ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡ್ಡಿಕೆರೆ ಗ್ರಾಮದ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕ್ರಮ ಖಂಡಿಸಿ ಧರಣಿ ನಡೆಸಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಜ.13): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡ್ಡಿಕೆರೆ ಗ್ರಾಮದ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕ್ರಮ ಖಂಡಿಸಿ ಧರಣಿ ನಡೆಸಿದರು. ಮೂಡಿಗೆರೆ ಪಟ್ಟಣದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪವಿಭಾಗದ ಕಛೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಆಕ್ರೋಶವನ್ನು ಹೊರಹಾಕಿದರು.
ಕೆಲ ಕಾಲ ಬಿಗಿವಿನ ವಾತಾವರಣ:
ಮಡ್ಡಿಕೆರೆ ಗ್ರಾಮದ ಮಹಿಳೆಯರು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಜನರು ಜಿ.ಪಂ. ಇಂಜಿನಿಯರ್ ಕಛೇರಿ ಆವರಣದಲ್ಲಿ ಶಾಮಿಯಾನ ಹಾಕಿ ಧರಣಿ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಕೆಲ ಕಾಲ ಬಿಗಿವಿನ ವಾತಾವರಣ ನಿರ್ಮಾಣವಾಯಿತು. ರಸ್ತೆ ಕಾಮಗಾರಿ ಪ್ರಾರಂಭಿಸದ ಹೊರತು ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತು ಪರಿಣಾಮ ಬಿಗಿವಿನ ಪರಿಸ್ಥಿತಿ ನಿರ್ಮಾಣವಾಯಿತು. ಮಡ್ಡಿಕೆರೆ ಗ್ರಾಮಕ್ಕೆ ತೆರಳುವ ರಸ್ತೆಯ ಡಾಂಬಾರಿಕರಣಕ್ಕೆ ಗ್ರಾಮಾಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರಾಗಿದ್ದು, ಸದರಿ ಕಾಮಗಾರಿಯ ಟೆಂಡರ್ ಕೂಡ ಆಗಿದೆ.
ಕಳೆದ ಡಿಸೆಂಬರ್ 10ರಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ರಸ್ತೆಯನ್ನು ಅಗೆದು ತೆಗೆದು ಅರ್ಧಕ್ಕೆ ಕೆಲಸವನ್ನು ನಿಲ್ಲಿಸಿದ್ದಾರೆ. ಇದರಿಂದ ಗ್ರಾಮಸ್ಥರು ರಸ್ತೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಆರೋಪಿಸಿದರು. ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರಿಗೆ ಹೆದರಿ ಈಗ ಕಾಮಗಾರಿಯನ್ನು ಮಾಡಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಹಾಗಾಗಿ ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ದಾರಿ ಹಿಡಿದಿದ್ದಾರೆ.
Tumakur : ರೈಲ್ವೆ ಕಾಮಗಾರಿ ಕೈಗೊಳ್ಳಲು ಸಂಸದರೊಂದಿಗೆ ಚರ್ಚೆ
ಕಛೇರಿಗೆ ಬೀಗ ಹಾಕುವ ಯತ್ನ:
ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಕ್ರೋಶಿತರಾತ ಜನರು ಜಿ.ಪಂ. ಇಂಜಿನಿಯರ್ ಕಛೇರಿಗೆ ಬೀಗ ಜಡಿಯಲು ಪ್ರಯತ್ನಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಕಛೇರಿ ಬಂದ್ ಮಾಡದಂತೆ ತಡೆದ್ರು. ಸ್ಥಳದಲ್ಲಿ ಮೂಡಿಗೆರೆ ಠಾಣೆಯ ಪೊಲೀಸರು ಮೊಕ್ಕಾಂ ಹಾಕಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪ್ರತಿಭಟನಾಕಾರರು ಮೂಡಿಗೆರೆ ಜಿ.ಪಂ. ಇಂಜಿನಿಯರ್ ವಿಭಾಗದ ಎಇಇ ಮತ್ತು ಜೆಇ ವಿರುದ್ಧ ಪ್ರತಿಭಟನೆ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಮೆಟ್ರೋದ ಮತ್ತೊಂದು ಭಾರೀ ಅವಾಂತರ..!
ಸ್ಥಳೀಯ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದ ಕಾರಣ ಚಿಕ್ಕಮಗಳೂರು ಜಿ.ಪಂ. ಎಕ್ಸಿಕ್ಯೂಟೀವ್ ಇಂಜಿನಿಯರ್ ಸ್ಥಳಕ್ಕೆ ಆಗಮಿಸಬೇಕೆಂಬ ಆಗ್ರಹ ಕೇಳಿಬಂತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಇಂಜಿನಿಯರ್ ಶೀಘ್ರವೇ ಕೆಲಸ ಆರಂಭಿಸುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯ, ಶ್ರೀಮತಿ ಮೋಟಮ್ಮ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಸಿ.ಪಿ.ಐ. ಮುಖಂಡ ಬಿ.ಕೆ. ಲಕ್ಷ್ಮಣಕುಮಾರ್, ಗ್ರಾ.ಪಂ. ಸದಸ್ಯೆ ಕೆ.ಪಿ. ಭಾರತಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ತಮ್ಮ ಬೆಂಬಲ ಸೂಚಿಸಿದರು.