Uttara Kannada: ಸತೀಶ್ ಸೈಲ್ ಆರೋಪ ಅಲ್ಲಗಳೆದು ಜೀವ ಬೆದರಿಕೆ ಇದೆಯೆಂದ ಶಾಸಕಿ ರೂಪಾಲಿ ನಾಯ್ಕ್‌

By Suvarna News  |  First Published Mar 8, 2023, 10:15 PM IST

ಉತ್ತರಕನ್ನಡ ಜಿಲ್ಲೆಯ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಇದೀಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಮಾಜಿ ಶಾಸಕ ಸತೀಶ್ ಸೈಲ್ ಆರೋಪವನ್ನು ಮಾಧ್ಯಮದ ಮುಂದೆ ಅಲ್ಲಗಳೆದ ಹಾಲಿ ಶಾಸಕಿ ಬಳಿಕ ತನಗೆ ಜೀವ ಬೆದರಿಕೆ ಇರೋದಾಗಿ ತಿಳಿಸಿದ್ದಾರೆ.


ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್  

ಕಾರವಾರ (ಮಾ.8): ಉತ್ತರಕನ್ನಡ ಜಿಲ್ಲೆಯ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಇದೀಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಮಾಜಿ ಶಾಸಕ ಸತೀಶ್ ಸೈಲ್ ಆರೋಪವನ್ನು ಮಾಧ್ಯಮದ ಮುಂದೆ ಅಲ್ಲಗಳೆದ ಹಾಲಿ ಶಾಸಕಿ ಬಳಿಕ ತನಗೆ ಜೀವ ಬೆದರಿಕೆ ಇರೋದಾಗಿ ತಿಳಿಸಿದ್ದಾರೆ. ತನ್ನನ್ನು ಬೆದರಿಸುವ ಹಲವು ಪ್ರಯತ್ನಗಳು ಕೂಡಾ ನಡೆದಿವೆ ಎಂದಿರುವ ಶಾಸಕಿ ಈಗಾಗಲೇ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ. ಮೊನ್ನೆಯಷ್ಟೇ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಕಾರವಾರದ ಜಿಲ್ಲಾ ಪಂಚಾಯತ್‌ನಲ್ಲಿ ಜಟಾಪಟಿ ನಡೆದಿತ್ತು. ಇಬ್ಬರು ಕೂಡಾ ಒಬ್ಬೊಬ್ಬರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಲ್ಲದೇ ಕ್ರಮಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕ್ರಮಕ್ಕಾಗಿ ಒತ್ತಾಯಿಸಿದ್ದರು.

Latest Videos

undefined

ಈ ಪ್ರಕರಣ ಸಂಬಂಧಿಸಿ ಇಂದು ಮತ್ತೆ ಸುದ್ದಿಗೋಷ್ಠಿ ನಡೆಸಿದ ಶಾಸಕಿ ರೂಪಾಲಿ ನಾಯ್ಕ್, ಮಾಜಿ ಶಾಸಕ ಸತೀಶ್ ಸೈಲ್, ಸಾಮಾಜಿಕ ಹೋರಾಟಗಾರ ಮಾಧವ ನಾಯ್ಕ್ ಹಾಗೂ ಸ್ಥಳೀಯ ಪತ್ರಿಕೆಯೊಂದರ ಮೇಲೆ ಹರಿಹಾಯ್ದರು. ನಂತರ ಹಿಂದೆಯಿಂದಲೂ ತನಗೆ ಜೀವ ಬೆದರಿಕೆ ಇರೋದಾಗಿ ತಿಳಿಸಿದ್ದಾರೆ. ಕೆಲವು ಅಪರಿಚಿತರು ತಾನು ಬರುವ ಸಮಯದಲ್ಲೇ ಮನೆ ಮುಂದಿರುವ ಬೀದಿದೀಪ ಆರಿಸಿ, ಬೀದಿ ದೀಪ ತೆಗೆದು ಹೆದರಿಸಲೆತ್ನಿಸುತ್ತಾರೆ. ಹಳೇ ಟ್ರಕ್ ಮೂಲಕ ನನ್ನ ವಾಹನಕ್ಕೆ ಢಿಕ್ಕಿ ಹೊಡೆಯಲು ಯತ್ನಗಳು ನಡೆಯುತ್ತದೆ. ನನ್ನ ಮಗ ಮತ್ತು ಸಂಬಂಧಿಗಳ‌ನ್ನು ಕಿಡ್ನ್ಯಾಪ್ ಮಾಡುವ ಪ್ರಯತ್ನಗಳೂ ನಡೆದಿವೆ. ಅಪರಿಚಿತರು ಕಾರಿನಲ್ಲಿ ಹಿಂದೆ ಮುಂದೆ ಫಾಲೋ ಮಾಡ್ತಾರೆ. ಈ ಹಿಂದೆಯೋ ಮಾಡಿದ್ರು, ಈಗಲೂ ಮಾಡ್ತಿದ್ದಾರೆ, ಆದ್ರೆ, ಯಾರೇನೆಂದು ಗೊತ್ತಾಗುತ್ತಿಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ್ ತಿಳಿಸಿದ್ದಾರೆ.

ಇನ್ನು ನನಗೆ ಅನೇಕ ವಿರೋಧಿಗಳು ಇದ್ದಾರೆ, ತಮಗೆ ಅಧಿಕಾರ ಸಿಕ್ಕಿಲ್ಲ ಎಂದು ಹತಾಶರಾದವರೂ ಇದ್ದಾರೆ. ಮಹಿಳೆ ಮುಂದೆ ಬರುವುದನ್ನು ನೋಡಲಾಗದವರು, ಅಭಿವೃದ್ಧಿ ಸಹಿಸದೇ ಇರುವವರು ಇದ್ದಾರೆ.‌ ಈ ಬಗ್ಗೆ ಹಿಂದಿನ ಎಸ್ಪಿ ಡಾ.‌ಸುಮನಾ‌ ಪೆನ್ನೇಕರ್ ಅವರಿಗೆ ಮೌಖಿಕವಾಗಿ ತಿಳಿಸಿದ್ದೆ. ಪ್ರಸ್ತುತ ಎಸ್ಪಿ ವಿಷ್ಣುವರ್ಧನ್ ಅವರಿಗೂ ತಿಳಿಸಿದ್ದು, ಭದ್ರತೆ ನೀಡಿದ್ದಾರೆ. ಜೀವ ಬೆದರಿಕೆ ಸಂಬಂಧಿಸಿ ಮತ್ತೆ ದೂರು ಕೊಡುತ್ತಿದ್ದೇನೆ. ನನ್ನನ್ನು ಬೆದರಿಸಿದ್ರೆ ದೂರ ಸರಿಯುತ್ತೇನೆ ಎಂದು ಅಂದುಕೊಂಡಿದ್ದಾರೆ.

ಕಾರವಾರದಲ್ಲಿ ಹಾಲಿ-ಮಾಜಿ ಶಾಸಕರ ಜಟಾಪಟಿ, ರೂಪಾಲಿ ವಿರುದ್ಧ ಸತೀಶ್ ಸೈಲ್ ಹಲ್ಲೆ ಆರೋಪ

ನಾನು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯುವುದೂ ಇಲ್ಲ..ಅವರು ಸಾಯಿಸಿದ್ರೂ ಸಾಯುವುದೇ. ಹಾರ್ಟ್ ಅಟ್ಯಾಕ್ ಬಂದ್ರೂ ಸಾಯುವುದೇ. ಎಲ್ಲರೂ ಸಾಯುವುದು ಒಂದೇ ಸಲ, ಎಲ್ಲರಿಗೂ ಸಾವು ಇದ್ದದ್ದೇ.‌ ನಾನು ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡಿ ಸಾಯುತ್ತೇನೆ ಎಂದು ಶಾಸಕಿ ರೂಪಾಲಿ ನಾಯ್ಕ್ ಹೇಳಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಯಿಸಿರುವ ಎಂಎಲ್‌ಸಿ ಗಣಪತಿ ಉಳ್ವೇಕರ್, ಶಾಸಕಿಯೋರ್ವರಿಗೆ ಈ ರೀತಿ ಸಮಸ್ಯೆ ನೀಡುವುದು ಸರಿಯಲ್ಲ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕಮಿಷನ್ ಆರೋಪ; ಮಾಧವ್ ನಾಯ್ಕ್ ವಿರುದ್ಧ ₹5 ಕೋಟಿ ಮಾನನಷ್ಟ ಕೇಸ್ ದಾಖಲಿಸಿದ

ಒಟ್ಟಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಜಟಾಪಟಿಯ ಬಳಿಕ ಇದೀಗ ಶಾಸಕಿ ಸಿಡಿಸಿರುವ ಬಾಂಬ್ ಹಲವು ಪ್ರಶ್ನೆಗಳನ್ನು ಎತ್ತಿದೆ. ಪಕ್ಷದ ಟಿಕೆಟ್ ಆಕಾಂಕ್ಷಿ ಮುಖಂಡರಿಂದಲೇ ಈ ಕೃತ್ಯಗಳು ನಡೆಯುತ್ತಿದೆಯೇ ಅಥವಾ ವಿರೋಧ ಪಕ್ಷದ ಮುಖಂಡರು ಈ ಕೃತ್ಯಗಳನ್ನು ಎಸಗುತ್ತಿದ್ದಾರೆಯೇ ಎಂಬ ಗುಮಾನಿಗಳನ್ನು ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ. 

click me!