Uttara Kannada: ನಾಲ್ಕು ತಿಂಗಳಿನಿಂದ ಪಿಎಚ್‌ಸಿ ಸಿಬ್ಬಂದಿಗೆ ಸಿಕ್ಕಿಲ್ಲ ವೇತನ

By Gowthami KFirst Published Nov 17, 2022, 9:35 PM IST
Highlights

ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ವೇತನ ಸಿಗದೇ ಕಂಗಾಲಾಗಿರುವ ಪಿಎಚ್‌ಸಿ ಸಿಬ್ಬಂದಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಎದುರು ಜಮಾಯಿಸಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ವರದಿ: ಭರತ್‌ರಾಜ್‌‌ ಕಲ್ಲಡ್ಕ  ಏಷಿಯಾನೆಟ್ ಸುವರ್ಣ ನ್ಯೂಸ್

ಕಾರವಾರ (ನ.17): ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ ಜನರ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುವ ಆರೋಗ್ಯ ಸಿಬ್ಬಂದಿ. ಪ್ರತಿನಿತ್ಯ ಹಳ್ಳಿಗಳಲ್ಲಿ, ಮನೆ ಮನೆಗೆ ತೆರಳಿ ಸೇವೆಯನ್ನು ನೀಡುವ ಮೂಲಕ ಜನಸಾಮಾನ್ಯರ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ಹೀಗೆ ಕಷ್ಟಪಟ್ಟು ಸೇವೆಯನ್ನು ನೀಡುತ್ತಿದ್ದರೂ ಸರ್ಕಾರದಿಂದ ಬರಬೇಕಾದ ವೇತನ ಮಾತ್ರ ಸಮಯಕ್ಕೆ ಸರಿಯಾಗಿ ಕೈ ತಲುಪುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ವೇತನ ಸಿಗದೇ ಕಂಗಾಲಾದ ಆರೋಗ್ಯ ಸಿಬ್ಬಂದಿ ಕೊನೆಗೆ ಅಧಿಕಾರಿಗಳ ಬಳಿ ವೇತನ ನೀಡುವಂತೆ ಮನವಿ ಮಾಡಿದ್ದಾರೆ. ಒಂದೆಡೆ ಕಚೇರಿ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಆರೋಗ್ಯ ಇಲಾಖೆ ಸಿಬ್ಬಂದಿ. ಇನ್ನೊಂದೆಡೆ ಬಿಸಿಲಿನಲ್ಲೇ ನಿಂತು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿರುವ ಶ್ರುಶ್ರೂಷಕಿಯರು. ಮತ್ತೊಂದೆಡೆ ಮಗುವನ್ನು ಹಿಡಿದುಕೊಂಡು ಸಮಸ್ಯೆ ಪರಿಹರಿಸಿಕೊಡುವಂತೆ ಮನವಿ ಮಾಡುತ್ತಿರುವ ಮಹಿಳೆ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಎದುರು. ಡಿಎಚ್‌ಒ ಕಚೇರಿ ಎದುರು ಜಮಾಯಿಸಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿರುವವರು ಈ ಸುರಕ್ಷಾಧಿಕಾರಿಗಳು, ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲೆಯ 11 ತಾಲ್ಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿಗಳಿಗೆ ಅಗಸ್ಟ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಕೆಲಸ ಮಾಡಿಯೂ ವೇತನ ಸಿಗದಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಆರೋಗ್ಯ ಸಿಬ್ಬಂದಿ ಇಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ, ಆರೋಗ್ಯಾಧಿಕಾರಿಗಳು ಬೆಳಿಗ್ಗೆಯಿಂದ ಸಭೆಯಲ್ಲಿ ಬ್ಯುಸಿಯಾಗಿದ್ದ ಹಿನ್ನೆಲೆ ಆರೋಗ್ಯ ಸಿಬ್ಬಂದಿ ಕಚೇರಿ ಹೊರಗೆ ಬಿಸಿಲಿನಲ್ಲೇ ಕಾಯುತ್ತಾ ನಿಲ್ಲುವಂತಾಗಿತ್ತು. ಸಿಬ್ಬಂದಿಯಲ್ಲಿ ಬಹುತೇಕರು ಮಹಿಳೆಯರೇ ಇದ್ದು, ಕುಟುಂಬ ನಿರ್ವಹಣೆಗೆ ವೇತನವನ್ನೇ ನಂಬಿಕೊಂಡಿದ್ದಾರೆ. ಇದೀಗ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದ ಕಾರಣ ಜೀವನ ನಡೆಸುವುದು ಕಷ್ಟಕರವಾಗಿದ್ದು, ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.  

ಇನ್ನು ಜಿಲ್ಲೆಯಾದ್ಯಂತ 11 ತಾಲ್ಲೂಕುಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 155 ಮಂದಿ ಆರೋಗ್ಯ ಸಂರಕ್ಷಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲೂ ಒಬ್ಬೊಬ್ಬರಿಗೆ ಎರಡರಿಂದ ಮೂರು ಕೇಂದ್ರಗಳ ಜವಾಬ್ದಾರಿ ವಹಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಓಡಾಟ ನಡೆಸಬೇಕಾಗಿದೆ. ಆದರೆ ಇಲಾಖೆಯಿಂದ ಓಡಾಟದ ವೆಚ್ಚ ಇತ್ಯಾದಿಗಳು ಇಲ್ಲವಾಗಿದ್ದು, ಇದೀಗ ವೇತನ ಸಹ ಸಮಯಕ್ಕೆ ಸರಿಯಾಗಿ ಸಿಗದಿರುವುದರಿಂದ ಇದನ್ನೇ ನಂಬಿಕೊಂಡಿರುವವರು ಸಂಕಷ್ಟ ಅನುಭವಿಸುವಂತಾಗಿದೆ.

Crime News: ಆಸ್ಪತ್ರೆಯಲ್ಲಿ ನರ್ಸ್‌ ಕಟ್ಟಿಹಾಕಿ ಗ್ಯಾಂಗ್‌ ರೇಪ್‌; ಅಪ್ರಾಪ್ತ ಸೇರಿ ಮೂವರ ಬಂಧನ

ಆರೋಗ್ಯ ಕೇಂದ್ರದ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲೂ ಕೂಡಾ ರಜೆಯನ್ನು ಪಡೆಯದೇ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದರು. ಇಷ್ಟು ಕಷ್ಟಪಟ್ಟು ಕೆಲಸ ಮಾಡುವ ಸಿಬ್ಬಂದಿಗೆ ಮೂರು ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದರಿಂದ ದಿನನಿತ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟಕರವಾಗಿದೆ. ಹೀಗಾಗಿ ವೈದ್ಯರಿಗೆ ನೀಡುವಂತೆ ಪ್ರತೀ ತಿಂಗಳು ವೇತನ ಸಿಗುವಂತೆ ಅಧಿಕಾರಿಗಳು ಪ್ರಯತ್ನಿಸಿ ವ್ಯವಸ್ಥೆ ಮಾಡಿಕೊಡುವಂತೆ ಸಿಬ್ಬಂದಿ ಆಗ್ರಹಿಸಿದ್ದಾರೆ.

ಕಲಬುರಗಿ: ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಸಾವು​..?

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿ ಜನರ ಆರೋಗ್ಯ ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ವೇತನ ಸಿಗದಿರುವುದು ನಿಜಕ್ಕೂ ದುರಂತ. ಈ ನಿಟ್ಟಿನಲ್ಲಿ ಅಧಿಕಾರಿಗಳು ಇತ್ತ ಗಮನಹರಿಸಿ ಆರೋಗ್ಯ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ.

click me!