Kodagu: ಸಾಲ ತೀರಿಸಿ ಒಂದುವರೆ ವರ್ಷದ ಬಳಿಕ ಸಾಲಗಾರರಿಗೆ ಕೋರ್ಟಿನಿಂದ ಬಂತು ಸಮನ್ಸ್!

Published : Jan 13, 2023, 10:05 PM IST
Kodagu: ಸಾಲ ತೀರಿಸಿ ಒಂದುವರೆ ವರ್ಷದ ಬಳಿಕ ಸಾಲಗಾರರಿಗೆ ಕೋರ್ಟಿನಿಂದ ಬಂತು ಸಮನ್ಸ್!

ಸಾರಾಂಶ

ಅವರೆಲ್ಲ ಅಂದು ದುಡಿದು ಅಂದಿನ ಬದುಕು ನಡೆಸುವ ಜನರು. ಅವರಿಗೆ ಬ್ಯಾಂಕ್ ಸುಲಭವಾಗಿ ಸಾಲ ಕೊಡುತ್ತೆ ಅಂದರೆ ಯಾರು ತಾನೆ ಬೇಡ ಅಂತ್ತಾರೆ ಹೇಳಿ. ಸ್ವಸಹಾಯ ಸಂಘಗಳನ್ನು ಮಾಡಿದ ಒಬ್ಬಾಕೆ ಜನರಿಗೆ ಸಾಲ ಕೊಡಿಸಿಯೇ ಬಿಟ್ಲು. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.13): ಅವರೆಲ್ಲ ಅಂದು ದುಡಿದು ಅಂದಿನ ಬದುಕು ನಡೆಸುವ ಜನರು. ಅವರಿಗೆ ಬ್ಯಾಂಕ್ ಸುಲಭವಾಗಿ ಸಾಲ ಕೊಡುತ್ತೆ ಅಂದರೆ ಯಾರು ತಾನೆ ಬೇಡ ಅಂತ್ತಾರೆ ಹೇಳಿ. ಸ್ವಸಹಾಯ ಸಂಘಗಳನ್ನು ಮಾಡಿದ ಒಬ್ಬಾಕೆ ಜನರಿಗೆ ಸಾಲ ಕೊಡಿಸಿಯೇ ಬಿಟ್ಲು. ಖುಷಿಯಾಗಿ ಸಾಲ ಪಡೆದವರು ತಾವು ಪಡೆದ ಸಾಲವನ್ನು ಮಹಿಳೆ ಬಳಿ ಕಟ್ಟಿ ಸಾಲ ತೀರಿಸಿದ್ದರು. ಸಾಲ ತೀರಿಸಿದ ಒಂದುವರೆ ವರ್ಷಗಳ ಬಳಿಕ ಸಾಲ ಪಡೆದವರಿಗೆ ಕೋರ್ಟಿನಿಂದ ಸಮನ್ಸ್ ಬಂದಿದ್ದು, ಸಾಲಪಡೆದಿದ್ದವರು ಕಂಗಾಲಾಗಿದ್ದಾರೆ. ಸಾಲ ಪಡೆದು ಮರು ಪಾವತಿ ಮಾಡಿದ್ರು ಸಾಲ ಮರುಪಾವತಿ ಮಾಡುವಂತೆ ಕೋರ್ಟ್ ಮೂಲಕ ಸಮನ್ಸ್ ಜಾರಿ. 

ಸಾಲ ತೀರಿಸುವುದಕ್ಕೆ ಸಾಲಪಡೆದ ಮಹಿಳೆಯ ಮೂಲಕವೇ ಬ್ಯಾಂಕಿಗೆ ಹಿಂದಿರುಗಿಸಿದ್ದರೂ ಕೋರ್ಟ್‍ನಿಂದ ನೋಟಿಸ್ ಬಂದಿರುವುದಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಜನ್ರು, ನಮಗೆ ವಂಚನೆಯಾಗಿದೆ ಅಂತ ದೂರು, ಸಾಲ ಮಾಡಿಸಿಕೊಟ್ಟು, ವಸೂಲಾತಿ ಮಾಡಿದ ಮಹಿಳೆಯೇ ಇದೀಗ ಎಸ್ಕೇಪ್. ಹೀಗೊಂದು ಘಟನೆ ನಡೆದಿರೋದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ. ಮಡಿಕೇರಿಯ ನೂರಾರು ಮಂದಿ ಸುಲಭವಾಗಿ ಸಾಲ ದೊರೆಯುತ್ತಿದೆ ಎಂದು ಇಲ್ಲಿನ ಬ್ಯಾಂಕ್ ಆಫ್ ಬರೋಡಾದಲ್ಲಿ ಸಾಲ ಪಡೆದಿದ್ದಾರೆ. ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿ ಅಂತ ಪರಿಚಯ ಮಾಡಿಕೊಂಡ ರಮ್ಯ ಎಂಬ ಮಹಿಳೆ ನೀವು ಸ್ವಸಹಾಯ ಸಂಘಗಳನ್ನು ಮಾಡಿದರೆ ನಿಮಗೆ ಸಾಲ ಕೊಡಿಸುವುದಾಗಿ ಹೇಳಿ ಜಿಲ್ಲೆಯ ವಿವಿಧೆಡೆ 50ಕ್ಕೂ ಸ್ವಸಹಾಯ ಸಂಘಗಳನ್ನು ಮಾಡಿಸಿ 20 ರಿಂದ 25 ಸಾವಿರ ರೂಪಾಯಿಯನ್ನು ಪ್ರತೀ ಸದಸ್ಯರಿಗೆ ಸಾಲ ಕೊಡಿಸಿದ್ದಾರೆ. 

ಜ.19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಸಚಿವ ಆರ್.ಅಶೋಕ್‌ರಿಂದ ಪೂರ್ವಸಿದ್ಧತೆ ಪರಿಶೀಲನೆ

ಸಾಲ ಕೊಡಿಸುವುದಕ್ಕೂ ಮುಂಚೆ ಬ್ಯಾಂಕಿನಲ್ಲಿ ಠೇವಣಿ ಇಡಬೇಕು ಎಂದು ಪ್ರತೀ ವ್ಯಕ್ತಿಯಿಂದ ತಲಾ 5 ಸಾವಿರ ವಸೂಲಿ ಮಾಡಿದ್ದಾರೆ. ನಂತರ ಮಾತಿನಂತೆ ಸಾಲ ಕೊಡಿಸಿದ ರಮ್ಯ ಎಂಬಾಕೆ ಒಬ್ಬೊಬ್ಬರಿಗೂ ಒಂದು ರೀತಿಯಲ್ಲಿ 25 ಸಾವಿರದವರೆಗೆ ಸಾಲ ಕೊಡಿಸಿದ್ದಾಳೆ. ಸಾಲ ಪಡೆದ ನಂತರ ಜನರು ಬ್ಯಾಂಕಿಗೆ ಹೋಗಿ ಸಾಲ ಮರುಪಾವತಿಗೆ ಮುಂದಾಗಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿ ನೀವು ಸಾಲ ಪಡೆದ ಮಹಿಳೆಯ ಬಳಿಯೇ ಕೊಡಿ ಅವರು ಕಟ್ಟುತ್ತಾರೆ ಎಂದು ಹೇಳಿ ಕಳುಹಿಸಿದ್ದರಂತೆ. ಹೀಗಾಗಿ ರಮ್ಯ ಅವರ ಬಳಿಯೇ ಜನರು ಪ್ರತೀ ತಿಂಗಳು ಸಾಲದ ಕಂತು ಕಟ್ಟಿದ್ದಾರೆ. ಹೀಗೆ ಸಾಲ ಮರುಪಾವತಿ ಮಾಡಿ ಒಂದುವರೆ ವರ್ಷದ ಬಳಿಕ ಜನರಿಗೆ ನೀವು ಸಾಲ ತೀರಿಸಿಲ್ಲ ಎಂದು ಕೋರ್ಟ್ ಮೂಲಕ ಸಮನ್ಸ್ ಬಂದಿದೆ. 

ಈ ನೋಟಿಸ್ ಬಂದಾಗಲೇ ಮಹಿಳೆ ತಮ್ಮ ಹಣವನ್ನು ಬ್ಯಾಂಕಿಗೆ ಮರುಪಾವತಿ ಮಾಡದೆ ತಾನೇ ಬಳಸಿಕೊಂಡಿದ್ದಾಳೆ ಎನ್ನುವುದು ಗೊತ್ತಾಗಿದೆ. ಇದನ್ನು ಕಂಡು ಸಾಲ ಪಡೆದ ಜನರು ಧಿಗ್ಭ್ರಮೆಗೆ ಒಳಗಾಗಿದ್ದಾರೆ. ಹೀಗಾಗಿ ನಮಗೆ ಅನ್ಯಾಯವಾಗಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ವಕೀಲ ಪವನ್ ಪೆಮ್ಮಯ್ಯ ಹೇಳಿದ್ದಾರೆ.  ಸಾಲ ಮರುಪಾವತಿ ಮಾಡುವುದಕ್ಕಾಗಿ ಕೆಲವರು ಮಹಿಳೆ ರಮ್ಯನ ಗೂಗಲ್ ಪೇಗೆ ಹಣ ಹಾಕಿದ್ದರೆ, ಇನ್ನೂ ಕೆಲವರು ಅವರ ಕೈಗೆ ಹಣ ಸಂದಾಯ ಮಾಡಿದ್ದಾರೆ. ಜನರಿಗೆ ನೋಟಿಸ್ ಬಂದಿರುವುದಕ್ಕೆ ಸಿಟ್ಟುಗೆದ್ದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಇದೀಗ ಆಕೆ ಎಸ್ಕೇಪ್ ಆಗಿದ್ದಾಳೆ. ಬ್ಯಾಂಕ್ ನಲ್ಲಿ ವಿಚಾರಿಸಿದ್ದಾಗ ಆಕೆ ಬ್ಯಾಂಕ್ ಸಿಬ್ಬಂದಿಯೆ ಅಲ್ಲ ಎಂದು ಹೇಳುತ್ತಿದ್ದಾರೆ. 

ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಶಾಸಕಿ ರೂಪಾಲಿ

ಇಷ್ಟು ಮಾತ್ರವಲ್ಲ ಐನಾತಿ ಮಹಿಳೆ ಸತ್ತವರ ಹೆಸರಿನಲ್ಲೂ ಇಲ್ಲಿ ಲೋನ್ ಮಾಡಲಾಗಿದ್ದು, ಬ್ಯಾಂಕ್ ಮ್ಯಾನೇಜನರ್ ಅದ್ಹೇಗೆ ಸಾಲ ಬಿಡುಗಡೆ ಮಾಡಿದರು ಎನ್ನುವುದೇ ಅಚ್ಚರಿಯ ಸಂಗತಿ. ಬ್ಯಾಂಕ್ ಆಫ್ ಬರೋಡಾದ ಮಡಿಕೇರಿ ಶಾಖೆಯ ಹಳೆಯ ಮ್ಯಾನೇಜರ್ ಮತ್ತು ರಮ್ಯ ಇಬ್ಬರು ಸೇರಿ ವಂಚಿಸಿದ್ದಾರೆ ಎಂಬ ಅನುಮಾನ  ಇದೆ ಎಂದು ಸಾಲ ಮರುಪಾವತಿ ಮಾಡಿಯೂ ಮೋಸ ಹೋಗಿರುವ ರಿಜ್ವಾನ್ ಎಂಬ ವ್ಯಕ್ತಿ ಆರೋಪಿಸುತ್ತಿದ್ದಾರೆ. ಸದ್ಯ ಸಾಲ ಪಡೆದ ಸ್ವಸಹಾಯ ಸಂಘಗಳು ಈಗ ಏಳೆಂಟು ಲಕ್ಷ ರೂಪಾಯಿ ಸಾಲ ತೀರಿಸಬೇಕಾಗಿದೆ. ಒಟ್ಟಿನಲ್ಲಿ ಆಟೋ ಟ್ಯಾಕ್ಸಿ ಓಡಿಸಿಕೊಂಡು, ಕೂಲಿ ನಾಲಿ ಮಾಡಿ ಬದುಕುತ್ತಿದವರು ನಂಬಿಕಸ್ಥೆ ಅಂತ ಹೇಳಿ ಮಹಿಳೆ ಮೂಲಕ ಬ್ಯಾಂಕಿನಿಂದ ಸಾಲಪಡೆದು ಮರುಪಾವತಿ ಮಾಡಿದರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವೇ ಪುನಃ ಬ್ಯಾಂಕಿಗೆ ಹಣ ಹಿಂದಿರುಗಿಸುವ ಪರಿಸ್ಥಿತಿ ಬಂದೊದಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!