'ಮೊದಲ ಹಂತದಲ್ಲಿ 94000 ಕೊರೋನಾ ಯೋಧರಿಗೆ ಲಸಿಕೆ'

By Kannadaprabha NewsFirst Published Nov 19, 2020, 8:44 AM IST
Highlights

ಶೀಘ್ರ ಲಸಿಕೆ ಲಭ್ಯವಾಗುವ ನಿರೀಕ್ಷೆ| ಕೇಂದ್ರದ ತೀರ್ಮಾನದಂತೆ ಪಾಲಿಕೆಯಿಂದ ಮಾಹಿತಿ ಸಂಗ್ರಹ| ಲಸಿಕೆಯನ್ನು ಬಿಬಿಎಂಪಿ ಮಾತ್ರವಲ್ಲ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಒಟ್ಟಾಗಿ ಸೇರಿ ವಿತರಣೆಗೆ ಕ್ರಮ| 

ಬೆಂಗಳೂರು(ನ.19): ದೇಶದಲ್ಲಿ ಶೀಘ್ರದಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿರುವ ನಿರೀಕ್ಷೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಸುಮಾರು 94,000 ಕೊರೋನಾ ವಾರಿಯರ್ಸ್‌ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಕೊರೋನಾ ಲಸಿಕೆ ನೀಡುವ ಕುರಿತಂತೆ ಬೆಂಗಳೂರು ಜಿಲ್ಲಾ ಕೊರೋನಾ ಕಾರ್ಯಪಡೆ ಸದಸ್ಯರು, ಸರ್ಕಾರಿ, ಖಾಸಗಿ ಮತ್ತು ಮೆಡಿಕಲ್‌ ಕಾಲೇಜು ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು.

ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿ, ಮೆಡಿಕಲ್‌ ಮತ್ತು ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವಾರಿಯರ್ಸ್‌ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ಬುಕ್‌ ಮಾಡಿದ ಭಾರತ!

ನಾಡಿದ್ದು ಡೆಡ್‌ಲೈನ್‌:

ಕೊರೋನಾ ವಾರಿಯರ್ಸ್‌ ಪಟ್ಟಿ ನೀಡುವುದಕ್ಕೆ ನ.21ರ ವರೆಗೆ ಕಾಲಾವಕಾಶ ನೀಡಲಾಗಿದ್ದು, ಕಾಲೇಜುಗಳು ಮಂಗಳವಾರದಿಂದ ಪುನರ್‌ ಆರಂಭಗೊಂಡ ಹಿನ್ನೆಲೆಯಲ್ಲಿ ಮತ್ತೊಂದು ಬಾರಿ ಪರಿಶೀಲಿಸಿ ಪಟ್ಟಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಲಸಿಕೆ ನೀಡಲಿದೆ. ಲಸಿಕೆ ಬಂದ ನಂತರ ಅದನ್ನು ವ್ಯವಸ್ಥಿತವಾಗಿ ವಿತರಣೆ ಮಾಡಲು ಬೇಕಾಗುವ ಅಧಿಕಾರಿ, ಸಿಬ್ಬಂದಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದರು.

ಲಸಿಕೆ ವಿತರಣೆಗೆ ಸಿದ್ಧಪಡಿಸಿದ ಪಟ್ಟಿ
ಬಿಬಿಎಂಪಿ ಮತ್ತು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ 8,000
ಡೆಂಟಲ್‌, ಮೆಡಿಕಲ್‌, ಪ್ಯಾರಾ ಮೆಡಿಕಲ್‌ ಸಿಬ್ಬಂದಿ 74,000
ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ 4,350
ಅಂಗನವಾಡಿ, ಆಶಾ ಕಾರ್ಯಕರ್ತೆಯರು 1,800

ಲಸಿಕೆ ಸಂಗ್ರಹಕ್ಕೆ ಮಾಹಿತಿ ಸಂಗ್ರಹ:

ಲಸಿಕೆ ಶೇಖರಿಸಿ ಇಡಲು ಇರುವ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಬಿಬಿಎಂಪಿಯಲ್ಲಿ 175 ಪ್ರಿಡ್ಜ್‌, 150 ಫ್ರೀಜರ್‌ಗಳಿವೆ. ಜತೆಗೆ ಇತರೆ ಇಲಾಖೆಗಳಲ್ಲಿ ಲಸಿಕೆ ಸಂಗ್ರಹಿಸಿಡಲು ಇರುವ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಲಸಿಕೆಯನ್ನು ಬಿಬಿಎಂಪಿ ಮಾತ್ರವಲ್ಲ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಒಟ್ಟಾಗಿ ಸೇರಿ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ವಿವರಿಸಿದರು.
 

click me!