ಸಾರಿಗೆ ಸಿಬ್ಬಂದಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌..!

By Kannadaprabha NewsFirst Published Feb 15, 2021, 8:21 AM IST
Highlights

ಷರತ್ತು ವಿಧಿಸಿ ಬಿಎಂಟಿಸಿ ನೌಕರರ| ವೇತನ ಪಾವತಿಗೆ ಹಣ ಬಿಡುಗಡೆ| ಡಿಸೆಂಬರ್‌, ಜನವರಿಯ ಶೇ.50 ವೇತನ ಪಾವತಿ| 86 ಕೋಟಿ ವಿಶೇಷ ಅನುದಾನ ನೀಡಿದ ಸರ್ಕಾರ| ಬಿಎಂಟಿಸಿ ಕಳೆದ ಎರಡು ತಿಂಗಳಿಂದ ಶೇ.50ರಷ್ಟು ವೇತನ ಮಾತ್ರ ಪಾವತಿ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ನೌಕರರು| 
 

ಬೆಂಗಳೂರು(ಫೆ.15): ಬೆಂಗಳೂರು ಮಹಾನಗರ ಸಾರಿಗೆ ನಿಗಮದ(ಬಿಎಂಟಿಸಿ) ನೌಕರರ ಡಿಸೆಂಬರ್‌ ಮತ್ತು ಜನವರಿ ತಿಂಗಳ ಶೇ.50ರಷ್ಟು ಬಾಕಿ ವೇತನ ಪಾವತಿಗೆ ರಾಜ್ಯ ಸರ್ಕಾರ 86.69 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ.

ಕೊರೋನಾದಿಂದಾಗಿ ಬಿಎಂಟಿಸಿ ಆದಾಯ ಕುಸಿದ ಪರಿಣಾಮ ನಿಗಮದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ಹೀಗಾಗಿ ನಿಗಮವು ನೌಕರರಿಗೆ ಡಿಸೆಂಬರ್‌ ಹಾಗೂ ಜನವರಿ ತಿಂಗಳ ಶೇ.50ರಷ್ಟು ವೇತನ ಮಾತ್ರ ಪಾವತಿಸಿತ್ತು. ಉಳಿದ ಶೇ.50ರಷ್ಟು ವೇತನ ಪಾವತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆ ಪುರಸ್ಕರಿಸಿರುವ ಸರ್ಕಾರವು ಡಿಸೆಂಬರ್‌ ತಿಂಗಳ ಬಾಕಿ ವೇತನಕ್ಕೆ 42.77 ಕೋಟಿ ಹಾಗೂ ಜನವರಿಯ 43.92 ಕೋಟಿ ಸೇರಿ ಒಟ್ಟು 86.69 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಿ ಆದೇಶಿಸಿದೆ.

ಮೊಬೈಲ್‌ ಶಾಲೆಯಾದ ಬಿಎಂಟಿಸಿ ಹಳೆ ಬಸ್‌..!

ಈ ವಿಶೇಷ ಅನುದಾನ ಬಳಕೆ ಸಂಬಂಧ ಹಲವು ಷರತ್ತು ವಿಧಿಸಿರುವ ರಾಜ್ಯ ಸರ್ಕಾರ, ಈ ಅನುದಾನವನ್ನು ನೌಕರರ ವೇತನ ಪಾವತಿಗೆ ಮಾತ್ರ ಬಳಸಿಕೊಳ್ಳಬೇಕು. ನಿಗಮದಲ್ಲಿ ಅನವಶ್ಯಕ ಹುದ್ದೆಗಳನ್ನು ಕಡಿತಗೊಳಿಸಿ, ಹುದ್ದೆಗಳ ಗಾತ್ರವನ್ನು ಪುನರ್‌ ರಚಿಸಬೇಕು. ಅನಾವಶ್ಯಕ ಹುದ್ದೆಗಳನ್ನು ಸರೆಂಡರ್‌ ಮಾಡಬೇಕು. ಸರ್ಕಾರದ ಅಥವಾ ನಿಗಮದ ಹಣದಿಂದ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು. ಪ್ರಸಕ್ತ ಸಾಲಿನಲ್ಲಿ ಯಾವುದೇ ಹೊಸ ಬಸ್‌ ಖರೀದಿ ಮಾಡಬಾರದು. ವಾಹನಗಳ ನಿರ್ವಹಣೆ ಹಾಗೂ ಬಿಡಿ ಭಾಗಗಳ ಖರೀದಿಗೆ ಕನಿಷ್ಠ ವೆಚ್ಚ ಮಾಡಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

ರಾಜ್ಯ ಸರ್ಕಾರವು ಕಳೆದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಬಿಎಂಟಿಸಿ ನೌಕರರ ವೇತನ ಪಾವತಿಗೆ 519.86 ಕೋಟಿ ಅನುದಾನ ನೀಡಿದೆ. ಇದೀಗ 86.69 ಕೋಟಿ ಸೇರಿದಂತೆ ಈವರೆಗೆ ಒಟ್ಟು 605.69 ಕೋಟಿ ಅನುದಾನ ನೀಡಿದಂತಾಗಿದೆ. ಬಿಎಂಟಿಸಿ ನಿಗಮವು ಕಳೆದ ಎರಡು ತಿಂಗಳಿಂದ ಶೇ.50ರಷ್ಟು ವೇತನ ಮಾತ್ರ ಪಾವತಿ ಮಾಡಿದ್ದಕ್ಕೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
 

click me!