ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ

By Govindaraj SFirst Published Jan 13, 2023, 10:49 PM IST
Highlights

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಜೊತೆಗೆ ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕು. ಎಲ್ಲ ಲಿಂಗಾಯತರಿಗೆ ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಆಗ್ರಹಿಸಿದರು.

ಹಾವೇರಿ (ಜ.13): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಜೊತೆಗೆ ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕು. ಎಲ್ಲ ಲಿಂಗಾಯತರಿಗೆ ಕೇಂದ್ರದ ಓಬಿಸಿ ಮೀಸಲಾತಿ ಸಿಗಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರದ ಓಬಿಸಿ ಮೀಸಲಾತಿ ಸಿಕ್ಕರೆ ನಮ್ಮ ಮಕ್ಕಳಿಗೆ ಬಹಳ ಅನುಕೂಲ ಆಗಲಿದೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ನಮ್ಮ ಮಕ್ಕಳಿಗೆ ಅನುಕೂಲ ಆಗುತ್ತದೆ. ಕರ್ನಾಟಕದಲ್ಲಿರುವ ಬಹುದೊಡ್ಡ ಜನಾಂಗ ಲಿಂಗಾಯತ ಪಂಚಮಸಾಲಿ, ಲಿಂಗಾಯತ ಜನಾಂಗ. ನಾವು ಓಬಿಸಿಯಲ್ಲಿ ಇಲ್ಲದಿರುವುದಕ್ಕೆ ಉತ್ತರ ಪ್ರದೇಶದ ಹಲವಾರು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಿ ಅಧಿಕಾರಿಗಳಾಗುತ್ತಿದ್ದಾರೆ. ಹೀಗಾಗಿ ನಮ್ಮ ಮಕ್ಕಳ ಸಲುವಾಗಿ ಕೇಂದ್ರದಲ್ಲಿ ಸಮಗ್ರ ಲಿಂಗಾಯತರಿಗೆ ಓಬಿಸಿ ಮೀಸಲಾತಿ ಸಿಗಬೇಕು ಎಂದರು.

Uttara Kannada: ಗೋಸ್ವರ್ಗದಲ್ಲಿ ಸಂಭ್ರಮದ ಗೋವು ದಿನ, ಆಲೆಮನೆ ಹಬ್ಬ ಆಚರಣೆ

ಸಿಎಂ ನಿವಾಸದ ಮುಂದಿನ ಧರಣಿ ಬಗ್ಗೆ ಗೊತ್ತಿಲ್ಲ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಜ. 13ರಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಿಗ್ಗಾಂವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಕೈಗೊಳ್ಳಲಿರುವ ಧರಣಿ ಸತ್ಯಾಗ್ರಹದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು.

ಹರ ಜಾತ್ರೆಯಲ್ಲಿ ಸಿಎಂ ಸ್ಪಷ್ಟನೆ: 2009ರವರೆಗೆ ನಾವು ಮೊದಲು ಓಬಿಸಿಯಲ್ಲಿ ಇರಲಿಲ್ಲ. 1994ರಿಂದ ಓಬಿಸಿ ಹೋರಾಟ ಆರಂಭವಾಯಿತು. ಮೊಟ್ಟಮೊದಲು ಪಂಚಮಸಾಲಿ ಜಾತಿ ಪಟ್ಟಿಯಲ್ಲಿ ಸೇರಿಸಿ ಓಬಿಸಿ ಪಟ್ಟಿಯಲ್ಲಿ ಸೇರಿತು. ಆಗಲೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕಿತ್ತು. ಅದು ಆಗಲಿಲ್ಲ. ನಾವು ಇದರ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಸರ್ಕಾರದ ಕೈ ಸೇರಿದೆ. ಆ ವರದಿ ತೆಗೆದುಕೊಂಡು ಕಳೆದ ಕೆಲವು ದಿನಗಳ ಹಿಂದೆ ಸರ್ಕಾರ ಮೀಸಲಾತಿ ಬಗ್ಗೆ ಘೋಷಣೆ ಮಾಡಿದೆ. 

ಆದರೆ ಅದರಲ್ಲಿ ಕೆಲವೊಂದು ಗೊಂದಲಗಳಿವೆ. 2ಡಿ ಮತ್ತು 2ಸಿ ಮೀಸಲಾತಿ ಘೋಷಣೆ ಬಗ್ಗೆ ಸ್ಪಷ್ಟತೆ ಇಲ್ಲ. ಅದನ್ನು ನಾವು ಸ್ವಾಗತವನ್ನೂ ಮಾಡಿಲ್ಲ, ವಿರೋಧವನ್ನೂ ಮಾಡಿಲ್ಲ. ಹರ ಜಾತ್ರಾ ಮಹೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬರುತ್ತಾರೆ. ಅಲ್ಲಿ ನಮ್ಮ ಸಮಾಜದ ಜನಪ್ರತಿನಿಧಿಗಳು ಇರುತ್ತಾರೆ. ಕಾರ್ಯಕ್ರಮಕ್ಕೆ ಬಂದಾಗ ಸಿಎಂ ಬೊಮ್ಮಾಯಿಯವರು ಅದರ ಬಗ್ಗೆ ಸ್ಪಷ್ಟತೆ ಕೊಡಲಿ. ಸಿಎಂ ಅವರು ಕಾರ್ಯಕ್ರಮಕ್ಕೆ ಬಂದು ಸ್ಪಷ್ಟನೆ ಕೊಡುತ್ತಾರೆ ಎಂಬ ಭರವಸೆಯಿದೆ. ಜಗತ್ತು ನಿಂತಿರುವುದೇ ಭರವಸೆ ಮೇಲೆ. ನಂಬಿಕೆಯೆ ನಮ್ಮನ್ನು ಬದುಕಿಸುವುದು. 

Kodagu: ಸಾಲ ತೀರಿಸಿ ಒಂದುವರೆ ವರ್ಷದ ಬಳಿಕ ಸಾಲಗಾರರಿಗೆ ಕೋರ್ಟಿನಿಂದ ಬಂತು ಸಮನ್ಸ್!

ಹೀಗಾಗಿ ನಮಗೆ ಸಿಎಂ ಮೇಲೆ ಭರವಸೆ ಇದೆ ಎಂದರು. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ತಮ್ಮ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಚನಾನಂದ ಶ್ರೀ, ಲಘುವಾಗಿ ಮಾತನಾಡುವವರನ್ನು ಲಘುವಾಗಿ ಬಿಡಬೇಕು ಎಂದರು. ಸಮಾಜದ ಪ್ರಮುಖರಾದ ಪಿ.ಡಿ. ಶಿರೂರ, ನಾಗೇಂದ್ರ ಕಟಕೋಳ, ಸದಾನಂದ ಹಾದಿಮನಿ, ಮಹೇಶ ಹಾವೇರಿ, ಈಶ್ವರಗೌಡ ಪಾಟೀಲ, ಪ್ರಕಾಶ ಪಾಟೀಲ, ಮಾಲತೇಶ ಸೊಪ್ಪಿನ, ನಂಜುಂಡೇಶ ಕಳ್ಳೇರ, ಶಿವಯೋಗಿ ಹೊಸಗೌಡ್ರ, ವೀರೇಶ ಆಜೂರು, ದಾನೇಶ್ವರ ಕೆಂಗೊಂಡ ಇತರರು ಇದ್ದರು.

click me!