ಉತ್ತರಕನ್ನಡ: ಬೀದಿ ನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ

Published : Sep 27, 2022, 10:08 PM IST
ಉತ್ತರಕನ್ನಡ: ಬೀದಿ ನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ

ಸಾರಾಂಶ

ಒಂದೇ ವರ್ಷದಲ್ಲೇ ಬರೋಬ್ಬರಿ ಆರು ಸಾವಿರಕ್ಕೂ ಅಧಿಕ ಮಂದಿಗೆ ಬೀದಿನಾಯಿಗಳು ಕಚ್ಚಿವೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾದ ಉತ್ತರಕನ್ನಡ ಜಿಲ್ಲಾಡಳಿತ

ಭರತ್‌ ರಾಜ್ ಕಲ್ಲಡ್ಕ‌, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಸೆ. 27):  ಉತ್ತರಕನ್ನಡ ಜಿಲ್ಲೆಯ ಹಲವೆಡೆ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಅಲ್ಲಲ್ಲಿ ಗುಂಪು ಗುಂಪಾಗಿ ತಿರುಗುವ ಬೀದಿ ನಾಯಿಗಳು ದಾರಿಹೋಕರ ಮೇಲೆ ಎರಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಒಂದೇ ವರ್ಷದಲ್ಲೇ ಬರೋಬ್ಬರಿ ಆರು ಸಾವಿರಕ್ಕೂ ಅಧಿಕ ಮಂದಿಗೆ ಬೀದಿನಾಯಿಗಳು ಕಚ್ಚಿವೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಉತ್ತರಕನ್ನಡ ಜಿಲ್ಲಾಡಳಿತ ಮುಂದಾಗಿದ್ದು, ಜತೆಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸಲು ಯೋಜನೆ ರೂಪಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

ಉತ್ತರಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ, ಹಳಿಯಾಳ ಮುಂತಾದೆಡೆ ಜನರು ರಸ್ತೆಯಲ್ಲಿ ಓಡಾಡೋದಕ್ಕೆ ಆತಂಕ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಅಲ್ಲಲ್ಲಿ ಗುಂಪು ಗುಂಪಾಗಿ ಕಂಡು ಬರುವ ಬೀದಿ ನಾಯಿಗಳು ಯಾವಾಗ ಮೈಮೇಲೆ ಎರಗುತ್ತವೆಯೋ ಅನ್ನೋ ಆತಂಕದಲ್ಲೇ ಜನರು ತಿರುಗಾಡುವಂತಾಗಿರೋದ್ರಿಂದ ಶಾಲಾ ಮಕ್ಕಳಂತೂ ಭಯದಲ್ಲೇ ಓಡಾಡಬೇಕಿದೆ. ಒಂದು ವರ್ಷದ ಅವಧಿಯಲ್ಲೇ ಜಿಲ್ಲೆಯಲ್ಲಿ ಬರೋಬ್ಬರಿ 6,500ಕ್ಕೂ ಅಧಿಕ ಮಂದಿಗೆ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಕಚ್ಚಿರುವ ಪ್ರಕರಣಗಳು ವರದಿಯಾಗಿರೋದು ಜಿಲ್ಲೆಯಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಜಿಲ್ಲೆಯ ಆರೋಗ್ಯ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆಯೊಂದಿಗೆ ಸಭೆಯನ್ನು ನಡೆಸಲಾಗಿದ್ದು, ನಾಯಿ ಕಡಿತಕ್ಕೊಳಗಾದವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಅಲ್ಲದೇ, ಆರೋಗ್ಯ ಇಲಾಖೆಯಿಂದ ರೇಬಿಸ್ ವ್ಯಾಕ್ಸಿನ್‌ಗಳನ್ನ ಸಂಗ್ರಹಿಸಿಡಲಾಗಿದ್ದು, ಮುಂಜಾಗ್ರತಾ ಡೋಸ್‌ಗಳನ್ನು ಸಹ ಅಗತ್ಯವಿರುವೆಡೆ ಪೂರೈಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರಮುಖವಾಗಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕೈಗೊಳ್ಳಲು ಸೂಚಿಸಲಾಗಿದ್ದು, ಪ್ರಾಣಿದಯಾ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್ ಮಾಹಿತಿ ನೀಡಿದ್ದಾರೆ.

ಸಮುದ್ರ ಕೊರೆತ, ಕಲ್ಲಿನ‌ ತಡೆಗೋಡೆಯಿಂದ ಡೇಂಜರ್ ತಪ್ಪಲ್ಲ ಎಂದ ವಿಜ್ಞಾನಿಗಳು

ಅಂದಹಾಗೆ, ಬೀದಿ ನಾಯಿಗಳ ನಿಯಂತ್ರಣದ ಜತೆಗೆ ಶಾಲೆಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬೀದಿ ನಾಯಿಗಳಿಂದ ಯಾವ ರೀತಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು ಎನ್ನುವ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮಿಷನ್ ರೇಬಿಸ್ ಎನ್ನುವ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಇದರೊಂದಿಗೆ ಬೀದಿನಾಯಿಗಳ ಸಂತತಿಯನ್ನು ಕೂಡಾ ಕಡಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಬೀದಿ ನಾಯಿಗಳ ನಿಯಂತ್ರಣದ ಹೆಸರಿನಲ್ಲಿ ಮೂಕ ಪ್ರಾಣಿಗಳನ್ನು ಶೋಷಿಸಲಾಗುತ್ತಿದ್ದು, ಕೆಲವು ದಿನಗಳ ಹಿಂದೆ ಹಳಿಯಾಳದಲ್ಲಿ ಬೀದಿನಾಯಿಗಳನ್ನ ಹಿಡಿದು ಅರಣ್ಯಕ್ಕೆ ತೆಗೆದುಕೊಂಡು ಬಿಡಲಾಗಿತ್ತು. ಇದು ಒಂದೆಡೆ ಬೀದಿ ನಾಯಿಗಳಿಗೆ ಅಪಾಯಕ್ಕೆ ಎಡೆಮಾಡಿಕೊಡುತ್ತಿರುವುದರ ಜತೆಗೆ ಕಾಡು ಪ್ರಾಣಿಗಳಿಗೂ ಸಹ ಬೀದಿನಾಯಿಗಳಿಂದ ರೋಗ ಹರಡುವ ಆತಂಕವಿದೆ. ಹೀಗಾಗಿ ಸರಿಯಾದ ಕ್ರಮ ಅನುಸರಿಸಿ ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಅನ್ನೋದು ಪ್ರಾಣಿ ಪ್ರೇಮಿ ಸುಭಾಶ್‌ಚಂದ್ರ ಅವರ ಅಭಿಪ್ರಾಯವಾಗಿದೆ. 

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ಜಿಲ್ಲಾಡಳಿತವೇನೋ ಕಾರ್ಯಕ್ರಮ ರೂಪಿಸಿದೆ. ಆದ್ರೆ, ಸಂತಾನಹರಣದ ಹೆಸರಿನಲ್ಲಿ ಮೂಕಪ್ರಾಣಿಗಳನ್ನು ಹಿಂಸಿಸುತ್ತಿರುವುದು ಪ್ರಾಣಿಪ್ರೇಮಿಗಳ ಕಣ್ಣು ಕೆಂಪಾಗಿಸಿದೆ.‌ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಾದ್ರೂ ಸೂಕ್ತ ಕ್ರಮದೊಂದಿಗೆ ಬೀದಿ ನಾಯಿಗಳ ಉಪಟಳವನ್ನು ಕಂಟ್ರೋಲ್ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಷ್ಟೇ.
 

PREV
Read more Articles on
click me!

Recommended Stories

ಕೆಕೆಆರ್‌ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್ ಸ್ಥಿತಿ ಗಂಭೀರ!
ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ