಗೆ ಸ್ವರ್ಗವಾಗಿರುವ ಜಿಲ್ಲೆಯ ಐತಿಹಾಸಿಕ ನಂದಿಗಿರಿಧಾಮ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರೇಮಿಗಳ ಕಲರವ ಸದ್ದು ಮಾಡಿತು.
ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಕಾಲೇಜುಗಳ ಯುವಕ, ಯುವತಿಯರು ತಮ್ಮ ಪ್ರೇಮ ನಿವೇದನೆಗಾಗಿ ನಂದಿಬೆಟ್ಟಕ್ಕೆ ಆಗಮಿಸಿ ದಿನವಿಡಿ ಹಚ್ಚ ಹಸಿರಿನ ಕಾನನ ಮಧ್ಯೆ ಅಲ್ಲಿನ ಪ್ರಾಕೃತಿಕ ಸೊಬಗನ್ನು ಸವಿದು ತಮ್ಮದೇ ಲೋಕದಲ್ಲಿ ವಿರಮಿಸಿದರೆ ಮತ್ತೆ ಕೆಲವರು ಸೆಲ್ಪಿ ಖ್ಯಾತಿಯ ಅವುಲುಬೆಟ್ಟಕ್ಕೆ ಆಗಮಿಸಿ ಸೆಲ್ಪಿ ತೆಗೆದುಕೊಂಡು ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮಿಸಿದರು.
ದೇಗುಲಗಳಲ್ಲಿ ವಿಶೇಷ ಪೂಜೆ
ಜಿಲ್ಲೆಯ ಚಿಂತಾಮಣಿ ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿ ನಾರೇಯಣ ಮಠ, ಅಂಬಾಜಿದುರ್ಗ ಹೋಬಳಿಯ ಕಾಡುಮಲ್ಲೇಶ್ವರ, ಕೈಲಾಸಗಿರಿ, ಗೌರಿಬಿದನೂರು ವಿಧುರಾಶ್ವತ್ಥ, ಬಾಗೇಪಲ್ಲಿ ಗಡಿದಂ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪ್ರೇಮಿಗಳ ದಂಡು ಆಗಮಿಸಿ ತಮ್ಮ ನೆಚ್ಚಿನ ದೇವರುಗಳಿಗೆ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ಮಾಡಿಸುವ ಮೂಲಕ ತಮ್ಮ ಇಷ್ಟಾರ್ಥ ಈಡೇರುವಂತೆ ಪ್ರಾರ್ಥಿಸಿದರು.
ಈತ ಪ್ರೇಮದ 'ಪೂಜಾ'ರಿ : ಅವಳಿಗಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ .
ನಂದಿಬೆಟ್ಟಕ್ಕೆ ತೆರಳಲು ಬೆಳಗ್ಗೆ 5 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಮತ್ತಿತರ ಕಡೆಗಳಿಂದ ಆಗಮಿಸಿದ್ದ ಪ್ರೇಮಿಗಳು ಗಿರಿಧಾಮ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದ್ದರು. ಸಾವಿರಾರು ಸಂಖ್ಯೆಯಲ್ಲಿ ವಾಹನ ಸವಾರರು ಬೆಟ್ಟಕ್ಕೆ ತೆರಳಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಇನ್ನಿಲ್ಲದ ಪ್ರಯಾಸ ಪಡಬೇಕಾಯಿತು. ಇನ್ನು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿತು. ಊಟ, ತಿಂಡಿ ಸೇರಿದಂತೆ ತರಹೇವಾರಿ ತಿನಿಸುಗಳ ದರ ಗಗನಕ್ಕೇರಿತ್ತು. ಇನ್ನೂ ಭಾನುವಾರ ಆಗಿದ್ದರಿಂದ ಪ್ರೇಮಿಗಳು ಸಿನಿಮಾ ವೀಕ್ಷಣೆಗೂ ಆಗಮಿಸಿದ್ದರಿಂದ ಜಿಲ್ಲೆಯ ಚಿತ್ರ ಮಂದಿರಗಳು ಸ್ವಲ್ಪ ಮಟ್ಟಿಗೆ ಭರ್ತಿಯಾಗಿದ್ದವು.
ಪೊಲೀಸ್ ಭದ್ರತೆ:
ಜಿಲ್ಲಾದ್ಯಂತ ಮುಜಾಗ್ರತಾ ಕ್ರಮವಾಗಿ ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹಾಗೂ ಹೆಚ್ಚು ಭಕ್ತರು ಬರುವ ದೇವಾಲಯಗಳ ಸಮೀಪ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು
ನಂದಿಬೆಟ್ಟಕ್ಕೆ 8 ಸಾವಿರ ಪ್ರವಾಸಿಗರು ಭೇಟಿ
ಪ್ರೇಮಿಗಳ ದಿನಾಚರಣೆ ಆಗಿದ್ದರಿಂದ ಜಿಲ್ಲೆಯ ನಂದಿಬೆಟ್ಟಕ್ಕೆ ಬರೋಬರಿ 8 ರಿಂದ 9 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರೇಮಿಗಳು ಸುಮಾರು 5. 6 ಸಾವಿರ ವಾಹನಗಳಲ್ಲಿ ಗಿರಿಧಾಮಕ್ಕೆ ಬೇಟಿ ನೀಡಿದ್ದರೆಂದು ನಂದಿಬೆಟ್ಟದ ವಿಶೇಷ ಕರ್ತವ್ಯ ಅಧಿಕಾರಿ ಗೋಪಾಲ್ ಮಾಹಿತಿ ನೀಡಿದರು. ಇನ್ನು ಸೆಲ್ಪಿಸ್ಪಾಟ್ ಅವುಲುಬೆಟ್ಟಕ್ಕೆ ಸುಮಾರು 1,500 ಕ್ಕೂ ಹೆಚ್ಚು ಪ್ರವಾಸಿಗರು, ಪ್ರೇಮಿಗಳು ದಂಡು ಬೇಟಿ ನೀಡಿ ಯುವ ಪ್ರೇಮಿಗಳು ಮೊಬೈಲ್‌ಗಳಲ್ಲಿ ಸೆಲ್ಪಿಗಳನ್ನು ತೆಗೆದುಕೊಂಡು ಆನಂದ ಸಾಗರದಲ್ಲಿ ಮುಳಗಿದ್ದರು.