ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಎರಡು ಮೂರು ದಶಕಗಳಿಂದ ಬೇಡಿಕೆಗಳು ಕೇಳಿಬರುತ್ತಿದೆ. ಇದೀಗ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಕುಣಬಿ ಸಮುದಾಯ ನಿರ್ಧರಿಸಿದೆ.
ಭರತ್‌ರಾಜ್ ಕಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಸೆ.23): ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಎರಡು ಮೂರು ದಶಕಗಳಿಂದ ಬೇಡಿಕೆಗಳು ಕೇಳಿಬರುತ್ತಿದೆ. ಇದೀಗ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಕುಣಬಿ ಸಮುದಾಯ ನಿರ್ಧರಿಸಿದ್ದು, ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕೆಂದು ಭಾರೀ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೇ, ಸರಕಾರಕ್ಕೆ 15 ದಿನಗಳ ಗಡುವು ನೀಡುವ ಮೂಲಕ ಮುಂದಿನ ಪರಿಣಾಮಗಳನ್ನು ಎದುರಿಸಲು ಎಚ್ಚರಿಸಲಿದ್ದಾರೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
undefined
ಹೌದು! ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ, ಕುಣಬಿ, ಗೌಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಎರಡು- ಮೂರು ದಶಕಗಳಿಂದ ಕೇಳಿ ಬರುತ್ತಿರುವ ಕೂಗು. ಅದರಲ್ಲೂ ಕುಣಬಿ ಸಮಾಜ ತಮ್ಮನ್ನು 2ಎ ಪ್ರವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಸಮಯಗಳಿಂದ ರಾಜ್ಯ ಹಾಗೂ ಕೇಂದ್ರ ಸರಕಾರದ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಸಂಸದ ಅನಂತ ಕುಮಾರ್ ಹೆಗಡೆ, ಮಾಜಿ ಸಚಿವ ಆರ್. ವಿ. ದೇಶ್‌ಪಾಂಡೆಯವರ ಮುಂದೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿ ಕೇಂದ್ರ ಸರಕಾರದ ಗಮನ ಸೆಳೆಯಲು ಆಗ್ರಹಿಸಿತ್ತು.
ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಬದ್ಧ: ಸುಧಾಕರ್
ಆದರೆ, ದಶಕಗಳಿಂದಲೂ ಸಮುದಾಯಕ್ಕೆ ಆಶ್ವಾಸನೆ ದೊರೆಯುತ್ತಿದೆ ಹೊರತು ಈ ಕುರಿತ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ಈ ಹಿನ್ನೆಲೆ ಇದೀಗ ಕುಣಬಿ ಸಮುದಾಯ ಭಾರೀ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೇ, ರಾಜ್ಯ ಸರಕಾರಕ್ಕೆ 15 ದಿನಗಳ ಗಡುವು ನೀಡಿರುವ ಸಮುದಾಯ, ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಕುಣಬಿ ಸಮುದಾಯದ ಮುಖಂಡರು ಹೇಳುವಂತೆ, ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕಳೆದ ಮೂರು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ.
ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೋರಾಟವನ್ನು ಕಡೆಗಣಿಸುತ್ತಲೇ ಬಂದಿದೆ. ಹೀಗಾಗಿ ಜಿಲ್ಲೆಯ ಕುಣಬಿ ಸಮುದಾಯದ 40 ಸಾವಿರಕ್ಕೂ ಅಧಿಕ ಜನರು ಹೊರಾಟಕ್ಕೆ ಸಿದ್ದರಾಗಿದ್ದೇವೆ ಎಂದಿದ್ದಾರೆ. ಅಂದಹಾಗೆ, ಉತ್ತರಕನ್ನಡ ಜಿಲ್ಲೆಯಲ್ಲಿರುವ ಕುಣಬಿ ಸಮುದಾಯದವರು ಮೂಲತಃ ಗೋವಾ ರಾಜ್ಯದವರು. ಪೋರ್ಚಗೀಸರ ಕಾಲದಲ್ಲಿ ಮತಾಂತರಕ್ಕೆ ಹೆದರಿ ಜೊಯಿಡಾ ತಾಲೂಕಿನ ಅರಣ್ಯ ಪ್ರದೇಶಕ್ಕೆ ಬಂದು ಇವರು ನೆಲೆಸಿದ್ದರು. ಗೋವಾದಲ್ಲಿರುವ ಕುಣಬಿ ಸಮುದಾಯಕ್ಕೆ 2007ರಲ್ಲೇ ಪರಿಶಿಷ್ಟ ಜಾತಿಯ ಮಾನ್ಯತೆ ನೀಡಲಾಗಿದೆ.
ED NIA raid PFI; ಶಿರಸಿಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿದ್ದ ಎಸ್‌ಡಿಪಿಐ ಮುಖಂಡನ ಬಂಧನ
ಇನ್ನು ಕರ್ನಾಟಕದಲ್ಲಿರುವ ಕುಣಬಿ ಸಮುದಾಯದ ಬೇಡಿಕೆಯನ್ನು ರಾಜ್ಯ, ಕೇಂದ್ರ ಸರಕಾರಗಳು ನಿರ್ಲಕ್ಷಿಸುತ್ತಿವೆ ಎಂದು ಕುಣಬಿ ಸಮಾಜದ ಮುಖಂಡರು ದೂರಿದ್ದಾರೆ. ಒಟ್ಟಿನಲ್ಲಿ ಬಹಳಷ್ಟು ಹಿಂದುಳಿದಿರುವ ಕುಣಬಿ ಸಮಾಜ ತಮ್ಮ ಸಮುದಾಯದ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡದ ಕೋಟಾವನ್ನು ಕೇಳಿಕೊಳ್ಳುತ್ತಿದೆ. ಜನಪ್ರತಿನಿಧಿಗಳು ಕೂಡಾ ಪ್ರತೀ ಬಾರಿ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರದ ಗಮನ ತರುವುದಾಗಿ ಆಶ್ವಾಸನೆ ನೀಡುತ್ತಲೇ ಸಮಾಧಾನಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಾದ್ರೂ ಈ ಸಮುದಾಯದ ಬೇಡಿಕೆ ಈಡೇರಲಿದೆಯೇ ಅಥವಾ ಈ ಸಮುದಾಯ ಹೋರಾಟಕ್ಕಾಗಿ ಬೀದಿಗಿಳಿಯಲಿದೆಯೇ ಎಂದು ಕಾದು ನೋಡಬೇಕಷ್ಟೇ.